ವದಂತಿಗಳ ನಡುವೆ ಸರ್ಕಸ್ ಮಾಡಿಕೊಂಡು ಸರ್ಕಾರ ನಡೆಸುತ್ತಿದ್ದೇನೆ: ಎಚ್‌ಡಿಕೆ
ಬೆಂಗಳೂರು, ಜನವರಿ 17: ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರವನ್ನು ಅಧಿಕಾರ ತರುವ ಮೂಲಕ ದೇವೇಗೌಡ ಅವರ ಕೈಬಲಪಡಿಸೋಣ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಜೆಡಿಎಸ್ ಆಯೋಜಿಸಿದ್ದ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ನನಗೆ ಯಾವುದೇ ಜಾತಿ ಇಲ್ಲ, ನಮ್ಮ ಪಕ್ಷವೂ ಸಹ ಎಲ್ಲ ಜಾತಿಗಳಿಗೂ ಬದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ನಾನು ಹೇಗೆ ಸರ್ಕಾರ ನಡೆಸುತ್ತಿದ್ದೇನೆ ಎಂಬುದನ್ನು ನೀವು ನೋಡಿದ್ದೀರಿ, ಸರ್ಕಾರ ಬಿದ್ದು ಹೋಗುತ್ತದೆ ಎಂದು ಪ್ರತಿದಿನವೂ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ ಆದರೆ ಆ ವದಂತಿಗಳನ್ನೂ ಯಾರೂ ನಂಬಬೇಡಿ, ನಾನು ನನ್ನ ಅವಧಿ ಪೂರ್ಣಗೊಳಿಸುತ್ತೇನೆ ಎಂದು ಅವರು ಹೇಳಿದರು.

ಒಂದು ವಾರದಿಂದ ನಡೆದ ಬೆಳವಣಿಗೆಗಳನ್ನು ನೋಡಿ ಈ ಸಮಾವೇಶ ನಡೆಯುತ್ತದೆಯೋ ಇಲ್ಲವೋ ಎಂಬ ಆತಂಕ ಎಲ್ಲರಲ್ಲೂ ಇತ್ತು. ಆದರೆ ನೀವೆಲ್ಲಾ ಭಾರಿ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿದ್ದೀರಿ. ನಿಮ್ಮನ್ನು ನೋಡಿ ನನಗೆ ಸಮಾಧಾನವಾಗಿದೆ ಎಂದು ಅವರು ಹೇಳಿದರು.
ರೈತರ ಸಾಲಮನ್ನಾ ಮಾಡುವ ಬಗ್ಗೆ ಮಾತ್ರವೇ ನಾವು ಗಮನಹರಿಸಿಲ್ಲ, ಅದರ ಜೊತೆ-ಜೊತೆಯಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಠಿಸುವ ಕಾರ್ಯದೆಡೆಗೆ ಸರ್ಕಾರವು ವಿಶೇಷ ಗಮನಹರಿಸಿದೆ ಎಂದು ಅವರು ಹೇಳಿದರು.












Click it and Unblock the Notifications