ಚಿಕ್ಕಬಳ್ಳಾಪುರ: ರೈತರಿಗೆ ಸಾಲ ಮರುಪಾವತಿಸಲು ಪೀಡಿಸಿದ್ರೆ ಹುಷಾರ್..! ಬ್ಯಾಂಕುಗಳಿಗೆ ಜಿಲ್ಲಾಧಿಕಾರಿ ಎಚ್ಚರಿಕೆ..
ಚಿಕ್ಕಬಳ್ಳಾಪುರ ನವೆಂಬರ್ 22: ರಾಜ್ಯಾದ್ಯಂತ ಸರಿಯಾಗಿ ಮಳೆಯಾಗದೆ ಬರಗಾಲ ತಾಂಡವವಾಡುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಗೂ ಬರದ ಛಾಯೆ ಆವರಿಸಿದೆ. ಈ ಜಿಲ್ಲೆಯು ಸಂಪೂರ್ಣ ಮಳೆಯಾಶ್ರಿತ ಪ್ರದೇಶವಾಗಿದ್ದು ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಇದರ ನಡುವೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ತೆಗದುಕೊಂಡ ದಿಟ್ಟ ನಿರ್ಧಾರ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾಲ ಸೋಲ ಮಾಡಿ ಹಾಕಿದ ಬೆಳೆ ಕೈಗೆ ಬಾರದೇ ಸಾವಿರಾರು ರೈತರು ಸಮಸ್ಯೆಗೆ ಸಿಲುಕಿದ್ದಾರೆ. ಬಿತ್ತಿದ ಬೀಜ ಬೆಳೆಯಾಗದೆ ಹಾಕಿದ ಬಂಡವಾಳ ಕೈಗೆಟಕದೆ ರೈತರಲ್ಲಿ ಆತಂಕ ಮನೆ ಮಾಡಿದೆ. ಈ ಮಧ್ಯೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ತೆಗೆದುಕೊಂಡ ನಿರ್ಧಾರದಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ.

ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳ ಕಾಲ ಉತ್ತಮ ಮಳೆಯಾಗಿ ಬೆಳೆಯಗುತ್ತಿತ್ತು. ಆದರೆ ಈ ವರ್ಷ ಮಾತ್ರ ವ್ಯತಿರಿಕ್ತ ವಾತಾವರಣದಿಂದ ಮಳೆ ಇಲ್ಲದಂತಾಗಿ ಬರಗಾಲ ಆವರಿಸಿದೆ. ಸಾವಿರಾರು ರೈತರು ಸಾಲ ಸೋಲ ಮಾಡಿ ಕೃಷಿ ಚಟುವಟಿಕೆಗಳಿಗಾಗಿ ಹಾಕಿದ್ದ ಬಂಡವಾಳವು ಕೈಗೆ ಬಾರದೇ ರೈತ ಸಮಸ್ಯೆಗೆ ಸಿಲುಕಿ ಕೃಷಿ ಚಟುವಟಿಕೆಗಳಿಗಾಗಿ ಮಾಡಿದ ಸಾಲವನ್ನು ತೀರಿಸುವುದು ಹೇಗೆಂಬ ಚಿಂತೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ತೆಗದುಕೊಂಡಿರೋ ನಿರ್ಧಾರ ರೈತರಿಗೆ ನೆಮ್ಮದಿಯನ್ನು ನೀಡಿದೆ.
ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಲಾಗಿದೆ. ಹೀಗೆ ಸಂಕಷ್ಟದಲ್ಲಿರುವ ರೈತರಿಗೆ ಒಂದು ವರ್ಷದ ಅವಧಿಗೆ ಯಾವುದೇ ಬ್ಯಾಂಕ್‌ಗಳು ಸಾಲ ಮರುಪಾವತಿಸುವಂತೆ ಕೇಳಬಾರದು ಹಾಗೂ ನೊಟೀಸ್ ನೀಡಬಾರದೆಂದು ಆದೇಶಿಸಿದ್ದಾರೆ.
ಲೀಡ್ ಬ್ಯಾಂಕ್ ಮ್ಯಾನೇಜರ್ ಮೂಲಕ ಬ್ಯಾಂಕ್‌ಗಳಿಗೆ ಆದೇಶ ರವಾನೆ:-
ಬರಗಾಲದ ಹಿನ್ನೆಲೆ, ಆರ್ ಬಿಐ ಮಾರ್ಗ ಸೂಚಿ ಅನ್ವಯ ಯಾವುದೇ ಬ್ಯಾಂಕ್ ಗಳು ರೈತರಿಗೆ ಹಣ ಮರುಪಾವತಿ ಮಾಡುವಂತೆ ಕಿರುಕುಳ ನೀಡುವಂತಿಲ್ಲ. ಪ್ರಸಕ್ತ ಸಾಲಿನ ವರ್ಷ ಬರಗಾಲ ಎಂದು ಘೋಷಣೆ ಮಾಡಿದ್ದು, ಈ ಒಂದು ವರ್ಷದ ಅವಧಿಯಲ್ಲಿ ಯಾವುದೇ ರೈತರಿಗೆ ಬ್ಯಾಂಕ್ ಗಳು ಸಾಲ ಮರುಪಾವತಿ ಮಾಡುವಂತೆ ನೊಟೀಸ್ ನೀಡಬಾರದೆಂದು ಆದೇಶ ಮಾಡಿದ್ದಾರೆ. ಈ ಸಂಬಂಧ ಲೀಡ್ ಬ್ಯಾಂಕ್ ಮೂಲಕ ಎಲ್ಲಾ ಬ್ಯಾಂಕ್ ಗಳಿಗೆ ಆದೇಶವನ್ನು ಸಹ ಈಗಾಗಲೇ ರವಾನಿಸಿದ್ದಾರೆ.

ಬ್ಯಾಂಕ್ ಮಾತ್ರವಲ್ಲ ಖಾಸಗಿ ಫೈನಾನ್ಸ್‌ಗಳಿಗೂ ವಾರ್ನಿಂಗ್:-
ಇನ್ನೂ ಬರೀ ಬ್ಯಾಂಕ್‌ಗಳಿಗೆ ಮಾತ್ರವಲ್ಲ, ಖಾಸಗಿ ಪೈನಾನ್ಸ್‌ನವರು ಕೂಡ ರೈತರಿಗೆ ಕಿರುಕುಳ ನೀಡುಬಾರದು ಎಂದು ಜಿಲ್ಲಾಧಿಕಾರಿ ರವೀಂದ್ರ ಅವರು ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ. ಈಗಾಗಲೇ ರೈತರು ಆರ್ಥಿಕ ಸಂಕಷ್ಟದಲ್ಲಿದ್ದು ರೈತರಿಗೆ ಹಣ ಕಟ್ಟುವಂತೆ ಪೀಡಿಸುವಂತಿಲ್ಲ. ಒಂದು ವೇಳೆ ಡಿಮ್ಯಾಂಡ್ ಮಾಡಿದ್ರೆ ಅಂತವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಈ ಬಗ್ಗೆ ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ನಿರ್ಧಾರಕ್ಕೆ ರೈತರು ಫುಲ್ ಖುಷ್
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಾದ ರವೀಂದ್ರರವರು ಬ್ಯಾಂಕ್‌ಗಳಿಗೆ ಆದೇಶ ಮಾಡುತಿದ್ದಂತೆ ಈ ನಿರ್ಧಾರದಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ. ಸಾಲಸೋಲ ಮಾಡಿದ್ದ ರೈತರಿಗೆ ಬಡ್ಡಿ ಕಟ್ಟೋದು ಕಷ್ಟವಾಗಿತ್ತು. ಆದ್ರೆ ಒಂದು ವರ್ಷದ ಅವಧಿ ಯಾವುದೇ ಕಂತುಗಳ ಕಟ್ಟದಂತೆ ಡಿಸಿ ಅವರ ಈ ಆದೇಶ ನಮಗೆ ಅನುಕೂಲವಾಗಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಮಾದರಿಯಲ್ಲೇ ಇಡೀ ರಾಜ್ಯಾದ್ಯಂತ ಈ ರೀತಿಯ ನಿರ್ಧಾರ ಮಾಡಿ ರೈತರಿಗೆ ಅನುಕೂಲ ಆಗುವಂತೆ ಮಾಡಿಕೊಡಲಿ ಎಂಬ ಒತ್ತಾಯ ಎಲ್ಲೆಡೆ ಕೇಳಿಬಂದಿದೆ. ಒಟ್ಟಿನಲ್ಲಿ ಡಿಸಿ ರವೀಂದ್ರ ಅವರ ಈ ನಿರ್ಧಾರ ಕಷ್ಟದಲ್ಲಿರೋ ರೈತರಿಗೆ ವರದಾನವಾಗಿರುವುದಂತೂ ಸತ್ಯ.












Click it and Unblock the Notifications