ಮಾಜಿ ಬಿಗ್‌ಬಾಸ್ ಸ್ಪರ್ಧಿ ಚಾಮರಾಜನಗರದಿಂದ ಲೋಕಸಭೆಗೆ ಸ್ಪರ್ಧೆ?
ಚಾಮರಾಜನಗರ, ಆಗಸ್ಟ್ 22: ವಿವಿಧ ರಾಜಕೀಯ ಪಕ್ಷಗಳು 2024ರ ಲೋಕಸಭೆ ಚುನಾವಣೆಯ ತಯಾರಿಯನ್ನು ಆರಂಭಿಸಿವೆ. ಮುಂದಿನ ಚುನಾವಣೆಯಲ್ಲಿ ಹಲವಾರು ಜನರು ಟಿಕೆಟ್ ಬಯಸಿ ಪ್ರಯತ್ನ ನಡೆಸುತ್ತಿದ್ದಾರೆ. ಇದರಲ್ಲಿ ಸಿನಿಮಾ, ಸೀರಿಯಲ್ ತಾರೆಗಳು ಸಹ ಸೇರಿದ್ದಾರೆ.
ಕರ್ನಾಟಕದ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸೆಲೆಬ್ರಿಟಿಯೊಬ್ಬರು ಲೋಕಸಭಾ ಚುನಾವಣಾ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಬಿಜೆಪಿ ಟಿಕೆಟ್‌ಗಾಗಿ ಸೀರಿಯಲ್ ನಟ ಪ್ರಯತ್ನ ನಡೆಸುತ್ತಿದ್ದಾರೆ.

ನಟ ಅರ್ಜುನ್ ರಮೇಶ್ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿದ್ದಾರೆ ಎಂಬುದು ಸದ್ಯದ ಸುದ್ದಿ. ಚಾಮರಾಜನಗರ ಲೋಕಸಭಾ ಕ್ಷೇತ್ರ ಸದ್ಯ ಬಿಜೆಪಿಯ ವಶದಲ್ಲಿಯೇ ಇದೆ. ಹಾಲಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಆರೋಗ್ಯದ ಕಾರಣಕ್ಕಾಗಿ ಮುಂದಿನ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಆದ್ದರಿಂದ ಹೊಸ ಅಭ್ಯರ್ಥಿ ಹುಡುಕುವುದು ಅನಿವಾರ್ಯವಾಗಿದೆ.
ಯಾರು ಅರ್ಜುನ್ ರಮೇಶ್?; ಕನ್ನಡದ ಧಾರವಾಹಿಗಳಾದ ಅಗ್ನಿಸಾಕ್ಷಿ, ಇಂತಿ ನಿಮ್ಮ ಆಶಾದಲ್ಲಿ ನಟಿಸಿರುವ ಅರ್ಜುನ್ ರಮೇಶ್ ಬಿಗ್‌ಬಾಸ್ ಕನ್ನಡ ಒಟಿಟಿ ಸೀಸನ್-1ರ ಮಾಜಿ ಸ್ಪರ್ಧಿ.
ಚಾಮರಾಜನಗರ ಎಸ್‌ಸಿ ಮೀಸಲು ಕ್ಷೇತ್ರವಾಗಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಿಂದ ಅರ್ಜುನ್ ರಮೇಶ್ ಟಿಕೆಟ್ ಬಯಸಿದ್ದಾರೆ. ಈ ಕುರಿತು ಅವರು ಮಾಧ್ಯಮಗಳ ಜೊತೆ ಸಹ ಮಾತನಾಡಿದ್ದಾರೆ.
ಅರ್ಜುನ್ ರಮೇಶ್ ಮಾತನಾಡಿ, 'ನಾನು ಕಳೆದ 12 ವರ್ಷಗಳಿಂದ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಟಿ. ನರಸೀಪುರ ಪುರಸಭಾ ಸದಸ್ಯನಾಗಿ ಅತ್ಯಧಿಕ ಮತಗಳಿಂದ ಆಯ್ಕೆಯಾಗಿದ್ದೇನೆ" ಎಂದರು.
"ನನ್ನ ತಂದೆ ವಿಧಾನ ಪರಿಷತ್‌ನ ಮಾಜಿ ಸದಸ್ಯ ಸಿ. ರಮೇಶ್ ಕಳೆದ 20 ವರ್ಷಗಳಿಂದ ಪಕ್ಷ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದಾರೆ. ನನಗೆ ಪಕ್ಷ ಈ ಬಾರಿ ಅವಕಾಶ ಮಾಡಿಕೊಡಬೇಕು ಎಂದು ವರಿಷ್ಠರಿಗೆ ಮನವಿ ಮಾಡಿದ್ದೇನೆ. ನನಗೆ ಟಿಕೆಟ್ ಕೊಡಲಿ, ಬಿಡಲಿ ಬಿಜೆಪಿಯಲ್ಲಿಯೇ ಇರುತ್ತೇನೆ" ಎಂದು ಅರ್ಜುನ್ ರಮೇಶ್ ಸ್ಪಷ್ಟಪಡಿಸಿದರು.
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿ. ಶ್ರೀನಿವಾಸ ಪ್ರಸಾದ್ 568,537 ಮತಗಳನ್ನು ಪಡೆದು ಚಾಮರಾಜನಗರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ.
76 ವರ್ಷದ ವಿ. ಶ್ರೀನಿವಾಸ ಪ್ರಸಾದ್ ಆರೋಗ್ಯದ ಕಾರಣದಿಂದ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯುವುದಿಲ್ಲ. ಈಗಾಗಲೇ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆದ್ದರಿಂದ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಲ್ಲ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಆರ್. ಧ್ರುವ ನಾರಾಯಣ 566,720 ಮತಗಳನ್ನು ಪಡೆದು ಸೋಲು ಕಂಡಿದ್ದರು. ಅವರು 2014ರಲ್ಲಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಅವರು ಹೃದಯಾಘಾತದಿಂದ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ವಿಧಿವಶರಾದರು.
ಕರ್ನಾಟಕದಲ್ಲಿರುವ 28 ಲೋಕಸಭಾ ಸ್ಥಾನಗಳು. ಕಳೆದ ಚುನಾವಣೆಯಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಎದುರಾಳಿಗಳಿಗೆ ಭಾರೀ ಆಘಾತ ನೀಡಿತ್ತು. ಹಾಸನ (ಪ್ರಜ್ವಲ್ ರೇವಣ್ಣ), ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌ನ ಡಿ. ಕೆ. ಸುರೇಶ್ ಗೆಲುವು ಕಂಡಿದ್ದರು.
ಆದರೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡು ಕಂಗೆಟ್ಟಿರುವ ಬಿಜೆಪಿಗೆ ಮುಂದಿನ ಲೋಕಸಭಾ ಚುನಾವಣೆ ಸವಾಲಾಗಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಈಗಾಗಲೇ ತಂತ್ರ ರೂಪಿಸುತ್ತಿದೆ. ಆದ್ದರಿಂದ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications