ನಿರೀಕ್ಷಿತ ಲಾಭ ಬಂದರೂ ವಿಪ್ರೋ ಷೇರು ಕುಸಿತ

ಬಿಎಸ್ ಇನಲ್ಲಿ ವಿಪ್ರೋ ಷೇರುಗಳು ಬುಧವಾರ (ಅ.23) ಮಧ್ಯಾಹ್ನ 13.36ರ ವೇಳೆಗೆ 497.80 ರು ಬೆಲೆಯಂತೆ 17.10 ರು ಕಳೆದುಕೊಂಡು ಶೇ 3.32 ರಷ್ಟು ಕುಸಿತ ಕಂಡಿದೆ. ಇದೇ ವೇಳೆ ಎನ್ಎಸ್ ಇನಲ್ಲಿ 497.70 ರು ನಂತೆ ಶೇ 3.32 ರಷ್ಟು ಇಳಿಕೆಯಾಗಿದೆ. ದಿನದ ಆರಂಭದಲ್ಲಿ ಬಿಎಸ್ಇ ನಲ್ಲಿ 471.55 ರು ಹಾಗೂ ಎನ್ ಎಸ್ ಇನಲ್ಲಿ 492.65 ರು ಬೆಲೆಯಂತೆ ಷೇರುಗಳು ಏರಿಳಿತ ಕಂಡಿದ್ದವು.
ಸೆ.30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಸಂಸ್ಥೆ 1,932.1 ಕೋಟಿ ರು. ನಿವ್ವಳ ಲಾಭ ಗಳಿಸುವ ಮೂಲಕ ಶೇ. 28ರಷ್ಟು ಪ್ರಗತಿ ಸಾಧಿಸಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದ ನಡುವೆಯೂ ಕಂಪೆನಿ ಉತ್ತಮ ಪ್ರಗತಿ ಸಾಧಿಸಿದೆ. ಆದಾಯದಲ್ಲೂ ಶೇ. 19.96ರಷ್ಟು ವೃದ್ಧಿ ಕಂಡು ಬಂದಿದ್ದು, 10,992 ಕೋಟಿ ರೂ. ತಲುಪಿದೆ. ತ್ತೈಮಾಸಿಕ ಅವಧಿಯಲ್ಲಿ ಕಂಪೆನಿಯ ಆದಾಯ 10 ಸಾವಿರ ಕೋಟಿ ತಲುಪಿರುವುದು ಇದೇ ಮೊದಲು ಎಂದು ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ ಜಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹರ್ಷ ವ್ಯಕ್ತಪಡಿಸಿದರು.
ಐಟಿ ಸೇವೆಯ ವಹಿವಾಟಿನಲ್ಲೂ ಶೇ. 5.9ರಷ್ಟು ಹೆಚ್ಚಳವಾಗಿದ್ದು, 1.63 ಬಿಲಿಯನ್ ಅಮೆರಿಕ ಡಾಲರ್ ಆಗಿದೆ. ಇದು ರೂಪಾಯಿಯಲ್ಲಿ 10,068 ಕೋಟಿ ರೂ. ಆಗುತ್ತದೆ. ಮುಂದಿನ ದಿನಗಳಲ್ಲಿ ಐಸಿ ಸೇವೆಯ ವಹಿವಾಟು 1.66ರಿಂದ 1.69 ಬಿಲಿಯನ್ ಅಮೆರಿಕ ಡಾಲರ್ ಗೆ ಏರಿಕೆಯಾಗುವ ವಿಶ್ವಾಸ ಇದೆ ಎಂದು ಇದೇ ಸಂದರ್ಭದಲ್ಲಿ ಅಜೀಂ ಪ್ರೇಮ್ ಜಿ ವಿಶ್ವಾಸ ವ್ಯಕ್ತಪಡಿಸಿದರು.
ವಿಪ್ರೋಗೆ ಈ ಬಾರಿಯ ದ್ವಿತೀಯ ತ್ತೈಮಾಸಿಕದಲ್ಲಿ 45 ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ. ಇದರಿಂದ ವಿವಿಧ ದೇಶಗಳಿಂದ ಒಟ್ಟಾರೆ 1,256 ಗ್ರಾಹಕರನ್ನು ಹೊಂದಿದಂತಾಗಿದೆ. ಈ ಪೈಕಿ ಅಮೆರಿಕ ಅತಿ ಹೆಚ್ಚು ಆದಾಯ ತಂದು ಕೊಡುವ ದೇಶವಾಗಿದೆ. ಇನ್ನು ಕಂಪೆನಿಯ ಐಟಿ ಸೇವೆಗಳ ಕ್ಷೇತ್ರದಲ್ಲಿ ಉದ್ಯೋಗಿಗಳ ಸಂಖ್ಯೆ ಇಳಿಮುಖವಾಗಿದ್ದು, ಕಳೆದ ತ್ತೈಮಾಸಿಕದಲ್ಲಿ ಉದ್ಯೋಗಿಗಳ ಸಂಖ್ಯೆ 1,47,281 ಇತ್ತು. ದ್ವಿತೀಯ ತ್ತೈಮಾಸಿಕದ ಅಂತ್ಯಕ್ಕೆ 1,47,216 ಆಗಿದೆ ಎಂದು ವಿಪ್ರೋ ಪ್ರಕಟಣೆ ತಿಳಿಸಿದೆ.












Click it and Unblock the Notifications