ಬಸವ ಕಲ್ಯಾಣ; ಉಪ ಚುನಾವಣೆ ಟಿಕೆಟ್ ಬೇಡ ಎಂದ ಖೇಣಿ!
ಬೀದರ್, ಜನವರಿ 24: ಬಿ. ನಾರಾಯಣರಾವ್ ಅಕಾಲಿಕ ನಿಧನದಿಂದಾಗಿ ಬೀದರ್ ಜಿಲ್ಲೆಯ ಬಸವ ಕಲ್ಯಾಣ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಈಗಾಗಲೇ ಉಪ ಚುನಾವಣೆ ಸಿದ್ಧತೆಯನ್ನು ನಡೆಸುತ್ತಿವೆ.
ಮಾಧ್ಯಮಗಳ ಜೊತೆ ಮಾತನಾಡಿದ ಅಶೋಕ್ ಖೇಣಿ ಈ ಕುರಿತು ಮಾಹಿತಿ ನೀಡಿದ್ದಾರೆ. "ಬಸವಕಲ್ಯಾಣ ಉಪ ಚುನಾವಣೆಗೆ ಸ್ಪರ್ಧಿಸುವಂತೆ ಕಾಂಗ್ರೆಸ್ ವರಿಷ್ಠರು ಮನವಿ ಮಾಡಿದರು" ಎಂದು ಹೇಳಿದರು.
"ಸ್ವಕ್ಷೇತ್ರ ಬೀದರ್ ದಕ್ಷಿಣ ಬಿಟ್ಟು ಬೇಡೆ ಕಡೆಯಿಂದ ಸ್ಪರ್ಧಿಸಲಾರೆ ಎಂದು ನಯವಾಗಿ ನಿರಾಕರಿಸಿದ್ದೇನೆ. ಬಿ. ನಾರಾಯಣರಾವ್ ಪತ್ನಿ, ಪುತ್ರನಿಗೆ ಟಿಕೆಟ್ ನೀಡುವುದು ಪಕ್ಷದ ವರಿಷ್ಠರು, ಸ್ಪರ್ಧಿಸಲು ಇಚ್ಛಿಸುವವರಿಗೆ ಬಿಟ್ಟ ವಿಚಾರ. ಈ ವಿಚಾರದಲ್ಲಿ ನಾನು ಮಾತನಾಡುವುದಿಲ್ಲ" ಎಂದು ಅಶೋಕ್ ಖೇಣಿ ಸ್ಪಷ್ಟಪಡಿಸಿದರು.

"ಬಸವಕಲ್ಯಾಣದಲ್ಲಿ ಅದೇ ಕ್ಷೇತ್ರದವರು ಸ್ಪರ್ಧಿಸಬೇಕು. ಹೊರಗಿನವರು ಸ್ಪರ್ಧಿಸಿದರೆ ಆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಆಗುವುದಿಲ್ಲ. ಮತದಾರರ ಚುನಾಯಿತ ಪ್ರತಿನಿಧಿಯನ್ನು ಸುಲಭವಾಗಿ ಸಂಪರ್ಕಿಸಲು ಆಗುವುದಿಲ್ಲ" ಎಂದು ಅಶೋಕ್ ಖೇಣಿ ಹೇಳಿದರು.
ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ. ಚುನಾವಣಾ ದಿನಾಂಕವನ್ನು ಇನ್ನು ಆಯೋಗ ಘೋಷಣೆ ಮಾಡಿಲ್ಲ. 2018ರ ಚುನಾವಣೆಯಲ್ಲಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಬಿ.ನಾರಾಯಣರಾವ್ (67) ಸೆಪ್ಟೆಂಬರ್‌ನಲ್ಲಿ ನಿಧನ ಹೊಂದಿದ್ದು. ಉಪ ಚುನಾವಣೆ ಎದುರಾಗಿದೆ.
2018ರಲ್ಲಿ ಬಸವಕಲ್ಯಾಣದಲ್ಲಿ ಬಿ. ನಾರಾಯಣ ರಾವ್ 61,425 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ಮಲ್ಲಿಕಾರ್ಜುನ 44,153 ಮತ ಪಡೆದಿದ್ದರು. ಜೆಡಿಎಸ್ ಅಭ್ಯರ್ಥಿ ಪಿ. ಜಿ. ಆರ್. ಸಿಂಧ್ಯಾ 31,414 ಮತ ಪಡೆದಿದ್ದರು.
ಬಿಜೆಪಿ ಉಪ ಚುನಾವಣೆ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಕ್ಷೇತ್ರದ ನಾಯಕರ ಜೊತೆ ಹಲವು ಸುತ್ತಿನ ಚರ್ಚೆ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಇನ್ನೂ ಘೋಷಣೆಯಾಗಿಲ್ಲ.












Click it and Unblock the Notifications