ಮಲ್ಯ ಅವರ ಪಾಸ್ ಪೋರ್ಟ್ ರದ್ದು : ವಿದೇಶಾಂಗ ಸಚಿವಾಲಯ
ನವದೆಹಲಿ, ಏಪ್ರಿಲ್ 24: ಮನಿ ಲಾಂಡ್ರಿಂಗ್ ಹಾಗೂ ಬ್ಯಾಂಕ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಕಾಸ್ ನೋಟಿಸ್ ಗೆ ಮಲ್ಯ ಅವರು ಸಮರ್ಪಕ ಉತ್ತರ ನೀಡದ ಕಾರಣ, ಅವರ ಪಾಸ್ ಪೋರ್ಟ್ ರದ್ದುಗೊಳಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.
ಮನಿಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಯ ಅವರ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವಂತೆ ವಿದೇಶಾಂಗ ಸಚಿವಾಲಯಕ್ಕೆ ಜಾರಿ ನಿರ್ದೇಶನಾಲಯ ಏಪ್ರಿಲ್ 15ರಂದು ಮನವಿ ಸಲ್ಲಿಸಿತ್ತು.[ಮಲ್ಯ ಒಡೆತನದಲ್ಲಿದ್ದ 6 ಕಂಪನಿಗಳ ಸ್ಥಿತಿ ಗತಿ ಏನಾಗಿದೆ?]

ಈ ಹಿಂದೆ ಅನೇಕ ಬಾರಿ ರೆಡ್ ಕಾರ್ನರ್, ಜಾಮೀನು ರಹಿತ ವಾರೆಂಟ್, ನೋಟಿಸುಗಳು ಜಾರಿಯಾದರೂ ಮಲ್ಯ ಅವರ ಪಾಸ್ ಪೋರ್ಟ್ ಜಪ್ತಿ ಮಾಡಲು ಆಗಿರಲಿಲ್ಲ. ಸದ್ಯ ವಿದೇಶದಲ್ಲಿರುವ ಮಲ್ಯ ಅವರ ಸಂಪರ್ಕ ಕೂಡಾ ಸಾಧ್ಯವಾಗಿರಲಿಲ್ಲ. [ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!]
ಪಾಸ್ ಪೋರ್ಟ್ ಕಾಯ್ದೆ 1967ರಂತೆ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಗೆ ಸೂಚನೆ ನೀಡುವಂತೆ ವಿದೇಶಾಂಗ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. [ಉದ್ಯಮಿ ವಿಜಯ್ ಮಲ್ಯ ಮುಂದಿರುವ ನಾಲ್ಕು ಆಯ್ಕೆಗಳು?]
ಹೀಗಾಗಿ, ಮಲ್ಯ ಅವರನ್ನು ವಿಚಾರಣೆಗಾಗಿ ಭಾರತಕ್ಕೆ ಕರೆ ತರುವ ಪ್ರಯತ್ನಗಳು ಅಧಿಕೃತವಾಗಿ ಚಾಲನೆಗೊಂಡಿದೆ ಎನ್ನಬಹುದು. ಆದರೆ, ಕಾನೂನು ಸಮರ ಮುಂದುವರೆಸಲು ನಿರ್ಧರಿಸಿರುವ ಮಲ್ಯ ಅವರು ಉದ್ದೇಶಪೂರ್ವಕ ಸುಸ್ತಿದಾರನೇ ಹೊರತೂ ನಾನು ಪಲಾಯನವಾದಿಯಲ್ಲ ಎಂದು ಘೋಷಿಸಿದ್ದಾರೆ.
ಪಾಸ್ ಪೋರ್ಟ್ ಕಾಯ್ದೆ 1967ರ ಸೆಕ್ಷನ್ 10 (3) ಸಿ ಹಾಗೂ ಎಚ್ ಅನ್ವಯ ಪ್ರಯಾಣಿಕರೊಬ್ಬರ ಮೇಲೆ ಕ್ರಿಮಿನಲ್ ಮೊಕದ್ದಮೆ ನಡೆಯುತ್ತಿದ್ದು, ಅವರ ವಿರುದ್ಧ ಅರೆಸ್ಟ್ ವಾರೆಂಟ್ ಗಾಗಿ ಅರ್ಜಿ ಸಲ್ಲಿಕೆಯಾಗಿದ್ದರೆ(ಈ ಪ್ರಕರಣದಲ್ಲಿ ಬಾಂಬೆ ಹೈಕೋರ್ಟಿನಿಂದ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ), ಅವರ ಪಾಸ್ ಪೋರ್ಟ್ ಹಾಗೂ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಏರ್ ಪೋರ್ಟ್ ನ ಅಧಿಕಾರಿಗಳು ವಶಪಡಿಸಿಕೊಳ್ಳಬಹುದು.












Click it and Unblock the Notifications