Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..
ಬೆಂಗಳೂರು: ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಏರಿಳಿತವಾಗುವುದು ಸಾಮಾನ್ಯ. ಕಳೆದ ಕೆಲ ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಬಂಗಾರದ ದರ ಇದೀಗ ಮತ್ತೆ ಗ್ರಾಹಕರಿಗೆ ಅಚ್ಚರಿ ಮೂಡಿಸಿದೆ. ಹೌದು, ಮಾರ್ಚ್ 25ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಆಗುತ್ತಿರುವ ಬೆಳವಣಿಗೆಗಳು, ಡಾಲರ್ ಮೌಲ್ಯದಲ್ಲಿನ ಬದಲಾವಣೆ ಹಾಗೂ ಭೌಗೋಳಿಕ ರಾಜಕೀಯ ಉದ್ವಗ್ನತೆಗಳ ನೇರ ಪರಿಣಾಮ ಸ್ಥಳೀಯ ಮಾರುಕಟ್ಟೆಗಳ ಮೇಲೆ ನೇರ ಪರಿಣಾಮ ಬೀರಿದ್ದು, ಆಭರಣ ಪ್ರೀಯರಿಗೆ ಹಾಗೂ ಮದುವೆ ಸಮಾರಂಭಗಳಿಗೆ ಖರೀದಿಸುವವರಿಗೆ ಇದು ಕೊಂಚ ನಿರಾಸೆ ಮೂಡಿಸಿದೆ.

ಪ್ರಮುಖ ಮಾರುಕಟ್ಟೆ ಮೂಲಗಳ ವರದಿಯ ಪ್ರಕಾರ, ಇಂದು 24 ಕ್ಯಾರೆಟ್, 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ದರಗಳಲ್ಲಿ ಗಣನೀಯ ಏರಿಕೆಯಾಗಿದೆ. ನಿನ್ನೆ ಮಾರುಕಟ್ಟೆ ಮುಕ್ತಾಯದ ವೇಳೆಗೆ ಕೊಂಚ ಇಳಿಕೆ ಕಂಡಿದ್ದ ಬಂಗಾರ, ಇಂದು ಬೆಳಗಾಗುವಷ್ಟರಲ್ಲಿ ಮತ್ತೆ ಪುಟಿದೆದ್ದು ಆರ್ಥಿಕ ವಲಯದಲ್ಲಿ ಸಂಚಲನ ಮೂಡಿಸಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರಗಳ ವಿವರ:
ಮಾರುಕಟ್ಟೆಯ ವರದಿಗಳ ಪ್ರಕಾರ, 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯಲ್ಲಿ 1 ಗ್ರಾಂಗೆ ಬರೋಬ್ಬರಿ 376 ರೂಪಾಯಿಗಳಷ್ಟು ಭಾರಿ ಏರಿಕೆ ಕಂಡುಬಂದಿದ್ದು, ಪ್ರಸ್ತುತ 1 ಗ್ರಾಂ ದರ 14,667 ರೂಪಾಯಿಗಳಿಗೆ ತಲುಪಿದೆ. ಅದೇ ರೀತಿ 10 ಗ್ರಾಂ 24 ಕ್ಯಾರೆಟ್ ಬಂಗಾರದ ಬೆಲೆ 1,46,670 ರೂಪಾಯಿಗಳಷ್ಟಾಗಿದೆ.
ಆಭರಣ ತಯಾರಿಕೆಗೆ ಅತಿ ಹೆಚ್ಚು ಬಳಕೆಯಾಗುವ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಗಣನೀಯ ಏರಿಕೆಯಾಗಿದೆ. 1 ಗ್ರಾಂ 22 ಕ್ಯಾರೆಟ್ ಬಂಗಾರದ ದರ 345 ರೂಪಾಯಿಗಳಷ್ಟು ಹೆಚ್ಚಳವಾಗಿ, ಇಂದಿನ ದರ 13,445 ರೂಪಾಯಿಗಳಿಗೆ ಬಂದು ನಿಂತಿದೆ. ಅಂದರೆ, 10 ಗ್ರಾಂ ಆಭರಣ ಚಿನ್ನದ ಬೆಲೆ ಇದೀಗ 1,34,450 ರೂಪಾಯಿಗಳಷ್ಟಾಗಿದೆ. ಇನ್ನು, ಕಡಿಮೆ ಬೆಲೆಯ 18 ಕ್ಯಾರೆಟ್ ಚಿನ್ನದ ದರವೂ 1 ಗ್ರಾಂಗೆ 282 ರೂ. ಏರಿಕೆಯೊಂದಿಗೆ 11,001 ರೂಪಾಯಿಗಳಿಗೆ ವಹಿವಾಟು ನಡೆಸುತ್ತಿದೆ.
ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣಗಳು
ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಆರ್ಥಿಕ ಹಾಗೂ ರಾಜಕೀಯ ಬೆಳವಣಿಗೆಗಳು ಬಂಗಾರದ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಹಾಗೆಯೇ ಅಮೆರಿಕಾದ ಡಾಲರ್ ಮೌಲ್ಯದಲ್ಲಿನ ಏರಿಳಿತ ಹಾಗೂ ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಹೂಡಿಕೆದಾರರನ್ನು ಸುರಕ್ಷಿತ ಹೂಡಿಕೆಯತ್ತ ಮುಖ ಮಾಡುವಂತೆ ಮಾಡಿವೆ. ಹೂಡಿಕೆದಾರರು ಷೇರು ಮಾರುಕಟ್ಟೆಗಿಂತ ಹೆಚ್ಚಾಗಿ ಚಿನ್ನದ ಮೇಲೆ ಬಂಡವಾಳ ಹೂಡುತ್ತಿರುವುದರಿಂದ ಬೇಡಿಕೆ ಹೆಚ್ಚಾಗಿ, ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಮದುವೆ ಹಾಗೂ ಮುಂಬರುವ ಹಬ್ಬದ ಸೀಸನ್‌ಗಾಗಿ ಚಿನ್ನ ಖರೀದಿಸಲು ಕಾಯುತ್ತಿದ್ದವರಿಗೆ ಈ ದಿಢೀರ್ ಏರಿಕೆ ಕೊಂಚ ಹೊರೆಯಾಗಬಹುದು. ಆದಾಗ್ಯೂ, ಆರ್ಥಿಕ ತಜ್ಞರ ಪ್ರಕಾರ ಚಿನ್ನದ ದರ ಸದಾ ಏರಿಳಿತದ ಹಾದಿಯಲ್ಲಿಯೇ ಇರುತ್ತದೆ. ಹಾಗಾಗಿ, ದೀರ್ಘಾವಧಿಯ ಹೂಡಿಕೆ ದೃಷ್ಟಿಯಿಂದ ಚಿನ್ನ ಎಂದಿಗೂ ಲಾಭದಾಯಕ.












Click it and Unblock the Notifications