ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆತ್ತಲಾಗಿ ಎಮ್ಮೆಗೆ ಮೇವು ತಿನ್ಸಿ ಸಾಕು, ಗೆಲ್ತೀರಿ!

By Prasad
|
Google Oneindia Kannada News

ಬೆಂಗಳೂರು, ಮಾ. 28 : ಚುನಾವಣೆಯಲ್ಲಿ ಗೆಲ್ಲುವುದೊಂದೇ ಮಂತ್ರ! ಮನೆಮನೆಗೆ ತೆರಳಿ ಮತ ಯಾಚಿಸುವುದಾಗಲಿ, ನೋಟು ಹೆಂಡ ಸೀರೆ ರವಿಕೆ ಹಂಚುವುದಾಗಲಿ, ಮಾತಿನಲ್ಲೇ ಮರಳು ಮಾಡುವುದಾಗಲಿ, ಸೋಷಿಯಲ್ ಮೀಡಿಯಾ ಮುಖಾಂತರ ತಲುಪುವುದಾಗಲಿ, ಭೀಕರ ಭಾಷಣ ಬಿಗಿಯುವುದಾಗಲಿ, ವಿರೋಧಿಗಳ ಹಗರಣ ಎತ್ತಿ ತೋರಿಸುವುದಾಗಲಿ.... ನೂರಾರು ದಾರಿಗಳು... ನೂರಾರು ತಂತ್ರಗಾರಿಕೆಗಳು...

ಬಿಡಿ ಸಾರ್... ಬಿಟ್ಟಾಕಿ ಸಾರ್... ಈ ತಂತ್ರಗಾರಿಕೆ ಎಲ್ಲ ಬಿಟ್ಟಾಕಿ. ಮನೆಮನೆ ಪ್ರಚಾರ ಮಾಡದೆ, ಹಣ ಹೆಂಡ ಹಂಚದೆ, ಗಂಟಲು ಹರಿದುಕೊಳ್ಳದೆ, ಒಬ್ಬೇ ಒಬ್ಬ ಮತದಾರನ ಮುಂದೆ ಗಲ್ಲುಗಿಂಜಿ ಮತ ಯಾಚಿಸದೆ, ಗೆಲ್ಲಲು ಇಲ್ಲೊಂದು ತಂತ್ರಗಾರಿಕೆಯಿದೆ. ಅದೇನೆಂದರೆ, ಎಮ್ಮೆಗೆ ಬಟಾಬಯಲಲ್ಲಿ ಸಂಪೂರ್ಣ ಬೆತ್ತಲಾಗಿ ಹುಲ್ಲು ಮೇಯಿಸಿದರೆ ಗೆಲ್ಲುವುದು ಸೆಂಟ್ ಪರ್ಸೆಂಟ್ ಗ್ಯಾರಂಟಿ!

ಎಂಗೈತೆ ಪಿಲಾನು? ಇಂಥದೊಂದೂ ಸೂಪರ್ ಡೂಪರ್ ಐಡಿಯಾ ಹೇಳಿಕೊಟ್ಟವರು ಮತ್ತಾರೂ ಅಲ್ಲ, ಕರ್ನಾಟಕದ ಖ್ಯಾತ ಜ್ಯೋತಿಷಿ ದೈವಜ್ಞ ಸೋಮಯ್ಯಾಜಿ ಅವರು! ಇಂಥ ಖತರ್ನಾಕ್ ಐಡಿಯಾ ಕೊಡಿಸಿಕೊಂಡವರು ಸಂಸತ್ತನ್ನು ಪ್ರವೇಶಿಸಲು ತುದಿಗಾಲಲ್ಲಿ ನಿಂತಿರುವ ಬಿಹಾರದ ರಾಜಕಾರಣಿಯೊಬ್ಬರು! ಹಿಂಗ್ ಮಾಡಿದ್ರೆ ಗೆಲ್ತಾರಾ ಹೇಳಿ? ಒಂದ್ ಕಿತಾ ಗೆದ್ರೆ? ಗೆದ್ರೆ ಜ್ಯೋತಿಷಿ ಲಕ್ಷಾಧಿಪತಿ, ಸೋತರೆ ಅಭ್ಯರ್ಥಿಗೆ ಸಾಡೇಸಾತಿ.

Want to win in election? Feed buffalo naked

"ರಾಜಕಾರಣಿಗಳ ಅನಿಶ್ಚಿತತೆ ಮತ್ತು ಮೂಢತನವೇ ನಮ್ಮ ಬಂಡವಾಳ. ಅವರ ಸೋಲು ನಮಗೆ ಸಂದ ಜಯ" ಎಂದು ಸೋಮಯ್ಯಾಜಿ ಅವರು ಮುಚ್ಚುಮರೆಯಿಲ್ಲದೆ ಟೈಮ್ಸ್ ಆಫ್ ಇಂಡಿಯಾ ಜೊತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅವರ ಬಳಿ ಗುಜರಾತ್, ಮಹಾರಾಷ್ಟ್ರ, ಬಿಹಾರ, ರಾಜಸ್ತಾನ, ದೆಹಲಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮುಂತಾದ ಕಡೆಯಿಂದ ರಾಜಕೀಯ ಭವಿಷ್ಯ ಕೇಳಿಕೊಂಡು ಬರುತ್ತಾರಂತೆ. ಇನ್ನು ಇಲ್ಲೇ ಇರುವ ಕರ್ನಾಟಕದ ಪುಢಾರಿಗಳನ್ನು ಕೇಳಬೇಕೆ? [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ದೇವರು, ಹೋಮ-ಹವನ, ಭವಿಷ್ಯ, ಮಾಟಮಂತ್ರ, ತನ್ನ ಮೇಲೆ ವಿಶ್ವಾಸ ಇಲ್ಲದವನು ಕೂಡ ಗೆಲುವಿಗಾಗಿ ಎಂಥ ಕೆಲಸಕ್ಕೂ ಸಿದ್ಧನಾಗುತ್ತಾರೆ. ಪ್ರತಿಯೊಂದಕ್ಕೂ ಜ್ಯೋತಿಷಿ ಬಳಿ ಎಡತಾಕುತ್ತಾರೆ. ಟಿಕೆಟ್ ಪಡೆಯಲು ಯತ್ನಿಸುವುದರಿಂದ ಹಿಡಿದು, ನಾಮಪತ್ರ ಸಲ್ಲಿಕೆ, ಮತದಾನ, ಮತಎಣಿಕೆಯ ಸಮಯದಲ್ಲಿಯೂ ಹೋಮ-ಹವನ, ಜ್ಯೋತಿಷ್ಯ ಎಂದು ಜ್ಯೋತಿಷಿಗಳ ದುಂಬಾಲು ಬೀಳುತ್ತಾರೆ. ವಿರೋಧಿ ಸೋಲಲು ಏನು ಪೂಜೆ ಮಾಡಬೇಕು ಎಂದು ಕೇಳುವವರೂ ಇದ್ದಾರಂತೆ. ಹೌದೋ ಅಲ್ಲವೋ ಹೇಳಿ?

ಪ್ರಖರ ವಿಚಾರವಾದಿಗಳು, ಬುದ್ಧಿಜೀವಿಗಳು, ನಾಸ್ತಿಕ ರಾಜಕಾರಣಿಗಳು ಕೂಡ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ಒಂದು ಪೂಜೆ ಮಾಡಿದರೆ ಏನು ಗಂಟು ಖರ್ಚಾಗುತ್ತದೆ ಎಂದು ಗಂಟು ಹಿಡಿದುಕೊಂಡೇ ಜ್ಯೋತಿಷಿಗಳ ಬಳಿ ಬರುತ್ತಾರೆ. ಇಂಥ ಅವಕಾಶಗಳನ್ನು ಜ್ಯೋತಿಷಿಗಳು ಸರಿಯಾಗಿಯೇ ಬಳಸಿಕೊಂಡು ಗಂಟು ಮಾಡಿಕೊಳ್ಳುತ್ತಿದ್ದಾರೆ. ಈಗಿಲ್ಲದಿದ್ದರೆ ಇನ್ನೆಂದೂ ಇಲ್ಲ ಎಂದರಿತ ಅಳಲೆಕಾಯಿ ಪಂಡಿತರು ಕೂಡ ಮನೆ ಮುಂದೆ ಜ್ಯೋತಿಷಿ (ರಾಜಕೀಯ ಸ್ಪೆಷಾಲಿಸ್ಟ್) ಬೋರ್ಡ್ ಹಾಕಿಕೊಳ್ಳುತ್ತಿದ್ದಾರೆ. ಆದರೆ ಸ್ಟಾರ್ ಜ್ಯೋತಿಷಿಗಳ ಕಥೆಯೇ ಬೇರೆ.

"ಒಂದೇ ಲೋಕಸಭೆ ಕ್ಷೇತ್ರದ ಇಬ್ಬರು ಅಭ್ಯರ್ಥಿಗಳಿಗೆ ಭವಿಷ್ಯ ಹೇಳುವುದಿಲ್ಲ. ಮೊದಲು ಬಂದವರಿಗೆ ಮತ್ತು ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಗೇ ಆದ್ಯತೆ" ಎಂದು ವೃತ್ತಿಪರತೆ ಮೆರೆಯುವುದರ ಜೊತೆಗೆ ಜಾಣ್ಮೆಯನ್ನೂ ಮೆರೆಯುತ್ತಾರೆ ಸೋಮಯ್ಯಾಜಿಗಳು. ಗೆಲ್ಲುವ ಸಾಧ್ಯತೆ ಇರುವ ಅಭ್ಯರ್ಥಿಗೆ, ನೀನೇ ಗೆಲ್ಲುತ್ತೀ ಅಂತ ಭವಿಷ್ಯ ಹೇಳಿದ ಮೇಲೆ ಉಳಿದವರು ಸೋಲುವುದು ಗ್ಯಾರಂಟಿ ತಾನೆ? ಇಚಾರ ಮಾಡಿ!

ಅಭ್ಯರ್ಥಿಯ ಸ್ಟೇಟಸ್ಸು, ಆತನ ಅಗತ್ಯತೆಗಳು, ಬೇಡಿಕೆಗಳು, ಪರಿಸ್ಥಿತಿಗಳನ್ನು ಅಧ್ಯಯನ ಮಾಡಿ ಬೇರೆಬೇರೆಯಾದ ಪೂಜೆಪುನಸ್ಕಾರಗಳನ್ನು ಜ್ಯೋತಿಷಿಗಳು ಹೇಳುತ್ತಾರಂತೆ. ಟಿಕೆಟ್ ಪಡೆಯುವಾಗ ಒಂದು ಬಗೆಯದಾದರೆ, ನಾಮಿನೇಷನ್ ಫೈಲ್ ಮಾಡುವಾಗ ಮತ್ತೊಂದು ಬಗೆಯದು, ಇನ್ನು ಮತಎಣಿಕೆಯ ದಿನದಂದು ವಿಶೇಷ ಪೂಜೆ. ವ್ಯಕ್ತಿ ಮತ್ತು ಪೂಜೆಯ ವಿಧಾನವನ್ನು ನೋಡಿಕೊಂಡು 1 ಲಕ್ಷ ರು.ನಿಂದ 10 ಲಕ್ಷ ರು.ವರೆಗೆ ಚಾರ್ಜ್ ಮಾಡುತ್ತಾರೆ. ಭಾರತದಲ್ಲಿ ಜ್ಯೋತಿಷಿಗಳು ನೂರು ಸಾವಿರಾರು ಕೋಟಿಯ ವ್ಯಾಪಾರ ಎಂದು ಹೇಳಲು ಸೋಮಯ್ಯಾಜಿ ಅವರು ಮರೆಯುವುದಿಲ್ಲ.

ಚುನಾವಣಾ ಪ್ರಕ್ರಿಯೆ ಆರಂಭ ಮತ್ತು ಮತ ಎಣಿಕೆ ಪ್ರಕ್ರಿಯೆಯ ನಡುವೆ ಎರಡು ಗ್ರಹಣಗಳು ಬೇರೆ ಸಂಭವಿಸುತ್ತಿವೆ. ಏಪ್ರಿಲ್ 15ರಂದು ಚಂದ್ರ ಗ್ರಹಣವಿದ್ದರೆ, ಏಪ್ರಿಲ್ 29ರಂದು ಸೂರ್ಯ ಗ್ರಹಣವಿದೆ. ಇವೆರಡು ಕೂಡ ಅಭ್ಯರ್ಥಿಯ ಸೋಲು ಗೆಲುವುಗಳ ಮೇಲೆ ಭಾರೀ ಪರಿಣಾಮ ಬೀರುತ್ತವೆ ಎನ್ನುತ್ತಾರೆ ಮತ್ತೊಬ್ಬ ಜ್ಯೋತಿಷಿ ಎಸ್ ಕೆ ಜೈನ್ ಅವರು. ತಕ್ಕಳ್ಳಪ್ಪ ಇನ್ನೇನು? ಈ ಗ್ರಹಗಳ ಪ್ರಭಾವ ತಗ್ಗಿಸಲು, ವ್ಯತಿರಿಕ್ತ ಪರಿಣಾಮ ಬೀರದಿರಲು, ಗೆಲುವು ತನ್ನದಾಗಲೆಂದು ಮತ್ತೊಂದೆರಡು ಹೋಮಹವನಗಳು.

ಈಗ ಹೇಳಿ, ಅಂಡರ್ ವೇರಲ್ಲೂ ಬೆವರಿಳಿಸುವ ಇಂಥ ಬಿರುಬಿರು ಬಿಸಿಲಲ್ಲಿ ಗರಿಗರಿ ಬಿಳಿ ಬಟ್ಟೆತೊಟ್ಟು ಮನೆಮನೆ ಅಲೆಯುತ್ತ ಮತಯಾಚಿಸುವುದರಲ್ಲಿ ಏನು ಅರ್ಥವಿದೆ? ಅದು ಬಿಟ್ಟು, ವಿರೋಧಿ ಸೋಲಲೆಂದು ಕೋಟಿ ಖರ್ಚು ಮಾಡಿ ಪೂಜೆ ಮಾಡಿಸಿದರಾಗದೆ? ಅಥವಾ ಲಕ್ಷಲಕ್ಷ ಬಿಸಾಕಿ ಮಾಟಮಂತ್ರ ಮಾಡಿಸಿದರಾಗದೆ? ಅಥವಾ ಮೈಮೇಲೆ ನೂಲೆಳೆಯೂ ಇರದಂತೆ ಬೆತ್ತಲಾಗಿ ಎಮ್ಮೆಗೆ ಅಥವಾ ಕೋಣಕ್ಕೆ ಹಸಿಹಸಿ ಮೇವು ತಿನ್ನಿಸಿದರಾಗದೆ? ವಿಚಾರ ಮಾಡಬೇಕಾದ ವಿಷಯ. ಅಂದ ಹಾಗೆ, ಬಟ್ಟೆ ಬಿಚ್ಚಿ ಬೆತ್ತಲಾಗಬೇಕಾಗಿರುವುದು ರಾತ್ರಿಯಲ್ಲೋ, ಹಗಲಲ್ಲೋ, ಮನೆಯಲ್ಲೋ, ಸಂತೆಯಲ್ಲೋ ಎಂದು ಜ್ಯೋತಿಷಿಗಳು ನಿಖರವಾಗಿ ಹೇಳಿದ್ದಾರೋ ಇಲ್ಲವೋ ಗೊತ್ತಾಗಿಲ್ಲ!

English summary
Would you like to win in lok sabha election? Then feed buffalo without wearing any cloth. This was the suggestion given by Karnataka astrologer to a person from Bihar dreaming to win election. Astrologer are making merry as election fever grips India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X