ಮಲೆಮಹದೇಶ್ವರ ಬೆಟ್ಟದ ಹಳಿಯೂರು ಗೇಟ್ ಬಳಿ ಅರಣ್ಯಾಧಿಕಾರಿಗಳು ಹಾಗೂ ಜನರ ನಡುವೆ ಸಮರ-ಯಾಕೆ ಗೊತ್ತಾ?
ಚಾಮರಾಜನಗರ, ಮಾರ್ಚ್, 20: ತಮ್ಮ ಊರುಗಳಿಗೆ ಸಂಜೆ ಹೊತ್ತು ತೆರಳಲು ಅಸಾಧ್ಯವಾಗಿದೆ ಎಂದು ಪ್ರತಿಭಟನೆ ಮಾಡಿದ ಘಟನೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಹಳಿಯೂರು ಗೇಟ್ ಬಳಿ ನಡೆದಿದೆ.
ಮಲೆ ಮಹದೇಶ್ವರ ವನ್ಯಜೀವಿ ಧಾಮದ ಅರಣ್ಯಾಧಿಕಾರಿಗಳು ನಾಗಮಲೆಗೆ ತೆರಳುವ ಭಕ್ತರಿಗೆ ನಿರ್ಬಂಧ ಮಾಡಿದ್ದಾರೆ. ನಿರ್ಬಂಧ ಭಕ್ತರಿಗೇನೋ ಸರಿ ಆದರೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ತೆರಳುವ ಮಾರ್ಗದಲ್ಲಿ ಹಲವಾರು ಪೋಡುಗಳಿದ್ದು, ಅಲ್ಲಿ ವಾಸಿಸುವ ನಮಗೆ ತಿರುಗಾಟ ಮಾಡಲು ತೊಂದರೆಯಾಗುತ್ತಿದ್ದು, ರಸ್ತೆ ಮಾರ್ಗದಲ್ಲಿ ಗೇಟ್ ಅನ್ನು ಹಾಕಿ ಬೀಗಹಾಕಲಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಸಂಜೆ ಸಮಯ ಹಾಗೂ ಮಧ್ಯಾಹ್ನದ ವೇಳೆ ಬೀಗ ಹಾಕುವುದರಿಂದ ಸ್ಥಳೀಯರಿಗೆ ತೊಂದರೆಯಾಗಿದೆ. ದಿನದ 24 ತಾಸು ಕೂಡ ಗ್ರಾಮಸ್ಥರು ತಮ್ಮ ವಾಹನದಲ್ಲಿ ನಿರ್ಭಿತಿಯಿಂದ ಸಂಚಾರ ಮಾಡಲು ಅವಕಾಶ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಇನ್ನು, ಸ್ಥಳಕ್ಕೆ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಪಿಐ ಭೇಟಿ ನೀಡಿ ಜನರ ಸಮಸ್ಯೆ ಆಳಿಸಿ, ಸ್ಥಳೀಯರ ಸಂಚಾರಕ್ಕೆ ಅವಕಾಶ ಕೊಡಬೇಕು. ಗೇಟ್‌ಗೆ ಬೀಗ ಹಾಕಿ ಎಲ್ಲೋ ಹೋದರೆ ಜನರು ಏನು ಮಾಡಬೇಕು. ಜನರ ಅನೂಕೂಲಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸಿ ಎಂದು ತರಾಟೆಗೆ ತೆಗೆದುಕೊಂಡು ಸೂಚಿಸಿದರು.
ಮೂಲಸೌಲಭ್ಯ ಕೊಡದಿದ್ರೆ ಮತ ಕೇಳ್ಬೇಡಿ: ಮೂಲಸೌಕರ್ಯಕ್ಕೆ ಆಗ್ರಹಿಸಿ ಗ್ರಾಮಸ್ಥರು ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿರುವ ಘಟನೆ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದಲ್ಲಿ ನಡೆದಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಇಂಡಿಗನತ್ತ ಗ್ರಾಮಸ್ಥರು ಇಂದು (ಮಾರ್ಚ್ 14) ಸಭೆ ಸೇರಿ ಮೂಲಭೂತ ಸೌಲಭ್ಯ ನೀಡಿ. ಇಲ್ಲದಿದ್ದರೇ ಮತ ಕೇಳಲು ಬರಬೇಡಿ, ನಾವು ವೋಟು ಹಾಕುವುದಿಲ್ಲ ಎಂಬ ನಿರ್ಧಾರ ಕೈಗೊಂಡಿದ್ದಾರೆ. ಗ್ರಾಮದ ಮುಖಂಡ ಪುಟ್ಟ ತಂಬಡಿ ಎಂಬವರು ಸಭೆಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ನಾಗಮಲೆ, ಇಂಡಿಗನತ್ತ, ತೋಕೆರೆ, ಪಡಸಲನತ್ತ ಮೆಂದಾರೆ, ತೇಕಾಣೆ ಗ್ರಾಮಗಳಲ್ಲಿ ಕನಿಷ್ಠ ಮೂಲಸೌಕರ್ಯವೂ ಇಲ್ಲಂದತಾಗಿದೆ.
ರಸ್ತೆ ಇಲ್ಲಾ, ವಿದ್ಯುತ್ ಇಲ್ಲಾ, ಕುಡಿಯುವ ನೀರಿನ ಸೌಲಭ್ಯವಿಲ್ಲ. ಖಾಸಗಿ ಜೀಪ್‌ಗಳಲ್ಲಿ ಬರುತ್ತಿದ್ದೆವು. ಈಗ ಅದಕ್ಕೂ ಅರಣ್ಯ ಇಲಾಖೆ ನಿರ್ಬಂಧ ಹೇರಿದ್ದು, ಜೀವನ ನಡೆಸುವುದೇ ದುಸ್ತರವಾಗಿದೆ. ಹಿಂದೆ ಅಧಿಕಾರಿಗಳು, ಸಚಿವರು ನೀಡಿದ್ದ ಭರವಸೆ ಭರವಸೆಯಾಗೇ ಉಳಿದಿದೆ ಎಂದು ಕಿಡಿಕಾರಿದರು.
ಮೂಲಸೌಕರ್ಯವೇ ಮರೀಚಿಕೆಯಾಗಿರುವ ಗ್ರಾಮಕ್ಕೆ ಸರ್ಕಾರ ನೀಡಿರುವ ಆಧಾರ್ ಕಾರ್ಡ್, ವೋಟರ್ ಐಡಿ, ಪಡಿತರ ಚೀಟಿಗಳನ್ನು ವಾಪಸ್ ಪಡೆದು ನಮಗೆ ಸಾಯಲು ವಿಷ ನೀಡಿ. ಇಲ್ಲದಿದ್ದರೆ ಮೂಲಭೂತ ಸೌಲಭ್ಯ ಕೊಡಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 5000ಕ್ಕೂ ಹೆಚ್ಚು ಜನಸಂಖ್ಯೆ ಇರುವ ಮಾದಪ್ಪನ ಬೆಟ್ಟದ ತಪ್ಪಲಿನ ಗ್ರಾಮಸ್ಥರು ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications