ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸಿ: ಲೋಕಾಯುಕ್ತ ಎಸ್ಪಿ ಅಂಟೊನಿ ಜಾನ್
ಚಿಕ್ಕಬಳ್ಳಾಪುರ ಅಕ್ಟೋಬರ್ 25: ಸಾರ್ವಜನಿಕರ ತೆರಿಗೆ ಹಣದಲ್ಲಿ ನಾವು ನೆಮ್ಮದಿಯಿಂದ ಊಟ ಮಾಡುತ್ತಿದ್ದೇವೆ, ಪ್ರತಿ ತಿಂಗಳು ಸಂಬಳ ಪಡೆಯುತ್ತಿದ್ದೇವೆ, ನಾವ್ಯಾರು ಬಿಟ್ಟಿ ಸೇವೆ ಮಾಡುತ್ತಿಲ್ಲ ಹಾಗಾಗಿ ಕಚೇರಿಗೆ ಆಗಮಿಸುವ ಸಾರ್ವಜನಿಕರ ಜೊತೆ ಸೌಜನ್ಯವಾಗಿ ವರ್ತಿಸುವ ಜೊತೆಗೆ, ಅವರ ಕೆಲಸ ಕಾರ್ಯಗಳನ್ನು ನಿಗಧಿತ ಸಮಯದೊಳಗೆ ಮಾಡಿಕೊಡಬೇಕು ಎಂದು ಲೋಕಾಯುಕ್ತ ಎಸ್. ಪಿ. ಅಂಟೊನಿ ಜಾನ್ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರಿಂದ ಆಯೋಜಿಸಿದ್ದ ಸಾರ್ವಜನಿಕರ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, ಕೆಲಸದ ಒತ್ತಡ, ಸಿಬ್ಬಂದಿಯ ಕೊರತೆ, ಹೆಚ್ಚುವರಿ ಕೆಲಸ ಇದ್ದರೂ ಸಹ ನಾವು ನಮ್ಮ ತಾಳ್ಮೆಯನ್ನು ಕಳೆದು ಕೊಳ್ಳಬಾರದು. ಏಕೆಂದರೆ ನಾವು ಸರಕಾರಿ ನೌಕರರು, ಇದು ಎಲ್ಲರಿಗೂ ದೊರೆಯುವುದಿಲ್ಲ. ನಮ್ಮ ತಂದೆ -ತಾಯಿ, ನಮ್ಮ ಪೂರ್ವಜರು ಮಾಡಿರುವ ಪುಣ್ಯದ ಫಲವಾಗಿ ನಮಗೆ ಈ ಹುದ್ದೆ ಲಭಿಸಿದೆ. ಇದಕ್ಕೆ ನಾವು ನ್ಯಾಯ ಕೊಡಬೇಕು ಎಂದರು.

ಸರಕಾರಿ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿಕೊಡಬೇಕು. ಆದರೆ ಕೆಲ ಅಧಿಕಾರಿಗಳು ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಲು ನಿರ್ಲಕ್ಷ್ಯ ತೋರುತ್ತಾರೆ. ಕೆಲವರು ವಿವಿಧ ಬೇಡಿಕೆಗಳನ್ನು ಸಹ ಇಡುತ್ತಾರೆ. ಅದರಿಂದ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಸಾರ್ವಜನಿಕ ಕುಂದು ಕೊರತೆಗಳ ಸಭೆಯನ್ನು ಏರ್ಪಡಿಸಲಾಗಿದೆ ಎಂದರು.
ಸಾರ್ವಜನಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ವಿಳಂಬವಿಲ್ಲದೆ ತಲುಪಿಸಬೇಕಾಗಿರುವುದು ಪ್ರತಿಯೊಬ್ಬ ಸರಕಾರಿ ನೌಕರರ ಕರ್ತವ್ಯ. ಸಾರ್ವಜನಿಕ ಸೇವೆಯಲ್ಲಿ ಭ್ರಷ್ಟಾಚಾರ ನಡೆಸಿದರೆ ಭ್ರಷ್ಟಾಚಾರ ಕಾಯಿದೆಯಲ್ಲಿಯೇ ಕ್ರಮ ಜರುಗಿಸಬೇಕು ಎಂಬುದೇನಿಲ್ಲ. ಲೋಕಾಯುಕ್ತ ಕಾಯಿದೆಯಲ್ಲಿ ಕೂಡ ಕ್ರಮ ಜರುಗಿಸಲು ಅವಕಾಶವಿದೆ. ಕ್ರಮ ತಕ್ಷಣ ಆಗದೆ ಇರಬಹುದು. ಆದರೆ, ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕಠಿಣ ಕೈಗೊಳ್ಳುವುದು ಖಚಿತ ಎಂದರು.
ತಾಲೂಕು ಕಚೇರಿಯಲ್ಲಿರುವ ರೆಕಾರ್ಡ್ ರೂಮ್ ನಲ್ಲಿ ಸಾರ್ವಜನಿಕರಿಗೆ ಬೇಕಾದ ಭೂ ದಾಖಲೆ ಪತ್ರಗಳನ್ನು ಕೊಡುವಂತೆ ಸರಕಾರ ನಿಗದಿ ಪಡಿಸಿದ ಶುಲ್ಕ ಪಾವತಿಸಿ, ತಿಂಗಳಾನು ಗಟ್ಟಲೇ ಕಚೇರಿಗೆ ಸುತ್ತಾಡಿದರು ಸಹ ಅದು ಕಳೆದು ಹೋಗಿದೆ, ಇದು ಕಳೆದು ಹೋಗಿದೆ ಎಂದು ಸತಾಯಿಸುತ್ತಾರೆ ಆದರೇ ಒಂದು ಸಾವಿರ ಲಂಚ ಕೊಟ್ಟರೆ, ಅರ್ಜಿ ಕೊಟ್ಟ ಒಂದೇ ಹತ್ತು ನಿಮಿಷದಲ್ಲಿ ಹಳೇಯ ದಾಖಲೆ ಪತ್ರ ನೀಡುತ್ತಾರೆ, ಈ ಇಲಾಖೆಯಲ್ಲಿ ಲಂಚ ಇಲ್ಲದೆ ಹುಲ್ಲಿನ ಕಡ್ಡಿಯೂ ಆಲುಗಾಡುವುದಿಲ್ಲ ಎಂದು ವೆಂಕಟರೆಡ್ಡಿ ಎಂಬ ಸಾರ್ವಜನಿಕರು ಆರೋಪಿಸಿದರು.
ಈ ಸಭೆಯಲ್ಲಿ ಸಾರ್ವಜನಿಕರು ನಿರ್ಭಯದಿಂದ ಹಲವಾರು ಇಲಾಖೆಗಳಲ್ಲಿ ಆಗುತ್ತಿರುವ ಸಮಸ್ಯೆಯ ಬಗ್ಗೆ ದೂರುಗಳನ್ನು ಸಲ್ಲಿಸಿದರು. ತಾವು ನೀಡಿದ ದೂರುಗಳನ್ನು ಹೇಗೆಲ್ಲ ನಿರ್ಲಕ್ಷ ಮಾಡುತ್ತಾರೆ, ಲಂಚ ಕೊಟ್ಟರೆ ಎಷ್ಟು ತ್ವರಿತವಾಗಿ ಮಾಡಿಕೊಡುತ್ತಾರೆ ಎಂದು ನೇರವಾಗಿ ಅಧಿಕಾರಿಗಳ ಸಮ್ಮುಖದಲ್ಲೇ ವಿವರಿಸಿದರು.
ಇನ್ನೂ ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧ ಪಟ್ಟ ಒಟ್ಟು 17 ದೂರುಗಳನ್ನು ಸಲ್ಲಿಸಿದರು, ಇನ್ನೂ ತಾಲೂಕು ಪಂಚಾಯತಿ, ಸರ್ವೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 27 ಅರ್ಜಿಗಳು ಸಲ್ಲಿಕೆಯಾದವು. ಎಲ್ಲ ಅರ್ಜಿಗಳನ್ನು ನೇರವಾಗಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಿ, ಸೂಕ್ತ ಕಾರಣಗಳನ್ನು ಪಡೆದು ಇತ್ಯರ್ಥ ಪಡಿಸಲು ಸೂಚಿಸಲಾಯಿತು.
ಪ್ರಚಾರಕ್ಕೆ ಒತ್ತು ನೀಡಿ :-
ಮುಂದಿನ ಬಾರಿ ನಡೆಯುವ ಲೋಕಾಯುಕ್ತ ಕುಂದು ಕೊರತೆ ಸಭೆಗೆ ಕಡ್ಡಾಯವಾಗಿ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತಿ ಪಿಡಿಒ ಗಳು ಹಾಜರಾಗಬೇಕು, ಎಲ್ಲಾ ಗ್ರಾಮ ಪಂಚಾಯತಿಗಳ ತ್ಯಾಜ್ಯ ಸಂಗ್ರಹ ವಾಹನಗಳಲ್ಲಿ ಸಭೆ ಕುರಿತು ಪ್ರತಿಯೊಂದು ಗ್ರಾಮದಲ್ಲೂ ಪ್ರಚಾರ ಮಾಡಬೇಕು ಆ ಮೂಲಕ ಸಮಸ್ಯೆಗಳ ತ್ವರಿತ ಇತ್ಯಾರ್ಥಕ್ಕೆ ಆಧ್ಯತೆ ನೀಡುವಂತೆ ತಾಪಂ ಇಒ ಹೇಮಾವತಿ ರವರಿಗೆ ಸೂಚಿಸಿದರು.
ಈ ವೇಳೆ ತಹಸೀಲ್ದಾರ್ ಸಿಗ್ಬತ್ ವುಲ್ಲಾ, ತಾ.ಪಂ. ಇ.ಒ ಹೇಮಾವತಿ, ಡಿವೈಎಸ್.ಪಿ ವೀರೇಂದ್ರ ಕುಮಾರ್, ಲೋಕಾಯುಕ್ತ ಇನ್ಸ್‌ಪೆಕ್ಟರ್ ಶಿವಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಲಕ್ಷ್ಮೀಪತಿ ರೆಡ್ಡಿ, ಕೃಷಿ ಇಲಾಖೆಯ ಕೇಶವರೆಡ್ಡಿ, ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಸೇರಿದಂತೆ ಹಲವರು ಹಾಜರಿದ್ದರು. ಸಭೆಯಲ್ಲಿ ಸಾರ್ವಜನಿಕರು, ಅಧಿಕಾರಿಗಳಾದ ನಾವು ಯಾವುದೇ ಕಾರಣಕ್ಕೂ ಲಂಚ ಕೊಡುವುದಿಲ್ಲ ಹಾಗೂ ಸ್ವೀಕರಿಸುವುದು ಇಲ್ಲ ಎಂದು ಪ್ರತಿಜ್ಞೆ ಸ್ವೀಕರಿಸಿದರು.












Click it and Unblock the Notifications