ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಸಂಸದ ಬಿ.ಎನ್.ಬಚ್ಚೇಗೌಡ: ಬಿಜೆಪಿ ವಿರುದ್ಧ ಕಿಡಿ
ಚಿಕ್ಕಬಳ್ಳಾಪುರ, ಆಗಸ್ಟ್ 23: ರಾಜಕೀಯ ಜೀವನ ಸಾಕಾಗಿದ್ದು, ಇದುವರೆಗೂ ರಾಜಕೀಯದಲ್ಲಿ ಬಹಳ ಶ್ರಮ ಪಟ್ಟಿದ್ದೇನೆ. ಮುಂದೆ ವಿಶ್ರಾಂತಿ ಜೀವನ ನಡೆಸಲು ಉದ್ದೇಶಿಸಿದ್ದು, ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಿರುವುದಾಗಿ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಘೋಷಣೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಕಾರ ಪಕ್ಷದಲ್ಲಿ 70 ವರ್ಷ ವಯಸ್ಸಿಗೆ ನಿವೃತ್ತಿಯಾಗಬೇಕು. ಈಗ ನನಗೆ 81 ವರ್ಷ ವಯಸ್ಸಾಗಿದೆ. ಅರ್ಥಪೂರ್ಣ ಸಮಾರಂಭವನ್ನೂ ಆಚರಣೆ ಮಾಡಿಕೊಂಡಿದ್ದೇವೆ. ನನಗೆ ಪಕ್ಷದಲ್ಲಿ ಟಿಕೆಟ್ ಕೊಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿಬಿಟ್ಟಿದ್ದಾರೆ. ಹೀಗಾಗಿ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ಬಿಜೆಪಿಯಲ್ಲಿ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂದು ಘೋಷಣೆ ಮಾಡಿದ್ದಾರೆ. ತಂದೆ, ಮಗ, ಮೊಮ್ಮಗ, ಮೊಮ್ಮಗಳು ರಾಜಕಾರಣಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಚುನಾವಣಾ ರಾಜಕೀಯದಲ್ಲಿ ಇರದಿದ್ದರೂ ರಾಜಕಾರಣದಲ್ಲಿ ಸಕ್ರಿಯವಾಗಿ ಕೆಲಸ ಮಾಡಿಕೊಂಡು ಇರುತ್ತೇನೆ ಎಂದು ಬಿ.ಎನ್.ಬಚ್ಚೇಗೌಡ ಹೇಳಿದ್ದಾರೆ.
ಬಿ.ಎನ್ ಬಚ್ಚೇಗೌಡ ಅವರ ರಾಜಕೀಯ ಜೀವನ
ಬಿ.ಎನ್ ಬಚ್ಚೇಗೌಡ ಅವರು ಜನತಾ ಪಕ್ಷದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಆಗ ಎಚ್.ಡಿ ದೇವೇಗೌಡರ ಗುಂಪಿನ ಭಾಗವಾಗಿದ್ದರು. ನಂತರ ಬಿಜೆಪಿ ಸೇರಿದ ಅವರು 2008ರಿಂದ ಬಿಜೆಪಿ ಸದಸ್ಯರಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರು 5 ಬಾರಿ (1978, 1985, 1994, 1999, 2008 ರಲ್ಲಿ) ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.
ಅಲ್ಲದೆ ಇವರು 1989, 2004, 2013 ರಲ್ಲಿ ಹೊಸಕೋಟೆಯಲ್ಲಿ ಸೋತ ಅಭ್ಯರ್ಥಿಯಾಗಿದ್ದರು. ಅವರು 2013ರಲ್ಲಿ ಜಗದೀಶ್ ಶೆಟ್ಟರ್ ಅವರ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು ಹಾಗೂ ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೊಸಕೋಟೆಯಿಂದ ಸೋತರು. ಅವರು 2014ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚಿಕ್ಕಬಳ್ಳಾಪುರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತರು. ಬಳಿಕ 2019ರಲ್ಲಿ ಮರಳಿ ಸ್ಪರ್ಧಿಸಿ ಗೆಲುವು ಸಾಧಿಸಿದರು.

50 ವರ್ಷಗಳಿಂದ ರಾಜಕೀಯ ಸೇವೆ
ಕಳೆದ 50 ವರ್ಷಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸೇವೆ ಮಾಡಿದ್ದೇನೆ. ನನ್ನ ಅಭಿಮಾನಿಗಳು ಎಲ್ಲಾ ಕಡೆ ಇದ್ದಾರೆ. ಐದಾರು ಬಾರಿ ಶಾಸಕ ಆಗಿದ್ದೆ, ಮಂತ್ರಿಯಾಗಿದ್ದೆ, ನಾನು ಇನ್ನು ಸಕ್ರಿಯ ರಾಜಕಾರಣದಲ್ಲಿ ಇರಲ್ಲ ಎಂದರು.
ಇನ್ನು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳನ್ನು ಚಾಕಚಕ್ಯತೆಯಿಂದ ಜಾರಿಗೆ ತಂದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಇವೆಲ್ಲ ಜಾರಿಗೆ ತರುವಂಥಹ ಬುದ್ಧಿವಂತಿಕೆ ಇದೆ. ಸಿದ್ದರಾಮಯ್ಯ ಬಹಳ ಸಾರಿ ಚುನಾಯಿತರಾಗಿದ್ದಾರೆ, ಸಿದ್ದರಾಮಯ್ಯ ಬಹಳ ವರ್ಷ ವಿತ್ತ ಸಚಿವರಾಗಿರುವ ಅನುಭವ ಇದೆ. ರಾಮಕೃಷ್ಣ ಹೆಗಡೆ ಬಿಟ್ಟರೆ ಸಿದ್ದರಾಮಯ್ಯನವರೇ ಮೊದಲು ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ.
ಇನ್ನು ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ ಅವರು, ಮೂರು ತಿಂಗಳ ಹತ್ತತ್ರ ನಾಲ್ಕನೇ ತಿಂಗಳಾಗ್ತಾ ಇದೆ, ಬಿಜೆಪಿ ಪ್ರತಿ ಪಕ್ಷದ ನಾಯಕನನ್ನು ಮಾಡಲು ಆಗಲಿಲ್ಲ. ಬಿಜೆಪಿ ಸೆಟ್ ಬ್ಯಾಕ್ ಆಗಿದೆ. ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ. ಬಾಂಬೇ ಬಾಯ್ಸ್ ಬಿಜೆಪಿಯಲ್ಲಿ ಇರೋದಕ್ಕೆ ಮೂಲ ಬಿಜೆಪಿ ಕಾರ್ಯಕರ್ತರಿಗೆ ಇಷ್ಟವಿಲ್ಲ. ಎಸ್ ಟಿ ಸೋಮಶೇಖರ್, ಹೆಬ್ಬಾರ್ ಇನ್ನೂ ಜೆಡಿಎಸ್ ನವರು ಬಿಜೆಪಿಯವರು ಕಾಂಗ್ರೆಸ್‌ಗೆ ಬರುತ್ತಾರೆ ಎಂದರು.
ಅಪ್ಪ ಬಿಜೆಪಿ ಸಂಸದ, ಮಗ ಕಾಂಗ್ರೆಸ್ ಶಾಸಕ
ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಅವರ ಮಗ ಶರತ್ ಬಚ್ಚೇಗೌಡ ಕಾಂಗ್ರೆಸ್ ಶಾಸಕರಾಗಿದ್ದಾರೆ. ಶರತ್ ಕುಮಾರ್ ಬಚ್ಚೇಗೌಡ ಹೊಸಕೋಟೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ ಮತ್ತು ಹಾಲಿ ಸಚಿವ ಎಂ.ಟಿ.ಬಿ.ನಾಗರಾಜ್ ಅವರನ್ನು ಸೋಲಿಸಿದ್ದಾರೆ.
2019 ರಲ್ಲಿ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧವೇ ಸ್ವತಂತ್ರವಾಗಿ ಸ್ಪರ್ಧಿಸಿದ್ದಕ್ಕಾಗಿ ಅವರನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲಾಗಿತ್ತು ನಂತರ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.












Click it and Unblock the Notifications