ಬೀದರ್ ಜಿಲ್ಲೆಯಲ್ಲಿ ಒಂದೇ ದಿನ ಎರಡು ಬಾರಿ ಭೂಕಂಪ: ಬೆಚ್ಚಿಬಿದ್ದ ಜನ
ಬೀದರ್, ನವೆಂಬರ್ 06 : ಬೀದರ್ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಲಘು ಭೂಕಂಪನ ಸಂಭವಿಸಿದೆ. ಜಿಲ್ಲೆಯಲ್ಲಿ 1.9 ಮತ್ತು 2.1 ತೀವ್ರತೆಯ ಎರಡು ಭೂಕಂಪಗಳು ದಾಖಲಾಗಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ಭೂಕಂಪನ ವಿಭಾಗ ತಿಳಿಸಿದೆ.
ಭೂಕಂಪ ಸಂಭವಿಸಿದ ಕೇಂದ್ರದಿಂದ 25 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೂಮಿ ನಡುಗಿದ ಅನುಭವವಾಗಿದೆ ಎಂದು ವರದಿಯಾಗಿದೆ. ಬೀದರ್ ಜಿಲ್ಲೆಯ ಮದರಗಾಂವ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡನಕೇರಾ ಗ್ರಾಮದಲ್ಲಿ ಮೊದಲಿಗೆ ಕಂಪನದ ಅನುಭವವಾಗಿದ್ದು, 1.9 ತೀವ್ರತೆಯ ಭೂಕಂಪನ ದಾಖಲಾಗಿದೆ. ಬಳಿಕ ಎರಡು ಗಂಟೆಗಳ ನಂತರ, ಅದೇ ಸ್ಥಳದಲ್ಲಿ 2.1 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ.

ಈ ಕುರಿತಂತೆ ಕರ್ನಾಟಕ ರಾಜ್ಯ ನೈಸರ್ಗಿತ ಪ್ರಕೃತಿ ವಿಕೋಪ ಕೇಂದ್ರ ಮಾಹಿತಿ ನೀಡಿದ್ದು, 'ಬೀದರ್‌ನಲ್ಲಿ ಲಘು ಭೂ ಕಂಪನ ಉಂಟಾಗಿದೆ. ಅಷ್ಟೇನೂ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಈ ರೀತಿಯ ಘಟನೆಗಳು ಅಪರೂಪ. ತೀವ್ರತರವಾದಂತಹ ಭೂ ಕಂಪನ ಉಂಟಾಗಿಲ್ಲ. ಈ ಭೂಕಂಪಗಳು ಅತ್ಯಂತ ಕಡಿಮೆ ತೀವ್ರತೆಯನ್ನು ಹೊಂದಿವೆ. ಜನರು ಹೆದರುವ ಅವಶ್ಯಕತೆ ಇಲ್ಲ' ಎಂದು ತಿಳಿಸಿದೆ.
'ಈ ಬಗ್ಗೆ ಈಗಾಗಲೇ ಪರಿಶೀಲನೆ ನಡೆಸಲಾಗಿದೆ. ತೀವ್ರತೆಯು ತುಂಬಾ ಕಡಿಮೆ ಇದೆ. ಭೂಕಂಪದ ಕೇಂದ್ರದಿಂದ 20-25 ಕಿಮೀ ರೇಡಿಯಲ್ ದೂರದವರೆಗೆ ಕಂಪನ ಅನುಭವ ಕಂಡುಬಂದಿದೆ. ಈ ರೀತಿಯ ಭೂಕಂಪಗಳು ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ' ಎಂದು ಕರ್ನಾಟಕ ರಾಜ್ಯ ನೈಸರ್ಗಿತ ಪ್ರಕೃತಿ ವಿಕೋಪ ಕೇಂದ್ರದ ಅಧಿಕಾರಿಗಳು ಸಾರ್ವಜನಿಕರಿಗೆ ಧೈರ್ಯ ತುಂಬಿದ್ದಾರೆ.
ಇನ್ನು ಕೆಲ ದಿನಗಳ ಹಿಂದೆ ನೇಪಾಳದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, 128ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯಲ್ಲಿ ಈ ಭೂಕಂಪನ ಸಂಭವಿಸಿತ್ತು. ಇದರಿಂದ ಕಂಪನದ ಕೇಂದ್ರ ಸ್ಥಾನದಿಂದ ಅಂದಾಜು 500 ಕಿ.ಮೀ. ದೂರವಿರುವ ಭಾರತದ ರಾಜಧಾನಿ ದೆಹಲಿಯಲ್ಲೂ ಭೂಕಂಪನದ ಅನುಭವಗಳಾಗಿತ್ತು. ಇನ್ನು ಭಾರತದಲ್ಲಿ ಇತ್ತೀಚಿಗೆ ಭೂಕಂಪದ ಘಟನೆಗಳು ಹೆಚ್ಚುತ್ತಿದೆ.












Click it and Unblock the Notifications