ಬಾಂಡಲಿ, ಮಾವುಟಿ ಹಿಡಿದು ವಾಟಾಳ್ ನಾಗರಾಜ್ ಪ್ರತಿಭಟನೆ
ಚಾಮರಾಜನಗರ, ಸೆಪ್ಟೆಂಬರ್ 1: ಚಾಮರಾಜನಗರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬಾಂಡಲಿ-ಮಾವುಟಿ ಹಿಡಿದು, ಗೋಣಿ ತಾಟು ಹಾಸಿ ಅದರ ಮೇಲೆ ಕುಳಿತು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸತ್ಯಾಗ್ರಹ ನಡೆಸಿದರು.
ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಜಿಲ್ಲೆಯ ರಸ್ತೆಗಳು ಹದಗೆಟ್ಟಿದೆ. ಗರ್ಭಿಣಿಯರು ಹೆರಿಗೆಗೆಂದು ವಾಹನದಲ್ಲಿ ತೆರಳಿದರೆ ಆಸ್ಪತ್ರೆಗೆ ತಲುಪುವ ಮುನ್ನ ಮಾರ್ಗಮಧ್ಯದಲ್ಲಿ ಹೆರಿಗೆಯಾಗುತ್ತದೆ. ಚಾಮರಾಜನಗರದ ಎಲ್ಲ ಬೀದಿಯ ರಸ್ತೆಗಳು ಹಾಳಾಗಿ ಹಳ್ಳ-ಗುಂಡಿಗಳಾಗಿವೆ ಎಂದು ದೂರಿದರು.

ರಸ್ತೆ ವಿಸ್ತರಣೆಯಿಂದ ಮನೆಯನ್ನು ಕಳೆದುಕೊಂಡಿರುವ ನಿವಾಸಿಗಳಿಗೆ ಕೂಡಲೇ ನಿವೇಶನ ನೀಡಬೇಕು, ನಗರದಲ್ಲಿ 90 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದ್ದು, ತಕ್ಷಣವೇ ಕಾವೇರಿ ಕುಡಿಯುವ ನೀರಿನ ಎರಡನೇ ಹಂತ ಜಾರಿ ಆಗಬೇಕು. ಒಳಚರಂಡಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಬೇಗ ಮುಗಿಸಬೇಕು ಎಂದು ಆಗ್ರಹಿಸಿದರು.
ಚಾಮರಾಜನಗರವನ್ನು ಜಿಲ್ಲೆಯನ್ನಾಗಿ ಮಾಡಿದವನು ನಾನೇ. ಕುಡಿಯಲು ಕಾವೇರಿ ನೀರು ತಂದವನು ನಾನೇ. ಜೋಡಿರಸ್ತೆ, ಖಾಸಗಿ ಬಸ್ ನಿಲ್ದಾಣ, ಆಟದ ಮೈದಾನ ಸೇರಿದಂತೆ ಇನ್ನೂ ಅನೇಕ ಅಭಿವೃದ್ಧಿ ಕೆಲಸವನ್ನು ಮಾಡಿದ್ದೇನೆ ಎಂದು ತಿಳಿಸಿದ ವಾಟಾಳ್ ನಾಗರಾಜ್, ಇನ್ನು 15 ದಿನಗಳ ಒಳಗಾಗಿ ನಗರ ಪ್ರದೇಶವನ್ನು ಅಭಿವೃದ್ಧಿ ಪಡಿಸದಿದ್ದರೆ ನಡು ಬೀದಿಯಲ್ಲಿ ಮಲಗಿ ಉರುಳು ಸೇವೆ ಮಾಡುವುದಾಗಿ ಎಚ್ಚರಿಕೆ ನೀಡಿದರು.












Click it and Unblock the Notifications