ಗುಂಡ್ಲುಪೇಟೆ: ಮೊಳಕೆ ಹುರುಳಿಕಾಳು ಸಾರು ಸೇವಿಸಿ 31 ಮಂದಿ ವಿದ್ಯಾರ್ಥಿಗಳು ಅಸ್ವಸ್ಥ-ಆಸ್ಪತ್ರೆಗೆ ದಾಖಲು
ಚಾಮರಾಜನಗರ, ಮಾರ್ಚ್, 15: ಮಧ್ಯಾಹ್ನದ ಬಿಸಿಯೂಟ ಸೇವಿಸಿ ವಾಂತಿ ಕಾಣಿಸಿಕೊಂಡ ಹಿನ್ನೆಲೆ ಸುಮಾರು 31 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚಿರಕನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ (ಮಾರ್ಚ್ 15) ನಡೆದಿದೆ.
ಚಿರಕನಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿಯಲ್ಲಿ ಒಟ್ಟು 35 ಮಂದಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇದರಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ತಯಾರಿಸಿದ್ದ ಹುರುಳಿ ಮೊಳಕೆ ಕಾಳಿನ ಸಾಂಬರ್ ಸೇವಿಸಿ 14 ಮಂದಿ ಮಕ್ಕಳಿಗೆ ವಾಂತಿ ಕಾಣಿಸಿಕೊಂಡಿದೆ. ಕೂಡಲೇ ವಿದ್ಯಾರ್ಥಿಗಳನ್ನು ಬೊಮ್ಮನಹಳ್ಳಿ ಆಸ್ಪತ್ರೆಗೆ ರವಾನಿಸಿ ಗ್ಲೂಕೋಸ್ ಕಟ್ಟಿ, ಇಂಜೆಕ್ಷನ್ ನೀಡಲಾಗಿದೆ. ಬಳಿಕ ಮಕ್ಕಳು ಅಪಾಯಾದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಉಳಿದ 17 ಮಂದಿ ವಿದ್ಯಾರ್ಥಿಗಳಿಗೆ ಮಾತ್ರೆ ನೀಡಿ ಮನೆಗೆ ಕಳುಹಿಸಲಾಗಿತ್ತು. ನಂತರ ಪೋಷಕರ ಒತ್ತಾಯದ ಮೇರೆಗೆ ಅಸ್ವಸ್ಥಗೊಂಡಿದ್ದ 14 ಮಕ್ಕಳು ಹಾಗೂ ಮನೆಗೆ ತೆರಳಿದ್ದ 17 ಮಂದಿ ಸೇರಿದಂತೆ ಒಟ್ಟು 31 ಮಕ್ಕಳನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಾಸನೆ ಬರುತ್ತಿದ್ದ ಸಾಂಬರ್: ಮಧ್ಯಾಹ್ನದ ಬಿಸಿಯೂಟಕ್ಕೆ ತಯಾರಿಸಿದ್ದ ಹುರುಳಿ ಕಾಳನ್ನು ನಾಲ್ಕೈದು ದಿನಗಳ ಹಿಂದೆಯೇ ಮೊಳಕೆಗೆ ಕಟ್ಟಿ ಹಿಡಲಾಗಿತ್ತು. ಇದರಿಂದ ಮೊಳಕೆ ಕಾಳು ವಾಸನೆ ಬರುತ್ತಿತ್ತು. ಅದನ್ನೇ ಹಾಕಿ ಸಾಂಬರ್ ಮಾಡಿದ ನಂತರವೂ ಹೆಚ್ಚಿನ ವಾಸನೇ ಸೂಸುತ್ತಿತ್ತು. ಹೀಗಿದ್ದರೂ ಕೂಡ ಅಡುಗೆಯವರು ಸಾಂಬರ್ ಮಾಡಿ ಬಡಿಸಿದ ಕಾರಣ ಮಕ್ಕಳು ಅದನ್ನು ಸೇವನೆ ಮಾಡಿದ್ದಾರೆ. ವಾಸನೆ ಬರುತ್ತಿರುವ ಕುರಿತು ಮಕ್ಕಳೇ ನಮಗೆ ಹೇಳಿದ್ದಾರೆ ಎಂದು ಪೋಷಕರಾದ ಸುರೇಶ್ ಎಂಬವರು ಆರೋಪಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ: ಚಿರಕನಹಳ್ಳಿ ಶಾಲೆಯಲ್ಲಿ ಮಕ್ಕಳು ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ ಮಾಹಿತಿ ಅರಿತ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್ ಶಾಲೆಗೆ ಭೇಟಿ ನೀಡಿ, ಮಕ್ಕಳು ಸೇವಿಸಿರುವ ಅಡುಗೆಯ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಿದ್ದಾರೆ. ಜೊತೆಗೆ ಮಕ್ಕಳ ಆರೋಗ್ಯ ವಿಚಾರಣೆ ನಡೆಸಿ ಸೂಕ್ತ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.












Click it and Unblock the Notifications