'ಸಿಧು ಸಿಎಂ ಕುರ್ಚಿಗಾಗಿ ಪಾಕಿಸ್ತಾನಕ್ಕೆ ಹೋಗಬಹುದು': ಎಸ್‌ಎಡಿ ಮುಖಂಡ
ಚಂಡೀಗಢ, ಜನವರಿ 28: ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷದ ಉನ್ನತ ಮುಖ್ಯಮಂತ್ರಿ ಅಭ್ಯರ್ಥಿಗಳಲ್ಲಿ ಒಬ್ಬರಾಗಿರುವ ನವಜೋತ್ ಸಿಂಗ್ ಸಿಧುರನ್ನು ಟೀಕೆ ಮಾಡುವ ಅಕಾಲಿದಳದ ಪ್ರಧಾನ ಕಾರ್ಯದರ್ಶಿ ಬಿಕ್ರಮ್ ಸಿಂಗ್ ಮಜಿಥಿಯಾ, "ಪಂಜಾಬ್‌ನಲ್ಲಿ ಸಿಧುವಿಗೆ ಮುಖ್ಯಮಂತ್ರಿ ಸ್ಥಾನ ನಿರಾಕರಿಸಿದರೆ ಸಿಧು ಪಾಕಿಸ್ತಾನಕ್ಕೆ ಹೋಗಬಹುದು," ಎಂದು ವ್ಯಂಗ್ಯವಾಡಿದ್ದಾರೆ.
ಮುಂಬರುವ ಪಂಜಾಬ್ ಚುನಾವಣೆಗೆ ಅಮೃತಸರ ಪೂರ್ವ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪಂಜಾಬ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ವಿರುದ್ಧ ಅಕಾಲಿದಳದ ಪ್ರಧಾನ ಕಾರ್ಯದರ್ಶಿ ಬಿಕ್ರಮ್ ಸಿಂಗ್ ಮಜಿಥಿಯಾರನ್ನು ಅಕಾಲಿದಳ ಕಣಕ್ಕೆ ಇಳಿಸಿದೆ. ಈ ಹಿನ್ನೆಲೆಯಿಂದಾಗಿ ಮುಂಬರುವ ಪಂಜಾಬ್ ಚುನಾವಣೆಯ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾದ ನಂತರ ವಿವಾದದಲ್ಲಿ ಮುಳುಗಿರುವ ಶಿರೋಮಣಿ ಅಕಾಲಿದಳದ ಹಿರಿಯ ನಾಯಕ ಮಜಿಥಿಯಾ ನವಜೋತ್ ಸಿಧು ಕ್ಷೇತ್ರವಾದ ಮೃತಸರ ಪೂರ್ವ ಕ್ಷೇತ್ರದಿಂದ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ಸಿಧು ಅವರ ನಾಯಕತ್ವದಲ್ಲಿ ಕಳೆದ ಐದು ವರ್ಷಗಳಲ್ಲಿ ಅಮೃತಸರ (ಪೂರ್ವ) ನಲ್ಲಿ ಯಾವುದೇ ಅಭಿವೃದ್ಧಿ ಸಂಭವಿಸಿಲ್ಲ ಎಂದು ಹೇಳಿದ ಬಿಕ್ರಮ್ ಸಿಂಗ್ ಮಜಿಥಿಯಾ "ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಾಲಿ ಸಿಎಂ ಚರಣ್‌ಜೀತ್ ಸಿಂಗ್ ಚನ್ನಿ ಮತ್ತು ನವಜೋತ್ ಸಿಧು ನಡುವೆ ನಡೆಯುತ್ತಿರುವ ಒಳಜಗಳದ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ. "ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ನಿರಾಕರಿಸಿದರೆ ಸಿಧು ಅವರು ಪಾಕಿಸ್ತಾನಕ್ಕೆ ಸಿಎಂ ಆಗಲು ಹೋಗಬಹುದು," ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಕಲಹದ ಸುಳಿವು ನೀಡಿದ ಬಿಕ್ರಮ್ ಸಿಂಗ್ ಮಜಿಥಿಯಾ, "ಸಿಧು ಅವರ ಪಂಜಾಬ್ ಮಾದರಿಯನ್ನು ಬಹಿರಂಗಪಡಿಸಲಾಗುತ್ತಿದೆ. ಸಿಧು ಈಗ ಆಡಿದ ಮಾತಿಗೆ ಬದ್ಧವಾಗಿ ಮರುಕ್ಷಣ ಇರಲ್ಲ. ತಮ್ಮ ತಾಯಿಗೆ ನಿಷ್ಠರಾಗಿಲ್ಲ. ಹಾಗಿರುವಾಗ ಸಾಮಾನ್ಯ ಜನರ ಮೇಲೆ ಅವರು ನಿಷ್ಠೆಯನ್ನು ಹೊಂದುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ," ಎಂದಿದ್ದಾರೆ.
"ಇಲ್ಲಿ (ಅಮೃತಸರ ಪೂರ್ವ) ಯಾವುದೇ ಅಭಿವೃದ್ಧಿಯಾಗಿಲ್ಲ, ಸಿಎಂ ಚನ್ನಿ ಸಿಧು ಅವರನ್ನು ಸಿಎಂ ಮಾಡದಿದ್ದರೆ, ಅವರು ಪಾಕಿಸ್ತಾನ ಮುಸ್ಲಿಂ ಲೀಗ್‌ನ ಮುಖ್ಯಸ್ಥರಾಗಲು ಪಾಕ್‌ಗೂ ಹೋಗಬಹುದು. ಜನರು ಅವರ ಮಾದರಿಗಳನ್ನು ಬಹಿರಂಗಪಡಿಸುತ್ತಿದ್ದಾರೆ," ಎಂದು ಹೇಳಿದ್ದಾರೆ.
ಸಿಧು ವಿರುದ್ಧ ಸಹೋದರಿಯ ಗಂಭೀರ ಆರೋಪ
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಬಗ್ಗೆ ಹಿರಿಯ ಸಹೋದರಿ ಸುಮನ್ ತೌರ್ ಕಿಡಿಕಾರಿದ್ದು, ವೃದ್ಧಾಪ್ಯದಲ್ಲಿ ಹಣದ ಆಸೆಗಾಗಿ ತಾಯಿಯನ್ನು ತೊರೆದಿದ್ದಾರೆ ಎಂದು ಆರೋಪಿಸಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸ ಮಾಡುವ ಸುಮನ್ ತೌರ್ ನವಜೋತ್ ಸಿಧುರನ್ನು "ಕ್ರೂರ ವ್ಯಕ್ತಿ" ಎಂದು ಬಣ್ಣಿಸಿದ್ದಾರೆ.
ಸುಮನ್ ತೌರ್ ಪ್ರಸ್ತುತ ಚಂಡೀಗಢದಲ್ಲಿದ್ದು, ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. 1986 ರಲ್ಲಿ ತಮ್ಮ ತಂದೆ ನಿಧನರಾದ ನಂತರ ನವಜೋತ್ ಸಿಧು ತನ್ನ ತಾಯಿಯೊಂದಿಗೆ ತನ್ನನ್ನು ಹೊರಹಾಕಿದ್ದರು ಎಂದು ಆರೋಪಿಸಿದರು. ಆಕೆಯ ತಾಯಿ 1989 ರಲ್ಲಿ ರೈಲ್ವೇ ನಿಲ್ದಾಣದಲ್ಲಿ ನಿಧನರಾದರು ಎಂದು ಕೂಡಾ ಸುಮನ್ ತೌರ್ ಹೇಳಿಕೊಂಡಿದ್ದಾರೆ.
"ನಾವು ಬಹಳ ಕಠಿಣವಾದ ಸಮಯವನ್ನು ನೋಡಿದ್ದೇವೆ. ನನ್ನ ತಾಯಿ ನಾಲ್ಕು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರು. ನಾನು ಇದನ್ನು ಬಹಿರಂಗಪಡಿಸಲು ನನ್ನ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳು ಇದೆ," ಎಂದು ಕೂಡಾ ಸುಮನ್ ತೌರ್ ಹೇಳಿದ್ದಾರೆ. ಮುಂದಿನ ತಿಂಗಳು ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಈ ನಡುವೆ ಸಿಧು ಸಹೋದರಿಯ ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಭಾರೀ ಸಂಚಲವನ್ನು ಮೂಡಿಸಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications