ಚಿಕ್ಕಮಗಳೂರು; ವಂಚನೆ ಬಯಲು, ಬ್ಯಾಂಕ್ ಲಾಕರ್‌ನಲ್ಲಿ ನಕಲಿ ಚಿನ್ನ!
ಚಿಕ್ಕಮಗಳೂರು, ನವೆಂಬರ್ 30: ಬ್ಯಾಂಕ್ ಸಿಬ್ಬಂದಿಗಳೇ ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ಐ.ಜಿ.ರಸ್ತೆಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಶಾಖೆಯಲ್ಲಿ ಈ ವಂಚನೆ ನಡೆದಿದ್ದು, ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾಗಿದೆ.
ಬ್ಯಾಂಕ್ ಮ್ಯಾನೇಜರ್ ಸಂದೀಪ್ ಕೊಲ್ಲೂರಿ, ಪ್ರಶಾಂತ್, ನಾರಾಯಣ ಸ್ವಾಮಿ, ಲಾವಣ್ಯ, ಶ್ವೇತಾ ವಂಚನೆ ಎಸಗಿದ ಆರೋಪಿಗಳು. ಗ್ರಾಹಕರು ಬ್ಯಾಂಕ್ನಲ್ಲಿಟ್ಟಿದ್ದ ಚಿನ್ನ, ಎಫ್ಡಿ ಹಣವನ್ನು ಬ್ಯಾಂಕ್ ಸಿಬ್ಬಂದಿಗಳೆ ದುರುಪಯೋಗಪಡಿಸಿಕೊಂಡಿದ್ದಾರೆ.

ನಕಲಿ ಚಿನ್ನ ಇಟ್ಟ ಆರೋಪಿಗಳು; ಆರೋಪಿಗಳು ಗ್ರಾಹಕರ ಚಿನ್ನವನ್ನು ಮಾರಾಟ ಮಾಡಿ ನಕಲಿ ಚಿನ್ನವನ್ನು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದಾರೆ. ಬೆಂಗಳೂರು ಮುಖ್ಯ ಶಾಖೆ ಅಧಿಕಾರಿಗಳ ಪರಿಶೀಲನೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
141 ಚಿನ್ನದ ಪ್ಯಾಕೆಟ್ಗಳ ಪೈಕಿ 140 ಪ್ಯಾಕೆಟ್ಗಳಲ್ಲಿ ನಕಲಿ ಚಿನ್ನ ಪತ್ತೆಯಾಗಿವೆ. ಬ್ಯಾಂಕ್ ಆಡಿಟ್ನಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿರುವುದು ಬಹಿರಂಗಗೊಂಡಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಬೆಂಗಳೂರು ಶಾಖೆಯ ಮ್ಯಾನೇಜರ್ ಆರೋಪಿಗಳ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದು, ಆರೋಪಿಗಳು ಬ್ಯಾಂಕಿಗೆ ಎರಡು ರೀತಿಯಲ್ಲಿ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಮೊದಲೇ ನಕಲಿ ಚಿನ್ನವನ್ನು ತಂದು ಇಟ್ಟುಕೊಂಡಿದ್ದರು.
ಆರೋಪಿಗಳು ಗ್ರಾಹಕರಿಂದ ಅಸಲಿ ಚಿನ್ನವನ್ನು ಪಡೆದು ಸಾಲ ನೀಡುತ್ತಿದ್ದರು. ಆದರೆ ಲಾಕರ್‌ನಲ್ಲಿ ಇಡುವಾಗ ಅಸಲಿ ಚಿನ್ನದ ಬದಲು ನಕಲಿ ಚಿನ್ನವನ್ನು ಇಡುತ್ತಿದ್ದರು. ಬಳಿಕ ಅಸಲಿ ಚಿನ್ನವನ್ನು ಬೇರೆ ಕಡೆ ಮಾರುತ್ತಿದ್ದರು. ಇದೊಂದು ರೀತಿ ವಂಚನೆಯಾದರೇ ಮತ್ತೊಂದು ರೀತಿಯ ವಂಚನೆ ಇನ್ನೂ ರೋಚಕವಾಗಿದೆ.
ಬ್ಯಾಂಕ್ ಮ್ಯಾನೇಜರ್ ಸಂದೀಪ್ ಮತ್ತು ಸಿಬ್ಬಂದಿ ನಾರಾಯಣ ಸ್ವಾಮಿ ವಂಚನೆ ಪ್ರಕರಣದ ಪ್ರಮುಖ ಆರೋಪಿಗಳು. ಮ್ಯಾನೇಜರ್ ಸಂದೀಪ್ ಪತ್ನಿ ಶ್ವೇತಾ ಹೆಸರಲಿನಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ಸಾಲ ಪಡೆದ್ದಿದ್ದರು.
ಇದೇ ರೀತಿಯಾಗಿ ನಾರಾಯಣಸ್ವಾಮಿ ಕೂಡ ಪತ್ನಿ ಲಾವಣ್ಯ ಹೆಸರಿನಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು 50 ಲಕ್ಷ ರೂ. ಸಾಲ ಪಡೆದಿದ್ದರು. ಬ್ಯಾಂಕ್ ಅಧಿಕಾರಿಗಳ ವಂಚನೆಯನ್ನು ಕಂಡು ಪೊಲೀಸರು ಬೆಚ್ಚಿ ಬಿದ್ದಿದ್ದಾರೆ.












Click it and Unblock the Notifications