ಬೆಂಗಳೂರು ಎಲಿವೇಟೆಡ್ ರೋಟರಿ ಮೇಲ್ಸೇತುವೆ ನಿರ್ಮಾಣ: ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹೇಳಿದ್ದೇನು ?
ಬೆಂಗಳೂರು: ಬೆಂಗಳೂರಿನ ಬಾಣಸವಾಡಿ ಮುಖ್ಯ ರಸ್ತೆಯ ಐಒಸಿ ಜಂಕ್ಷನ್‌ನಲ್ಲಿ ಎಲಿವೇಟೆಡ್ ರೋಟರಿ ಮೇಲ್ಸೇತುವೆ ನಿರ್ಮಾಣ ಕುರಿತು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಬಿ-ಸ್ಮೈಲ್ ಹಾಗೂ ಕೆ-ರೈಡ್ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಿದ್ದಾರೆ.
ಐಒಸಿ ಜಂಕ್ಷನ್‌ನಲ್ಲಿ ಸುಮಾರು 3 ಕಿ.ಮೀ ಗೂ ಹೆಚ್ಚು ಉದ್ದದ ಎಲಿವೇಟೆಡ್ ರೋಟರಿ ಮೇಲ್ಸೇತುವೆ ನಿರ್ಮಾಣ ಹಾಗೂ ಬೈಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಹೆಚ್ಚುವರಿ 2-ಲೇನ್ ರೈಲ್ವೆ ಮೇಲ್ಸೇತುವೆ ನಿರ್ಮಾಣದ ಕುರಿತು ಕೆ-ರೈಡ್ ಮತ್ತು ಬಿ-ಸ್ಮೈಲ್ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ, ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಏಕಕಾಲದಲ್ಲಿ ಕಾಮಗಾರಿಯನ್ನು ಕೈಗೊಂಡು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ.

ಟೆಂಡರ್ ಪ್ರಕ್ರಿಯೆ ಹೇಗೆ
ರೋಟರಿ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಪ್ರಸ್ತುತ ಆರ್ಥಿಕ ಬಿಡ್‌ಗಳ ಮೌಲ್ಯಮಾಪನ ಹಂತದಲ್ಲಿದೆ. ಗುತ್ತಿಗೆದಾರರೊಂದಿಗೆ ದರ ಸಂಧಾನ ನಡೆಯುತ್ತಿದ್ದು, ಶೀಘ್ರದಲ್ಲೇ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರದ ಅನುಮೋದನೆ ದೊರಕಿದ ನಂತರ ಕಾಮಗಾರಿ ಪ್ರಾರಂಭವಾಗಲಿದೆ. ಇದೇ ಸ್ಥಳದಲ್ಲಿ ಕೆ-ರೈಡ್ ವತಿಯಿಂದ ಸಬ್‌ಅರ್ಬನ್ ರೈಲು ಯೋಜನೆಯ ಕಾಮಗಾರಿಯೂ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಅಗತ್ಯ ಸಮನ್ವಯಕ್ಕಾಗಿ ಮುಖ್ಯ ಆಯುಕ್ತರು ಜಂಟಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಹೇಳಿದ್ದಾರೆ.
ಅಂದಾಜು 380 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಯೋಜನೆ
ಅಂದಾಜು 380 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಿರುವ ಈ ಯೋಜನೆಯಡಿ 3-4 ಕಿ.ಮೀ ಉದ್ದದ ಎಲಿವೇಟೆಡ್ ರೋಟರಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದ್ದು, ಬೈಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್‌ನಲ್ಲಿ ಹೆಚ್ಚುವರಿ 2-ಲೇನ್ ರೈಲ್ವೆ ಮೇಲ್ಸೇತುವೆ ನಿರ್ಮಿಸಲಾಗುತ್ತದೆ. ಮಾರುತಿ ಸೇವಾನಗರ - ಬಾಣಸವಾಡಿ - ಕಮ್ಮನಹಳ್ಳಿ - ಬೈಯಪ್ಪನಹಳ್ಳಿ ಮಾರ್ಗಗಳ ನಡುವಿನ ಸಂಚಾರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಸುಧಾರಿಸುವ ಉದ್ದೇಶದಿಂದ ರೋಟರಿ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗುವುದರೊಂದಿಗೆ ಸೇವಾ ಮಟ್ಟವೂ ಸುಧಾರಿಸಲಿದ್ದು, ಸುತ್ತಮುತ್ತಲಿನ ಪ್ರದೇಶಗಳಿಗೆ ಸುಗಮ ಮತ್ತು ಸಮಗ್ರ ಸಂಪರ್ಕ ಕಲ್ಪಿಸಬಹುದಾಗಿದೆ.
ಕಸ ಕಿಯೋಸ್ಕ್ ವ್ಯವಸ್ಥೆಗೆ ಸೂಚನೆ: ಇನ್ನು ಬಾಣಸವಾಡಿ ಮೇಲ್ಸೇತುವೆಯ ಕೆಳಭಾಗದಲ್ಲಿ ರಸ್ತೆ ಬದಿಯಲ್ಲಿ ಕಸ ಬಿಸಾಡಿರುವುದನ್ನು ತೆರವುಗೊಳಿಸುವ ಕಾರ್ಯವನ್ನು ಗಮನಿಸಿ, ಸ್ಥಳದಲ್ಲಿ ಶಾಶ್ವತ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಸ ಕಿಯೋಸ್ಕ್ ವ್ಯವಸ್ಥೆ ಕಲ್ಪಿಸಲು ಬಿ.ಎಸ್.ಡಬ್ಲ್ಯೂ.ಎಂ.ಎಲ್.ನ ಎಜಿಎಂ ಅವರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ಅವರು ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬಿ-ಸ್ಮೈಲ್ ತಾಂತ್ರಿಕ ನಿರ್ದೇಶಕರಾದ ಡಾ. ಬಿ.ಎಸ್. ಪ್ರಹ್ಲಾದ್, ಕಾರ್ಯಪಾಲಕ ಎಂಜಿನಿಯರ್‌ಗಳು, ಕೆ-ರೈಡ್ ಅಧಿಕಾರಿಗಳು ಸೇರಿದಂತೆ ಹಲವರು ಹಾಜರಿದ್ದರು.












Click it and Unblock the Notifications