"ಸತ್ಯಕ್ಕಾಗಿ ನನ್ನ ಹೋರಾಟ"; ಕಾಂಗ್ರೆಸ್ಸಿಗೆ ನವಜೋತ್ ಸಿಧು ವಿಡಿಯೋ ಸಂದೇಶ
ಚಂಡೀಘರ್, ಸೆಪ್ಟೆಂಬರ್ 29: ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ನವಜೋತ್ ಸಿಂಗ್ ಸಿಧು ಹೈಕಮಾಂಡ್ ನಾಯಕರಿಗೆ ವಿಡಿಯೋ ಸಂದೇಶವೊಂದನ್ನು ರವಾನಿಸಿದ್ದಾರೆ. "ನನ್ನ ಕೊನೆಯುಸಿರು ಇರುವವರೆಗೂ ಸತ್ಯಕ್ಕಾಗಿ ನಾನು ಹೋರಾಟ ಮಾಡುತ್ತೇನೆ," ಎಂದು ಸಿಧು ಹೇಳಿದ್ದಾರೆ.
"ಇದು ನನ್ನ ವೈಯಕ್ತಿಕ ಹೋರಾಟವಲ್ಲ, ಬದಲಿಗೆ ತತ್ವಗಳ ಹೋರಾಟ. ನಾನು ತತ್ವಗಳಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ಕಳಂಕಿತರನ್ನು ಮರಳಿ ಮಂತ್ರಿ ಸ್ಥಾನಕ್ಕೆ ಕರೆ ತರುವುದನ್ನು ನಾನು ಒಪ್ಪುವುದಿಲ್ಲ," ಎಂದು ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆಗೆ ಇನ್ನೇನು ನಾಲ್ಕು ತಿಂಗಳು ಬಾಕಿ ಇರುವಂತೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ಪಡೆದುಕೊಳ್ಳಲಾಗಿದೆ. ರಾಜ್ಯದ ಸಿಎಂ ಸ್ಥಾನಕ್ಕೆ ಚರಣ್‌ಜಿತ್ ಸಿಂಗ್ ಚನ್ನಿರನ್ನು ಆಯ್ಕೆ ಮಾಡಲಾಗಿದೆ. ತದನಂತರದ ಬೆಳವಣಿಗೆಯಲ್ಲಿ ಚರಣ್‌ಜಿತ್ ಸಿಂಗ್ ಚನ್ನಿ ಆಯ್ಕೆ ಮಾಡಿಕೊಂಡ ತಮ್ಮ ಸಂಪುಟ ಸಚಿವರ ಬಗ್ಗೆ ನವಜೋತ್ ಸಿಂಗ್ ಸಿಧು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
|
ರಾಜ್ಯದಲ್ಲಿ ನ್ಯಾಯಕ್ಕಾಗಿ ಮುಂದುವರಿದ ಸಿಧು ಹೋರಾಟ
ಪಂಜಾಬ್‌ನಲ್ಲಿ ಕಾರ್ಯಚೂಚಿ ಹಾಗೂ ನ್ಯಾಯಕ್ಕಾಗಿ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ನವಜೋತ್ ಸಿಂಗ್ ಸಿಧು ತಮ್ಮ ವಿಡಿಯೋ ಸಂದೇಶದಲ್ಲಿ ಸಾರಿ ಹೇಳಿದ್ದಾರೆ. ನನ್ನ ಕೊನೆಯ ಉಸಿರು ಇರುವವರೆಗೂ ನ್ಯಾಯ ಮತ್ತು ಸತ್ಯಕ್ಕಾಗಿ ಹೋರಾಟ ನಡೆಸುತ್ತೇನೆ ಎಂದು ಹೇಳಿದ್ದಾರೆ.

ರಾಜೀನಾಮೆ ಬಗ್ಗೆ ಹೈಕಮಾಂಡ್ ನಾಯಕರಿಗೆ ಪತ್ರ
ಪಂಜಾಬ್ ಸಚಿವ ಸಂಪುಟದಲ್ಲಿನ ಬದಲಾವಣೆಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ನವಜೋತ್ ಸಿಂಗ್ ಸಿಧು, ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಕ್ಕೆ ಸಂಬಂಧಿಸಿದ ಪತ್ರವನ್ನು ಟ್ವೀಟ್ ಮಾಡಿದ್ದರು. "ರಾಜಿ ಮಾಡಿಕೊಳ್ಳುವುದರ ಮೂಲಕ ಮನುಷ್ಯನ ಪಾತ್ರದ ಕುಸಿಯಲು ಆರಂಭವಾಗುತ್ತದೆ. ಪಂಜಾಬ್‌ನ ಭವಿಷ್ಯ ಮತ್ತು ಪಂಜಾಬ್‌ನ ಕಲ್ಯಾಣದ ವಿಷಯದಲ್ಲಿ ನಾನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಆದ್ದರಿಂದ, ನಾನು ಈ ಮೂಲಕ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ಕಾಂಗ್ರೆಸ್ ಸೇವೆ ಮುಂದುವರಿಸುತ್ತೇನೆ," ಎಂದು ಎಐಸಿಸಿ ವಕ್ತಾರೆ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ನವಜೋತ್ ಸಿಧು ಉಲ್ಲೇಖಿಸಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ನವಜೋತ್ ಸಿಂಗ್ ಸಿಧು ರಾಜೀನಾಮೆ ಏಕೆ?
ಪಂಜಾಬ್ ನೂತನ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಮಾಡಿದ ಸಚಿವ ಸಂಪುಟದಲ್ಲಿನ ಬದಲಾವಣೆಗಳ ಬಗ್ಗೆ ಸಿಧು ತೀವ್ರ ಅಸಮಾಧಾನ ಹೊಂದಿದ್ದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಕೆಲವು ನಿರ್ಧಾರಗಳ ವಿಷಯದಲ್ಲಿ ನವಜೋತ್ ಸಿಂಗ್ ಸಿಧು "ಸೂಪರ್ ಸಿಎಂ" ರೀತಿಯಲ್ಲಿ ವರ್ತಿಸುತ್ತಿದ್ದರು, ಆದರೆ ಇತ್ತೀಚಿಗೆ ತೆಗೆದುಕೊಂಡ ಸರ್ಕಾರ ನೇಮಕಾತಿ ಮತ್ತು ಸಂಪುಟ ರಚನೆಯಲ್ಲಿ ಸಿಧುರನ್ನು ತೀವ್ರವಾಗಿ ನಿರ್ಲಕ್ಷಿಸಲಾಗಿತ್ತು ಎಂದು ವರದಿಯಾಗಿದೆ. ಅದರಲ್ಲೂ "ಸಕ್ರಿಲೇಜ್" ಪ್ರಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ನೀಡಲಾದ ಪ್ರಮುಖ ಹುದ್ದೆಗಳ ಬಗ್ಗೆ ಸಿಧು ಕೋಪಗೊಂಡಿದ್ದರು ಎಂದು ಗೊತ್ತಾಗಿದೆ.

ನವಜೋತ್ ಸಿಂಗ್ ಸಿಧು ರಾಜೀನಾಮೆ ತಿರಸ್ಕಾರ?
ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿಧು ನೀಡಿರುವ ರಾಜೀನಾಮೆಯನ್ನು ಹೈಕಮಾಂಡ್ ನಾಯಕರು ನಿರಾಕರಿಸಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಎಎನ್ಐ ವರದಿ ಪ್ರಕಾರ, ನವಜೋತ್ ಸಿಂಗ್ ಸಿಧು ರಾಜೀನಾಮೆಯನ್ನು ತಿರಸ್ಕರಿಸಿರುವ ಹೈಕಮಾಂಡ್ ನಾಯಕರು ರಾಜ್ಯ ಮಟ್ಟದಲ್ಲಿಯೇ ಬಿಕ್ಕಟ್ಟು ಬಗೆಹರಿಸಿಕೊಳ್ಳುವಂತೆ ಸ್ಥಳೀಯ ನಾಯಕರಿಗೆ ಸೂಚನೆ ನೀಡಿದ್ದಾರೆ.












Click it and Unblock the Notifications