ಕಾಂಗ್ರೆಸ್ ಪಕ್ಷದ ಗ್ಯಾರೆಂಟಿಗಳ ಬಗ್ಗೆ ತೆಲಂಗಾಣ ಶಾಸಕನಿಂದ ಅಪಪ್ರಚಾರ ವಿರೋಧಿಸಿ ಪ್ರತಿಭಟನೆ!
ಚಿಕ್ಕಬಳ್ಳಾಪುರ ನವೆಂಬರ್ 23: ತೆಲುಗು ಭಾಷೆಯ ಪ್ರಾಬಲ್ಯ ಹೆಚ್ಚಿರುವ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ವಿವಿಧ ಪಕ್ಷಗಳ ಪ್ರಮುಖ ನಾಯಕರು ನೆರೆಯ ಆಂಧ್ರ ಹಾಗೂ ತೆಲಂಗಾಣದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದಾರೆ.
ಇದಕ್ಕೆಲ್ಲ ಕಾರಣ ತೆಲಂಗಾಣ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣಾ ಪ್ರಚಾರದ ರ್‍ಯಾಲಿಯಲ್ಲಿ ನೆರೆಯ ತೆಲುಗು ಹಾಗೂ ಕನ್ನಡ ಬಾಷೆಯನ್ನು ಬಲ್ಲ ಹಾಲಿ ಹಾಗೂ ಮಾಜಿ ಶಾಸಕರು, ತೆಲಂಗಾಣ ಆಡಳಿತ ಪಕ್ಷದ ಶಾಸಕರು ಹಾಗೂ ಮಂತ್ರಿಗಳ ಮೇಲೆ ಮಾಡುತ್ತಿರುವ ಆರೋಪ ಪ್ರತ್ಯರೋಪಗಳು.

ಕರ್ನಾಟಕದ ಕಾಂಗ್ರೆಸ್ ಗ್ಯಾರಂಟಿಗಳ (ಕಾಂಗ್ರೆಸ್ ಗ್ಯಾರಂಟಿ) ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಬಿ.ಆರ್.ಎಸ್ ಪಕ್ಷದ ಅಭ್ಯರ್ಥಿಯೊಬ್ಬರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ತೆಲಂಗಾಣದ ಬಾಲಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರು ತೆಲಂಗಾಣದಲ್ಲಿ (ತೆಲಂಗಾಣ) ಕಾಂಗ್ರೆಸ್ ಪರವಾಗಿ ಶಾಸಕ ಪ್ರದೀಪ್ ಈಶ್ವರ್ ಚುನಾವಣಾ ಪ್ರಚಾರದಲ್ಲಿದ್ದಾರೆ. ಇದರ ನಡುವೆ ತೆಲಂಗಾಣ ಸಚಿವ ಪ್ರತಾಪ್ ರೆಡ್ಡಿ ಸ್ವಗ್ರಾಮದ ವೇಲುಪುರದಲ್ಲಿ ಅಂಬೇಡ್ಕರ್ ಪ್ರತಿಮೆ ಎದುರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಪ್ರದೀಪ್ ಈಶ್ವರ್ ಪ್ರತಿಭಟನೆ ನಡೆಸಿದ್ದಾರೆ.
ಕಳೆದ ಹಲವು ದಿನಗಳಿಂದ ಶಾಸಕ ಪ್ರದೀಪ್ ಈಶ್ವರ್, ತೆಲಂಗಾಣದ ಬಾಲಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದು, ಚುನಾವಣಾ ಉಸ್ತುವಾರಿ ವಹಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುತ್ಯಾಲ ಸುನೀಲ್ ಕುಮಾರ್ ಪರ ಪ್ರಚಾರ ನಡೆಸುತ್ತಿದ್ದಾರೆ. ಇದೇ ಕ್ಷೇತ್ರದ ಕೆಸಿಆರ್ ಪಕ್ಷದ ಅಭ್ಯರ್ಥಿ ಪ್ರತಾಪ್ ರೆಡ್ಡಿ ಅವರು ಕರ್ನಾಟಕದ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡಿದ್ದರು. ಕರ್ನಾಟಕದಲ್ಲೇ ಕಾಂಗ್ರೆಸ್ ಗ್ಯಾರಂಟಿಗಳು ಸಮರ್ಪಕವಾಗಿ ಅನುಷ್ಟಾನ ಆಗಿಲ್ಲ, ಇನ್ನು ತೆಲಂಗಾಣ ರಾಜ್ಯದಲ್ಲಿ ಅನುಷ್ಠಾನ ಆಗುತ್ತಾ? ಎಂದು ಲೇವಡಿ ಮಾಡಿದ್ದರು ಇದರಿಂದ ರೊಚ್ಚಿಗೆದ್ದ ಚಿಕ್ಕಬಳ್ಳಾಪುರ ಶಾಸಕರು ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸಚಿವ ಪ್ರತಾಪ್ ರೆಡ್ಡಿ ವಿರುದ್ಧ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ. ರೆಡ್ಡಿ ವಿರುದ್ಧ ಕರ್ನಾಟಕದ ಶಾಸಕ ಬೀದಿಗಿಳಿದು ಪ್ರತಿಭಟಿಸಿ ಮಾತನಾಡಿದ ಅವರು ನಮ್ಮ ಗ್ಯಾರೆಂಟಿಗಳ ಬಗ್ಗೆ ಅನುಮಾನ ಇರುವ ಇಲ್ಲಿನ ಬಿ. ಆರ್. ಎಸ್ ಪಕ್ಷದ ನಾಯಕರಿಗೆ ನಮ್ಮ ರಾಜ್ಯಕ್ಕೆ ಬರಲು ವಿಮಾನ ಟಿಕೆಟ್, ನಮ್ಮ ರಾಜ್ಯದಲ್ಲಿ ಹಳ್ಳಿಗಳಿಗೆ ಓಡಾಡಲು ಕಾರು ಎಲ್ಲವೂ ಸಿದ್ಧವಾಗಿದೆ. ಬನ್ನಿ ಕರ್ನಾಟಕಕ್ಕೆ ಹೋಗೋಣ. ಕರ್ನಾಟಕದ ಯಾವ ಹಳ್ಳಿಗೆ ಬೇಕಾದರೂ ಹೋಗಿ ಕಾಂಗ್ರೆಸ್ ಪಕ್ಷದ ಗ್ಯಾರೆಂಟಿಗಳ ಬಗ್ಗೆ ಮಾಹಿತಿ ಪಡೆದು ಕೊಂಡು ಆಮೇಲೆ ನಮ್ಮ ಯೋಜನೆಗಳ ಬಗ್ಗೆ ಮಾತನಾಡಿ ಎಂದು ಸವಾಲು ಎಸೆದಿದ್ದಾರೆ.
ತೆಲಂಗಾಣ ವಿಧಾನಸಭಾ ಚುನಾವಣೆ
ತೆಲಂಗಾಣ ವಿಧಾನಸಭೆ ಚುನಾವಣೆ ನವೆಂಬರ್ 30ರಂದು ನಡೆಯಲಿದೆ. ಪಂಚರಾಜ್ಯಗಳ ಚುನಾವಣೆ ನಡೆಯುತ್ತಿದ್ದು ಒಂದೇ ದಿನ ಫಲಿತಾಂಶ ಬರಲಿದೆ. ಈಗಾಗಲೇ ಮಿಜೋರಾಂ ರಾಜ್ಯದ ಚುನಾವಣೆ ನವೆಂಬರ್ 7ರಂದು ಒಂದೇ ಹಂತದಲ್ಲಿ ನಡೆದಿತ್ತು, ಛತ್ತಿಸ್‌ಗಢದಲ್ಲಿ ಮೊದಲ ಹಂತದ ಚುನಾವಣೆ ನವೆಂಬರ್ 7 ಮತ್ತು ಎರಡನೇ ಹಂತದ ಚುನಾವಣೆ ನವೆಂಬರ್ 17ರಂದು ನಡೆದಿದೆ. ಮಧ್ಯಪ್ರದೇಶ ಚುನಾವಣೆ ಕೂಡ ನವೆಂಬರ್ 17ರಂದು ನಡೆದಿದ್ದು, ರಾಜಸ್ಥಾನ ವಿಧಾನಸಭೆ ಚುನಾವಣೆ ನವೆಂಬರ್ 23ರಂದು ನಡೆಯಲಿದೆ. ಐದು ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದೆ.
ತೆಲಂಗಾಣದಲ್ಲಿ 119 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದ್ದುಆಡಿಳಿತಾರೂಢ ಭಾರತ್ ರಾಷ್ಟ್ರ ಸಮಿತಿ (BRS) 36-39 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದು, ಕಾಂಗ್ರೆಸ್ 69 ರಿಂದ 72 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ. ಎಐಎಂಐಎಂ 5-6 ಸ್ಥಾನಗಳಲ್ಲಿ, ಬಿಜೆಪಿ 2-3 ಮತ್ತು ಇತರೆ 0-1 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.












Click it and Unblock the Notifications