4 ಗ್ರಾಪಂಗಳಲ್ಲಿ ಪಿಡಿಒ ಹುದ್ದೆ ಖಾಲಿ: ಪಿಡಿಒ ಇಲ್ಲ ನಾಳೆ ಬನ್ನಿ..!
ಚಿಕ್ಕಬಳ್ಳಾಪುರ ಜೂನ್ 14: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ 8 ಗ್ರಾಪಂಗಳ ಪೈಕಿ 4 ಕಡೆ ಪಿಡಿಒ ಹುದ್ದೆಗಳು ಖಾಲಿ ಇದ್ದು, ಗ್ರಾಮೀಣ ಆಡಳಿತ ನಿರ್ವಹಣೆ ಹಾಗೂ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೀವ್ರ ಹಿನ್ನಡೆಯಾಗಿದೆ.
ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತಿಗಳ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನರೇಗಾ ಕಾಮಗಾರಿಗಳು, ಸ್ವಚ್ಛ ಭಾರತ್ ಅಭಿಯಾನ, ತೆರಿಗೆ ಪಾವತಿ, ಇ-ಸ್ವತ್ತು, ಕಟ್ಟಡ ಪರವಾನಗಿ, ವ್ಯಾಪಾರ ಪರವಾನಗಿ, ನರೇಗಾ ಉದ್ಯೋಗ ಚೀಟಿ ವಿತರಣೆ, ವಾಸಸ್ಥಳ ದೃಢೀಕರಣ ಸೇರಿದಂತೆ ನಾನಾ ಸೇವೆಗಳನ್ನು ಪಡೆಯಲು ಸಾರ್ವಜನಿಕರು ಗ್ರಾಪಂಗಳಿಗೆ ಭೇಟಿ ನೀಡುತ್ತಿದ್ದು, ಅಲ್ಲಿನ ಸಿಬ್ಬಂದಿಯು ಪಿಡಿಓ ಸಾಹೇಬರಿಲ್ಲ, ನಾಳೆ ಬನ್ನಿ.. ಎಂಬ ಸಿದ್ದ ಉತ್ತರ ನೀಡುತ್ತಿದ್ದೂ ಒಂದು ಕೆಲಸಕ್ಕೆ ಹತ್ತಾರು ಬಾರಿ ಓಡಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬಹುತೇಕ ಗ್ರಾಮ ಪಂಚಾಯ್ತಿಗಳಲ್ಲಿ ನಿಮಗೆ ಸಿಗುವ ಸಾಮಾನ್ಯ ಉತ್ತರ ಇದು. ತಾಲೂಕಿನ 8 ಪಂಚಾಯ್ತಿಗಳ ಪೈಕಿ, 4 ಪಂಚಾಯ್ತಿಗಳಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಇಲ್ಲ. ನಿಯಮದ ಪ್ರಕಾರ ಪ್ರತಿ ಗ್ರಾಪಂಗೆ ಒಬ್ಬ ಪಿಡಿಒ ಇರಬೇಕು.
ಆದರೆ, ತಾಲೂಕಿನಲ್ಲಿ 4 ಹುದ್ದೆ ಖಾಲಿ ಇವೆ. ಹೀಗಾಗಿ ಇನ್ನುಳಿದ 4 ಪಿಡಿಒ ಹಾಗೂ ಗ್ರೇಡ್ 1 ಸೆಕ್ರೆಟರಿಗಳಿಗೆ ಹೆಚ್ಚುವರಿ ಪಂಚಾಯಿತಿಗಳ ಕಾರ್ಯಭಾರ ನೀಡಿದ್ದು ಪಿಡಿಓಗಳು ಗ್ರಾಮಸ್ಥರ ಕೈಗೆ ಸುಲಭವಾಗಿ ಸಿಗುತ್ತಿಲ್ಲ.
ಅಭಿವೃದ್ಧಿಗೆ ಹಿನ್ನಡೆ: ಗ್ರಾಪಂಗಳಲ್ಲಿ ಪಿಡಿಒ
ಮತ್ತು ಅಧ್ಯಕ್ಷರು ಜಂಟಿಯಾಗಿ ಸಹಿ ಹಾಕದೇ ಒಂದು ನಯಾ ಪೈಸೆ ಸಹ ಬ್ಯಾಂಕಿನಿಂದ ಮಂಜೂರು ಮಾಡಲು ಸಾಧ್ಯವಿಲ್ಲ, ಆದ್ದರಿಂದ ಸರಕಾರದ ಯೋಜನೆಗಳು ಕಾರ್ಯಗತವಾಗಲು ಪಿಡಿಒ ಅವಶ್ಯಕವಾಗಿ ಬೇಕಾಗುತ್ತದೆ ಯಾದರು ಅಧಿಕಾರಿಗಳ ಕೊರತೆಯಿಂದ ಸಮಸ್ಯೆ ಮತ್ತಷ್ಟು ಉಲ್ಬಣವಾಗಿದೆ.

ಮೂಲಭೂತ ಸೌಲಭ್ಯ ಕಲ್ಪಿಸಲು ವಿಫಲ :-
ಸಾರ್ವಜನಿಕರಿಗೆ ಕುಡಿಯುವ ನೀರು, ಆಶ್ರಯ, ಅಂಬೇಡ್ಕರ್ ಮನೆ ನಿರ್ಮಾಣ, ಕಂದಾಯ ವಸೂಲಿ, ಮನರೇಗಾ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಸಾಮಾನ್ಯ ಸಭೆ ಕರೆಯುವುದು, ಕಚೇರಿ ನಿರ್ವಹಣೆ, ಇ-ಸ್ವತ್ತು, ಖಾತೆ ಮಾಡುವುದು, ರಿಜಿಸ್ಟ್ರೇಶನ್, ಮಾಸಿಕ ಸಭೆ, ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ 20 ರಿಂದ 25 ಸದಸ್ಯರ ಸಮನ್ವಯತೆ ಕಾಯ್ದುಕೊಳ್ಳುವುದು ಸೇರಿದಂತೆ ಇನ್ನಿತರ ಕೆಲಸಗಳಿಗೆ ತೀವ್ರ ಸಮಸ್ಯೆಯಾಗಿದೆ.
ಕೆಲವರಿಂದ ದುರುಪಯೋಗ..?
ಇನ್ನೊಂದೆಡೆ, ಕೆಲ ಪಿಡಿಒಗಳು ಪ್ರಭಾರಿ ಜವಾಬ್ದಾರಿಯನ್ನೇ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳಿವೆ. ಮೂಲ ಗ್ರಾಪಂ ಜನರು ಕೇಳಿದರೆ ಪ್ರಭಾರಿ ಗ್ರಾಪಂನಲ್ಲಿ ಇದ್ದೆ, ಪ್ರಭಾರಿ ಗ್ರಾಪಂ ಜನರು ಕೇಳಿದರೆ ಮೂಲ ಗ್ರಾಪಂನಲ್ಲಿ ಇದ್ದೆ ಎಂದು ಸಬೂಬು ಹೇಳಿ ಅಲೆದಾಡಿಸುತ್ತಿದ್ದಾರೆ ಎಂದು ಜನರು ದೂರಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಖಾಲಿ ಇರುವ ಪಿಡಿಒ ಹುದ್ದೆಗಳನ್ನು ಭರ್ತಿ ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಗ್ರೇಡ್ 1 ಸೆಕ್ರೆಟರಿಗೂ 2 ಪಂಚಾಯತಿ :-
ಹೌದು ಪಿಡಿಒಗಳ ಕೊರತೆಯಿಂದ ಗ್ರೇಡ್ 1 ಸೆಕ್ರೆಟರಿಗೂ ಸಹ 2 ಗ್ರಾಮ ಪಂಚಾಯತಿಗಳ ಜವಾಬ್ದಾರಿ ನೀಡಲಾಗಿದೆ, ಇಬ್ಬರು ಪಿಡಿಒ ಗಳು ತಲಾ ಒಂದೊಂದು ಗ್ರಾಪಂ ಜವಾಬ್ದಾರಿ ಜೊತೆಗೆ ತಾ. ಪಂ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ.
ಅಧಿಕ ಒತ್ತಡ :-
ಪ್ರಭಾರ ಕೆಲಸದಿಂದ ಒತ್ತಡವೂ ಹೆಚ್ಚಾಗಿದೆ ಎನ್ನುವ ಪಿಡಿಒಗಳು, ಒಂದೊಂದು ಪಂಚಾಯಿತಿಗಳ ಜನಪ್ರತಿನಿಧಿಗಳನ್ನು ನಿಭಾಯಿಸುವುದು, ಅಧಿಕಾರಿಗಳಿಗೆ ಕಷ್ಟಕರವಾಗಿದೆ, ಸಾರ್ವಜನಿಕರ ಆರ್ಟಿಇ ಅರ್ಜಿಗಳಿಗೆ ಉತ್ತರ, ಸಭೆ ಸಮಾರಂಭಗಳನ್ನು ನಿರ್ವಹಿಸುವುದು ಕಷ್ಟವಾಗುತ್ತಿದೆ. ಎರಡು ಮೂರು ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಣೆ ಅಸಾಧ್ಯವಾಗಿದೆ. ಆದರೆ ಅಧಿಕಾರಿಗಳ ಆದೇಶ ಪಾಲಿಸಬೇಕಾಗಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.
ಜನರ ಸಂಕಟ :-
ಗ್ರಾಮ ಪಂಚಾಯಿತಿಗಳಲ್ಲಿ ಜನರ ಸಂಕಟ ಸಾರ್ವಜನಿಕರ ನಿತ್ಯದ ಕೆಲಸ ಪಿಡಿಒ ಇಲ್ಲದೇ ಕಾರ್ಯಗಳು ಹಾಗೂ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ. ಒಂದು ಪಂಚಾಯಿತಿಯಲ್ಲಿ ಕೆಲಸ ಮಾಡುತ್ತಿರುವ ಪಿಡಿಒ ಮತ್ತು ಕಾರ್ಯದರ್ಶಿಗಳು ಬೇರೆ ಪಂಚಾಯಿತಿಗಳಲ್ಲಿ ಪ್ರಭಾರಿಯಾಗಿ (ಹೆಚ್ಚುವರಿ) ಅಧಿಕಾರ ವಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಕೆಲಸದ ನಿಮಿತ್ತ ಗ್ರಾಪಂಗೆ ತೆರಳಿದರೆ ''ಪಿಡಿಒ ಬಂದಿಲ್ಲ, ಬೇರೆ ಪಂಚಾಯಿತಿಗೆ ಪ್ರಭಾರಿ ಮೇಲೆ ತೆರಳಿದ್ದಾರೆ. ಎರಡು ದಿನ ಬಿಟ್ಟು ಬನ್ನಿ'' ಎಂಬ ಸಿದ್ದ ಉತ್ತರ ಸಾರ್ವಜನಿಕರ ಅಲೆದಾಟವನ್ನು ಹೆಚ್ಚಿಸಿದೆ.
ಇಒ ಹುದ್ದೆ ಸಹ ಖಾಲಿ-
ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ತಡ ಆಗದಂತೆ ನೋಡಿಕೊಳ್ಳಬೇಕಾದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳ ಹುದ್ದೆಯು ಸಹ ಖಾಲಿ ಇದ್ದು, ಸದ್ಯ ಇರುವ ಅಧಿಕಾರಿಯು ಪ್ರಭಾರಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ತಾಲೂಕು ಪಂಚಾಯತಿಯಲ್ಲೂ ಸಾರ್ವಜನಿಕರ ಕೆಲಸ ಕಾರ್ಯಗಳಿಗಾಗಿ ಅಲೆಯುವ ಪರಿಸ್ಥಿತಿ ತಪ್ಪಿಲ್ಲ ಎನ್ನುವಂತಾಗಿದೆ.
ಈ ಬಗ್ಗೆ ಮಾತನಾಡಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಎಚ್. ಪಿ. ರಮಾನಾಥ್ ರೆಡ್ಡಿ, ಸರ್ಕಾರ ಹಾಗೂ ಜಿಲ್ಲಾಡಳಿತ ನಿರ್ಲಕ್ಷ ಹಾಗೂ ವೈಫಲ್ಯದಿಂದ ಅಧಿಕಾರಿಗಳು ಆದಾಯದ ಮೂಲ ಎಲ್ಲಿರುತ್ತದೊ ಅಂತಹ ಕಡೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾರೆ, ಆದಾಯ ಇಲ್ಲದ ಕಡೆ ವರ್ಷಾನುಗಟ್ಟಲೆ ಹುದ್ದೆಗಳು ಖಾಲಿ ಇರುತ್ತವೆ, ಸರಕಾರ ಕೂಡಲೇ ಸಿಬ್ಬಂದಿ ನೇಮಕ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಚಳುವಳಿ ಹಮ್ಮಿಕೊಳ್ಳಲಾಗುವುದು ಎಂದರು.
ಅಲ್ಲದೆ ತಾ. ಪಂ ಗುಡಿಬಂಡೆ ಪ್ರಭಾರಿ ಇಒ ಹೇಮಾವತಿ ಮಾತನಾಡಿ, ಎಲ್ಲಾ ಕಡೆ ಸಿಬ್ಬಂದಿ ಕೊರತೆ ಇರುವುದರಿಂದ ಒಬ್ಬೊಬ್ಬರಿಗೆ ಎರಡು, ಮೂರು ಗ್ರಾಮ ಪಂಚಾಯತಿಗಳ ಕಾರ್ಯಭಾರ ನೀಡಲಾಗಿದೆ, ಹಾಗಾಗಿ ಒಂದೊಂದು ದಿನ ಒಂದೊಂದು ಗ್ರಾಪಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರಬಹುದು ಆದರೂ ಅಲ್ಲಿನ ಸಿಬ್ಬಂದಿ ಅರ್ಜಿ ಪಡೆದು ಸಮಸ್ಯೆ ಬಗೆಹರಿಸಲಿದ್ದಾರೆ ಎಂದರು.












Click it and Unblock the Notifications