ಕಳಸ ಭಾಗದಲ್ಲಿ BSNL ನೆಟ್‌ವರ್ಕ್ ಸಮಸ್ಯೆ, ಗುಡ್ಡ ಏರಿದ ಜನರು
ಚಿಕ್ಕಮಗಳೂರು, ನವೆಂಬರ್, 08: ಕಳಸ ತಾಲೂಕಿನಾದ್ಯಂತ ಬಿಎಸ್‌ಎನ್‌ಎಲ್ ನೆಟ್‍ವರ್ಕ್ ಸಮಸ್ಯೆ ತೀವ್ರಗೊಂಡಿದೆ. ವಿದ್ಯುತ್ ಕೈಕೊಟ್ಟ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್ ನೆಟ್‍ವರ್ಕ್ ಕಡಿತಗೊಳ್ಳುತ್ತಿದ್ದು, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳಸ ತಾಲೂಕಿನ ಸಂಸೆ ಗ್ರಾಮದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ನೋಂದಣಿ ಶಿಬಿರ ನಡೆದಿದೆ. ಈ ವೇಳೆ ವಿದ್ಯುತ್ ಕಡಿತಗೊಂಡಿದ್ದರಿಂದ ಸಮೀಪದ ಗುಡ್ಡ ಏರಿ ನೋಂದಣಿ ಶಿಬಿರ ನಡೆಸಿದ ಘಟನೆ ವರದಿಯಾಗಿದೆ.
ಸಂಸೆ ಗ್ರಾಮದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಡ್ ನೋಂದಣಿಗೆ ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ಆಗಮಿಸಿದ್ದರು. ನೋಂದಣಿ ವೇಳೆ ವಿದ್ಯುತ್ ಸ್ಥಗಿತಗೊಂಡಿದ್ದರಿಂದ ಗ್ರಾಮದಲ್ಲಿದ್ದ ಬಿಎಸ್‌ಎನ್‌ಎಲ್ ಟವರ್‌ನ ನೆಟ್‍ವರ್ಕ್ ಕಡಿತಗೊಂಡಿದ್ದರಿಂದ ಆಯುಷ್ಮಾನ್ ಕಾರ್ಡ್ ನೋಂದಣಿ ಕೆಲಸವೂ ಸ್ಥಗಿತಗೊಂಡಿದೆ.
ಕೆಲ ಹೊತ್ತು ವಿದ್ಯುತ್‍ಗಾಗಿ ಕಾದ ಶಿಬಿರದ ಸಿಬ್ಬಂದಿ ಹಾಗೂ ಸಾರ್ವಜನಿಕರು ವಿದ್ಯುತ್ ಪೂರೈಕೆ ತಡವಾಗುವುದರ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಈ ವೇಳೆ ಬೇರೆ ದಾರಿ ಕಾಣದೇ ನೋಂದಣಿಗೆ ಬಂದಿದ್ದವರು ಸಮೀಪದ ಗುಡ್ಡ ಏರಿದರೆ ಕಳಸ ಪಟ್ಟಣದ ಟವರ್ ನೆಟ್‍ವರ್ಕ್ ಸಿಗುವ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ತಡ ಮಾಡದ ಸಿಬ್ಬಂದಿ ಸಮೀಪದ ಗುಡ್ಡ ಏರಿ ಪರಿಶೀಲಿಸಿದಾಗ ಕಳಸ ಪಟ್ಟಣದ ಬಿಎಸ್‌ಎನ್‌ಎಲ್ ಟವರ್‌ಗಳ ನೆಟ್‍ವರ್ಕ್ ಸಿಕ್ಕಿದೆ. ಈ ವೇಳೆ ಸಿಬ್ಬಂದಿ ಗುಡ್ಡದಲ್ಲೇ ಲ್ಯಾಪ್‍ಟಾಪ್ ಕೊಂಡೊಯ್ದು ಆಯುಷ್ಮಾನ್ ಕಾರ್ಡ್ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಬಿಎಸ್‌ಎನ್‌ಎಲ್ ನೆಟ್‍ವರ್ಕ್ ಸಮಸ್ಯೆ ತೀವ್ರವಾಗಿದ್ದು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಭಾರಿ ಸಮಸ್ಯೆ ಆಗುತ್ತಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೊರೊನಾ ಕಾಲದಲ್ಲೂ ನೆಟ್‌ವರ್ಕ್ ಸಮಸ್ಯೆ
ಆನ್‌ಲೈನ್ ಶಿಕ್ಷಣ ಮುನ್ನೆಲೆಗೆ ಬಂದಾಗ ಮಲೆನಾಡಿನ ಶಾಲಾ ಮಕ್ಕಳು ವಿದ್ಯುತ್, ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಕಲಿಕೆಯಿಂದ ಸಂಪೂರ್ಣ ವಂಚಿತರಾಗುವ ಆತಂಕವನ್ನು ಎದುರಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಕನಸಿನ ಡಿಜಿಟಲ್ ಯುಗದಲ್ಲಿ ದೇಶ 5ಜಿ ಕಡೆ ಸಾಗುತ್ತಿದ್ದರೂ ಮಲೆನಾಡು ಭಾಗದ ವಸತಿ ಪ್ರದೇಶಗಳಲ್ಲಿ ಒಂದು ಫೋನ್ ಕರೆ ಮಾಡಲೂ ಜನರು ಪರಿತಪಿಸುತ್ತಿದ್ದಾರೆ. ಇನ್ನು ಕೊರೊನಾ ಸಮಯದಲ್ಲಿ ಶಾಲಾ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ನಡೆಸುವ ಬಗ್ಗೆ ಸರ್ಕಾರ ಮುಂದಾಗಿತ್ತು. ಆದರೆ ಕಳಸ ವ್ಯಾಪ್ತಿಯಲ್ಲಿ ತೀವ್ರವಾಗಿರುವ ವಿದ್ಯುತ್ ಮತ್ತು ನೆಟ್‌ವರ್ಕ್ ಸಮಸ್ಯೆಯಿಂದ ಮಕ್ಕಳಿಗೆ ಶಿಕ್ಷಣ ಮರೀಚಿಕೆ ಆಗಿತ್ತು. ನೆಟ್‌ವರ್ಕ್ ಸಮಸ್ಯೆಯಿಂದಾಗಿ ಪೋಷಕರು ಆತಂಕಕ್ಕಿಡಾಗಿದ್ದರು.
ಗುಡ್ಡದಲ್ಲಿ ಕಲಿಯುವ ಪರಿಸ್ಥಿತಿ ನಿರ್ಮಾಣ
ಅನಿವಾರ್ಯವಾಗಿ ಶಾಲೆಯ ಫೀಸ್ ಕಟ್ಟಿ ನೆಟ್‌ವರ್ಕ್ ಎಲ್ಲಿ ಸಿಗುತ್ತದೆಯೋ ಅಷ್ಟು ಎತ್ತರಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಿ ಕೂರಿಸಿ ಪಾಠ ಕಲಿಯುವಂತೆ ಮಾಡುತ್ತಿದ್ದರು. ಶಾಲೆಯಲ್ಲಿ ಕೊಟ್ಟ ತರಗತಿಗಳ ಸಮಯವಕಾಶಕ್ಕೆ ಕಾಯುವ ವಿದ್ಯಾರ್ಥಿಗಳು ಬೆಳಗ್ಗೆಯಿಂದ ಸಂಜೆಯವರೆಗೂ ಕಾಡಲ್ಲಿ ಕುಳಿತುಕೊಳ್ಳಬೇಕಾಗಿತ್ತು.

ಇನ್ನು ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳ್‌ಗಲ್, ಬಿಳಗಲ್, ಜಾಂಬ್ಲೆ, ನೆಲ್ಲಿ ಬೀಡು, ಕತ್ತಡ್ಕ, ಕೋನೆಮನೆ, ಕೆಂಗನಕೊಂಡ, ಬಸ್ರಿಕಲ್, ಕುಚಗೇರಿ, ಕುದುರೆಮುಖ, ವಿನೋಭನಗರ, ಜೋಗಿ ಕುಂಬ್ರಿ, ಎಸ್ ಕೆ ಮೇಗಲ್, ಕಾರ್ಲೆ, ಕಲ್ಕೋಡು, ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲಿಗೆ, ಕ್ಯಾತನಮಕ್ಕಿ, ಚಿಕ್ಕನಕುಡಿಗೆ ಹೀಗೆ ಸುಮಾರು 350ಕ್ಕೂ ಹೆಚ್ಚು ಕುಟುಂಬಗಳಿಗೆ ಪ್ರತಿ ದಿನ ನೆಟ್‌ವರ್ಕ್‌ನದ್ದೇ ಸಮಸ್ಯೆಯಾಗಿತ್ತು. ಏನಾದರೂ ತೊಂದರೆಗಳು, ಘಟನೆಗಳು ಉಂಟಾದಲ್ಲಿ ಗ್ರಾಮಸ್ಥರು ತೀರ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುವಂತಾಗಿತ್ತು.
ಕಳಸ ಹೋಬಳಿ ಹಳ್ಳಿಗಾಡಿನ ಪ್ರದೇಶಗಳಾದ ಸಂಸೆ, ಬಲಿಗೆ, ಕಾರ್ಲೆ, ಕಳಕ್ಕೋಡು ಮುಂತಾದ ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆ ತೀವ್ರವಾಗಿದೆ. ಇಲ್ಲಿನ ವಿದ್ಯಾರ್ಥಿಗಳು ಈ ಅವ್ಯವಸ್ಥೆಯಿಂದ ಆತಂಕಕ್ಕೆ ಒಳಗಾಗಿದ್ದರು. ಮಕ್ಕಳಿಗೆ ಮೊಬೈಲ್ ಕೊಡಿಸಲು ಸಹ ಅಶಕ್ತರಾಗಿರುವ ಇಲ್ಲಿನ ಜನತೆ ಇಂತಹ ಅಸಂಬದ್ಧ ವ್ಯವಸ್ಥೆಯಿಂದ ಕಂಗೆಟ್ಟಿದ್ದರು. ಗ್ರಾಮೀಣ ಮಟ್ಟದಲ್ಲಿ ಬಿಎಸ್‌ಎನ್‌ಎಲ್ ಟವರ್‌ಗಳು ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಅಲ್ಲಿನ ಸ್ಥಳೀಯರು ಹಿಂದಿನಿಂದಲೂ ಆಗ್ರಹಿಸುತ್ತಲೇ ಇದ್ದಾರೆ. ಆದರೆ ಇದುವರೆಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.












Click it and Unblock the Notifications