ಸಿಧು ಹಣಕ್ಕಾಗಿ ತಾಯಿಯನ್ನು ತೊರೆದ 'ಕ್ರೂರ ವ್ಯಕ್ತಿ' ಎಂದ ಸಹೋದರಿ!
ಚಂಡೀಗಢ, ಜನವರಿ 28: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಬಗ್ಗೆ ಹಿರಿಯ ಸಹೋದರಿ ಸುಮನ್ ತೌರ್ ಕಿಡಿಕಾರಿದ್ದು, ವೃದ್ಧಾಪ್ಯದಲ್ಲಿ ಹಣದ ಆಸೆಗಾಗಿ ತಾಯಿಯನ್ನು ತೊರೆದಿದ್ದಾರೆ ಎಂದು ಆರೋಪಿಸಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸ ಮಾಡುವ ಸುಮನ್ ತೌರ್ ನವಜೋತ್ ಸಿಧುರನ್ನು "ಕ್ರೂರ ವ್ಯಕ್ತಿ" ಎಂದು ಬಣ್ಣಿಸಿದ್ದಾರೆ.
ಸುಮನ್ ತೌರ್ ಪ್ರಸ್ತುತ ಚಂಡೀಗಢದಲ್ಲಿದ್ದು, ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. 1986 ರಲ್ಲಿ ತಮ್ಮ ತಂದೆ ನಿಧನರಾದ ನಂತರ ನವಜೋತ್ ಸಿಧು ತನ್ನ ತಾಯಿಯೊಂದಿಗೆ ತನ್ನನ್ನು ಹೊರಹಾಕಿದ್ದರು ಎಂದು ಆರೋಪಿಸಿದರು. ಆಕೆಯ ತಾಯಿ 1989 ರಲ್ಲಿ ರೈಲ್ವೇ ನಿಲ್ದಾಣದಲ್ಲಿ ನಿಧನರಾದರು ಎಂದು ಕೂಡಾ ಸುಮನ್ ತೌರ್ ಹೇಳಿಕೊಂಡಿದ್ದಾರೆ.
"ನಾವು ಬಹಳ ಕಠಿಣವಾದ ಸಮಯವನ್ನು ನೋಡಿದ್ದೇವೆ. ನನ್ನ ತಾಯಿ ನಾಲ್ಕು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದರು. ನಾನು ಇದನ್ನು ಬಹಿರಂಗಪಡಿಸಲು ನನ್ನ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳು ಇದೆ," ಎಂದು ಕೂಡಾ ಸುಮನ್ ತೌರ್ ಹೇಳಿದ್ದಾರೆ. ಮುಂದಿನ ತಿಂಗಳು ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಈ ನಡುವೆ ಸಿಧು ಸಹೋದರಿಯ ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಭಾರೀ ಸಂಚಲವನ್ನು ಮೂಡಿಸಿದೆ.

ನನಗೀಗ ಸಿಧು ಹಣ ಬೇಡ ಎಂದ ಸಹೋದರಿ
ಆಸ್ತಿಗಾಗಿ ಸಿಧು ತಮ್ಮ ಜೊತೆ ಸಂಬಂಧ ಕಡಿದುಕೊಂಡಿದ್ದಾರೆ ಎಂದು ಸುಮನ್ ತೌರ್ ದೂರಿದ್ದು, "ನನ್ನ ತಂದೆ ಪಿಂಚಣಿ ಜೊತೆಗೆ ಮನೆ [ಮತ್ತು] ಜಮೀನು ಸೇರಿದಂತೆ ಆಸ್ತಿಯನ್ನು ಬಿಟ್ಟು ನಮ್ಮನ್ನು ಅಗಲಿದ್ದಾರೆ. ನವಜೋತ್ ಸಿಂಗ್ ಸಿಧು ಹಣದ ಆಸೆಗಾಗಿ ನನ್ನ ತಾಯಿಯನ್ನು ತೊರೆದಿದ್ದಾರೆ. ಈಗ ನಮಗೆ ಸಿಧು ಬಳಿಯಿಂದ ಯಾವುದೇ ಹಣ ಬೇಡ. ಆದರೆ ಸತ್ಯ ಬಹಿರಂಗ ಮಾಡುತ್ತೇವೆ," ಎಂದಿದ್ದಾರೆ.

ತಂದೆ-ತಾಯಿ ಅಗಲಿಕೆ ಬಗ್ಗೆ ಸುಳ್ಳು ಹೇಳಿದ ಸಿದ್ದು
ನವಜೋತ್ ಸಿಂಗ್ ಸಿಧುರನ್ನು "ಕ್ರೂರ ವ್ಯಕ್ತಿ" ಎಂದು ಕರೆದ ಸುಮನ್ ತೌರ್, "1987 ರಲ್ಲಿ ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ತನ್ನ ಹೆತ್ತವರು ತನ್ನಿಂದ ಬೇರೆಯಾದ ಬಗ್ಗೆ ನವಜೋತ್ ಸಿಂಗ್ ಸಿಧು ಸುಳ್ಳು ಹೇಳಿದ್ದಾರೆ," ಎಂದು ತಿಳಿಸಿದ್ದಾರೆ. "ನವಜೋತ್ ಸಿಂಗ್ ಸಿಧು ತನ್ನ ಹೆತ್ತವರ ಬಗ್ಗೆ ಹೇಳಿಕೊಳ್ಳುತ್ತಿರುವುದು ಸುಳ್ಳು," ಎಂದಿದ್ದಾರೆ. ಇನ್ನು ತನ್ನ ತಂದೆಯಿಂದ ತಾಯಿ ಬೇರೆಯಾಗಿದ್ದಾರೆ ಎಂಬುವುದಕ್ಕೆ ಸಾಕ್ಷಿಯನ್ನು ನೀಡುವಂತೆಯೂ ಸಿಧು ಸಹೋದರಿ ಆಗ್ರಹಿಸಿದ್ದಾರೆ. "ನವಜೋತ್ ಸಿಂಗ್ ಸಿಧು, ತಾಯಿ ಮತ್ತು ತಂದೆಯ ನಡುವಿನ ವೈವಾಹಿಕ ವಿಚಾರ ನ್ಯಾಯಾಲಯದಲ್ಲಿದೆ, ಈಗ ಇಬ್ಬರು ಬೇರೆ ಬೇರೆಯಾಗಿದ್ದಾರೆ ಎಂದು ಹೇಳಿದ್ದರು, ಈ ಹಿನ್ನೆಲೆಯಿಂದಾಗಿ ನನ್ನ ತಾಯಿ ನ್ಯಾಯಾಲಯದ ಮೊರೆ ಹೋಗಿದ್ದರು," ಎಂದು ಸುಮನ್ ತೌರ್ ತಿಳಿಸಿದ್ದಾರೆ.
|
'ಸಿದ್ದು ನನ್ನನ್ನು ಬ್ಲಾಕ್ ಮಾಡಿದ್ದಾರೆ'
ನವಜೋತ್ ಸಿಂಗ್ ಸಿಧು ಸಹೋದರಿ ಸುಮನ್ ತೌರ್ ಜನವರಿ 20 ರಂದು ನವಜೋತ್ ಸಿಧುರನ್ನು ಭೇಟಿಯಾಗಲು ಹೋಗಿದ್ದರು. ಆದರೆ ಸಿಧು ಬಾಗಿಲು ತೆರೆಯಲಿಲ್ಲ ಎಂದು ಸುಮನ್ ಹೇಳಿದ್ದಾರೆ. "ನವಜೋತ್ ಸಿಂಗ್ ಸಿಧುರನ್ನು ಸಂಪರ್ಕಿಸುವ ಪ್ರಯತ್ನ ವಿಫಲವಾದ ನಂತರ ನಾನು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವ ಸ್ಥಿತಿ ಉಂಟಾಗಿದೆ. ಸಿಧು ನನ್ನನ್ನು ತಮ್ಮ ಫೋನ್‌ನಲ್ಲಿ ಬ್ಲಾಕ್ ಮಾಡಿದ್ದಾರೆ. ಸಿಧು ಮನೆಯ ಕೆಲಸದವರು ಕೂಡಾ ಬಾಗಿಲು ತೆರೆಯುವುದಿಲ್ಲ. ನನ್ನ ತಾಯಿಗೆ ನ್ಯಾಯ ಬೇಕು," ಎಂದು ಸುಮನ್ ತೌರ್ ನುಡಿದಿದ್ದಾರೆ. "ನಾನು 70 ವರ್ಷ ವಯಸ್ಸಿನವಳು ಮತ್ತು ನಮ್ಮ ಕುಟುಂಬದ ಬಗ್ಗೆ ಈ ವಿಷಯಗಳನ್ನು ಬಹಿರಂಗಪಡಿಸುವುದು ನಿಜವಾಗಿಯೂ ನನಗೆ ಕಠಿಣ ವಿಚಾರ," ಎಂದಿದ್ದಾರೆ.

ಚುನಾವಣೆ ವೇಳೆ ಸಿಧು ಕುತ್ತು ತಂದ ಸುಮನ್?
58ರ ಹರೆಯದ ನವಜೋತ್ ಸಿಧು ವಿರುದ್ಧ ಸುಮನ್ ತೌರ್ ಪಂಜಾವ್ ವಿಧಾನಸಭೆ ಚುನಾವಣೆಗೂ ಮುನ್ನ ಬಂದಿದೆ. ಕಾಂಗ್ರೆಸ್ ನಾಯಕ ನವಜೋತ್ ಸಿಧು ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಯಾಗಿ ಪ್ರಚಾರ ಮಾಡುತ್ತಿರುವ ಸಮಯದಲ್ಲಿ ಹೊರ ಬಿದ್ದಿರುವ ಈ ವಿಚಾರವು ರಾಜಕೀಯ ವಲಯದಲ್ಲಿ ಭಾರೀ ಸಂಚಲನವನ್ನು ಮೂಡಿಸಿದೆ. ವಿಧಾನಸಭೆ ಚುನಾವಣೆಗೆ ಭಾರೀ ಕುತ್ತು ಉಂಟು ಮಾಡುವ ಸಾಧ್ಯತೆ ಇದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಎಲ್ಲಾ 117 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications