ನವೆಂಬರ್ 15ರಿಂದ ಕಛೇರಿಗೆ ಬನ್ನಿ; ಉದ್ಯೋಗಿಗಳಿಗೆ ವಿಪ್ರೋ ಸೂಚನೆ
ಬೆಂಗಳೂರು, ನವೆಂಬರ್ 07; ಕಛೇರಿಗೆ ಕಡ್ಡಾಯವಾಗಿ ಹಾಜರಾಗಿ ಕೆಲಸ ಮಾಡಬೇಕು ಎಂಬ ಆದೇಶ ಹೊರಡಿಸಿರುವ ಪಟ್ಟಿಗೆ ವಿಪ್ರೋ ಸೇರಿದೆ. ನವೆಂಬರ್ 15ರಿಂದಲೇ ಜಾರಿಗೆ ಬರುವಂತೆ ಕಛೇರಿಗೆ ಬರಬೇಕು ಎಂದು ಉದ್ಯೋಗಿಗಳಿಗೆ ಸೂಚನೆ ನೀಡಿದೆ.
ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿ ವಿಪ್ರೋ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ನಿಧಾನವಾಗಿ ತೆಗೆದು ಹಾಕುವ ಪ್ರಕ್ರಿಯೆಯನ್ನು ಆರಂಭಿಸಿದೆ. ಇದರ ಭಾಗಿವಾಗಿಯೇ ವಾರದಲ್ಲಿ ಮೂರು ದಿನ ಕಛೇರಿಗೆ ಬಂದು ಕೆಲಸ ಮಾಡಬೇಕು ಎಂದು ಹೇಳಿದೆ.

ನವೆಂಬರ್ 15ರಿಂದಲೇ ಜಾರಿಗೆ ಬರುವಂತೆ ಕಡ್ಡಾಯವಾಗಿ ವಾರದಲ್ಲಿ ಮೂರು ದಿನ ಕಛೇರಿಗೆ ಹಾಜರಾಗಿ ಕೆಲಸ ಮಾಡಬೇಕು ಎಂದು ವಿಪ್ರೋ ಹೇಳಿದೆ. ಅಲ್ಲದೇ ಈ ನಿಯಮ ಉಲ್ಲಂಘನೆ ಮಾಡಿದರೆ ಜನವರಿ 7, 2024ರ ಬಳಿಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದೆ.
ಇನ್ಫೋ, ಟಿಸಿಎಸ್ ಸಹ ಕರೆ; ಭಾರತದ 4ನೇ ಅತಿ ದೊಡ್ಡ ಐಟಿ ಕಂಪನಿಯಾಗಿರುವ ವಿಪ್ರೋ ಉದ್ಯೋಗಿಗಳನ್ನು ಕಛೇರಿಗೆ ಕರೆದಿರುವ 3ನೇ ಕಂಪನಿಯಾಗಿದೆ. ಈಗಾಗಲೇ ಟಿಸಿಎಸ್ ಮತ್ತು ಇನ್ಫೋಸಿಸ್ ವಾರದಲ್ಲಿ ಐದು ದಿನ ಅಥವ ತಿಂಗಳಿನಲ್ಲಿ 10 ದಿನ ಉದ್ಯೋಗಿಗಳು ಕಛೇರಿಯಿಂದಲೇ ಕೆಲಸ ಮಾಡಬೇಕು ಎಂದು ತಿಳಿಸಿವೆ.
ವಿಪ್ರೋದ ಹೆಚ್ಆರ್ ವಿಭಾಗದ ಮುಖ್ಯಸ್ಥರು ಕಛೇರಿಗೆ ಬರುವ ಕುರಿತು ಉದ್ಯೋಗಿಗಳಿಗೆ ಇ-ಮೇಲ್ ಕಳಿಸಿದ್ದಾರೆ. ನವೆಂಬರ್ 15ರಿಂದ ಜಾರಿಗೆ ಬರುವಂತೆ ಉದ್ಯೋಗಿಗಳು ನಿಗದಿತ ಕಛೇರಿಗೆ ಹಾಜರಾಗುವುದು ಕಡ್ಡಾಯ. ಟೀಂ ಆಗಿ ಕೆಲಸ ಮಾಡುವುದು, ಮೌಖಿಕ ಸಂವಹನಗಳು ಕೆಲಸವ ವಾತಾವರಣವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲಿದೆ ಎಂದು ಹೇಳಿದ್ದಾರೆ.
ನವೆಂಬರ್ 6ರಂದು ಈ ಕುರಿತು ಇ-ಮೇಲ್ ಕಳಿಸಲಾಗಿದೆ. ಕಂಪನಿಯ ಕೆಲಸದ ನಿಯಮಾವಳಿಗಳಲ್ಲಿ ಬದಲಾವಣೆ ತರಲು ಇತ್ತೀಚೆಗೆ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಹೊಸ ನಿಯಮಾವಳಿ ಪಾಲನೆ ಮಾಡದಿದ್ದರೆ ಉದ್ಯೋಗಿಗಳ ಮೇಲೆ ಜನವರಿ 7, 2024ರ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಮ್ಯಾನೇಜರ್ ಮತ್ತು ಟೀಮ್ ಲೀಡರ್‌ಗಳ ಜೊತೆಗಿನ ನಂಬಿಕೆ ಮತ್ತು ವಿಶ್ವಾಸಾರ್ಹತೆಯ ನಷ್ಟ, ಕಾರ್ಯಕ್ಷಮತೆ ಮತ್ತು ಕೆಲಸದ ಗುಣಮಟ್ಟ ಕಡಿಮೆಯಾಗಿದೆ. ಹೆಚ್ಚಿದ ಒತ್ತಡ, ತಂಡಗಳೊಳಗಿನ ಅಸಮಾಧಾನ ಹೆಚ್ಚಿದೆ. ಇದರಿಂದಾಗಿ ಹೆಚ್ಚುವರಿಯಾಗಿ ಶಿಸ್ತಿನ ಕ್ರಮಗಳನ್ನು ವಿಪ್ರೋ ಕೈಗೊಳ್ಳಬಹುದು ಎಂದು ಹೇಳಿದೆ.
ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಆದೇಶದಂತೆ ಎಲ್ಲಾ ಐಟಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ನೀಡಿದ್ದವು. ಆಗ ಹಲವಾರು ಉದ್ಯೋಗಿಗಳು ಬೆಂಗಳೂರು ಸೇರಿದಂತೆ ವಿವಿಧ ನಗರಗಳನ್ನು ಬಿಟ್ಟು ತಮ್ಮ ತಮ್ಮ ಊರುಗಳಿಗೆ ಹೋಗಿ ನೆಲೆಸಿದ್ದರು.
ಕೋವಿಡ್ ಪರಿಣಾಮ ಕಡಿಮೆಯಾದ ಬಳಿಕವೂ ಹಲವಾರು ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಮುಂದುವರೆಸಿದ್ದವು. ಆದರೆ 2023ರ ಆರಂಭದಿಂದಲೇ ಹಲವು ಕಂಪನಿಗಳು ಕೆಲವು ಉದ್ಯೋಗಿಗಳಿಗೆ ಕಛೇರಿಗೆ ಬರಲು ಸೂಚನೆ ನೀಡಿದ್ದವು.
ಹಲವು ಕಂಪನಿಗಳು ಆಗಸ್ಟ್, ಸೆಪ್ಟೆಂಬರ್ ಬಳಿಕ ವಾರದಲ್ಲಿ ಕನಿಷ್ಠ 3 ದಿನ ಕಛೇರಿಯಿಂದ ಕೆಲಸ ಮಾಡಿ ಎಂದು ಉದ್ಯೋಗಿಗಳಿಗೆ ಸೂಚನೆ ನೀಡಿದ್ದವು. 2024ರಲ್ಲಿ ಎಲ್ಲಾ ಐಟಿ ಕಂಪನಿಗಳು ಉದ್ಯೋಗಿಗಳನ್ನು ಕಛೇರಿಗೆ ಕರೆಯುವ ನಿರೀಕ್ಷೆ ಇದೆ.
ಬೆಂಗಳೂರಿನಂತಹ ಮಹಾನಗರದಲ್ಲಿ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಸಿಕ್ಕಿರುವುದು ಉದ್ಯೋಗಿಗಳಿಗೆ ವರದಾನವಾಗಿತ್ತು. ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡು ಕಛೇರಿಗೆ ಹೋಗಿ, ಬರುವ ಸಮಯ ಉಳಿಯಾತವಾಗುತ್ತಿತ್ತು. ಆದರೆ ಇದರಿಂದ ಕ್ಯಾಬ್ ಸೇರಿದಂತೆ ವಿವಿಧ ಉದ್ಯಮ ನಷ್ಟವನ್ನು ಎದುರಿಸುತ್ತಿತ್ತು. ಈಗ ಪುನಃ ಉದ್ಯೋಗಿಗಳು ಕಛೇರಿಗೆ ಹೋಗಲು ಪ್ರಾರಂಭಿಸಿದರೆ ನಗರದಲ್ಲಿ ಸಂಚಾರನ ದಟ್ಟಣೆ ಹೆಚ್ಚಾಗಲಿದೆ.












Click it and Unblock the Notifications