ಮತದಾನ ಜಾಗೃತಿ ವಾಕಥಾನ್: ರಾಜ್ಯದ ಪ್ರಗತಿಗೆ ಶ್ರಮಿಸುವ ಪ್ರತಿನಿಧಿಗೆ ಕಡ್ಡಾಯವಾಗಿ ಮತ ಹಾಕಿ: ಶಾಲಿನಿ ರಜನೀಶ್
ಬೆಂಗಳೂರು, ಏಪ್ರಿಲ್ 29: ಚುನಾವಣೆಯಲ್ಲಿ ಗೆದ್ದು ಕರ್ನಾಟಕಕ್ಕೆ ಒಳ್ಳೆಯ ಪ್ರತಿನಿಧಿ ಆಯ್ಕೆಯಾಗಿ ಬರಬೇಕು. ಆ ಪ್ರತಿನಿಧಿ ದೇಶ ಹಾಗೂ ರಾಜ್ಯವನ್ನು ಪ್ರಗತಿಯಪಥದತ್ತ ನಡೆಸುವಂತಾಗಬೇಕು. ಅವರಿಗೆ ಮಾಡುವ ಪ್ರಗತಿಗೆ ನಾವೆಲ್ಲರೂ ಸಹಕಾರ ನೀಡಬೇಕು ಎಂದು ಸರ್ಕಾರ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದರು.
ಸಾರ್ವತ್ರಿಕ ವಿಧಾನಸಭಾ ಚುನಾವಣೆ ಸಂಬಂಧ ಮತದಾರರಲ್ಲಿ ಜಾಗೃತಿ ಮೂಡಿಸಿ ಮತದಾನದ ಪ್ರಮಾಣ ಹೆಚ್ಚಿಸಲು ಬೆಂಗಳೂರಿನಲ್ಲಿ ಶನಿವಾರ ಬೆಳಗ್ಗೆ ನಡೆದ 'ಬೃಹತ್ ವಾಕಥಾನ್' ನೆ ನೀಡಿದ ಅವರು ಮಾತನಾಡಿದರು. ಈ ಕಾರ್ಯಕ್ರಮ

ಭಾರತೀಯ ಚುನಾವಣಾ ಆಯೋಗ, ಮುಖ್ಯ ಚುನಾವಣಾ ಅಧಿಕಾರಿ ಕಛೇರಿ-ಕರ್ನಾಟಕ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಹಕಾರದಲ್ಲಿ ನಡೆಯಿತು.
ನಮ್ಮ ಹಕ್ಕುಗಳಂತೆ ನಮ್ಮ ಕರ್ತವ್ಯಗಳು ಸಹ ಪ್ರಾಮುಖ್ಯತೆ ಹೊಂದಿವೆ. ಎಲ್ಲರೂ ಇರುವಂತಹ ಹಕ್ಕುಗಳ ಬಗ್ಗೆ ನಾಗರಿಕರಿಗೆ ಸರಿಯಾದ ಮಾಹಿತಿಯನ್ನು ನೀಡಿ ಉತ್ತಮ ಅಭ್ಯರ್ಥಿಗೆ ಮತಚಲಾಯಿಸಿ ವಿಧಾನಸಭೆಗೆ ಕಳುಹಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.

ಅಭ್ಯರ್ಥಿಯ ಪೂರ್ವಾಪರ ತಿಳಿದು ಮತದಾನ ಮಾಡಿ
ಚುನಾವಣೆಯಲ್ಲಿ ಚುನಾಯಿತರಾಗಿ ಬರುವಂ ಜನಪ್ರತಿನಿಧಿಗಳು ವಿಧಾನಸೌಧಕ್ಕೆ ಬಂದು, ವಿಧಾನಸಭಾ ಕಾರ್ಯಕಲಾಪಗಳಲ್ಲಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಚರ್ಚಿಸುವಂತಹ ಯೋಜನೆಗಳು, ಪಾಲಿಸಿಗಳು ಕಾರ್ಯರೂಪಕ್ಕೆ ತರುವಂತಹವೆಲ್ಲವೂ ನಮ್ಮೆಲ್ಲರ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ವಿಧಾಸಭೆಗೆ ಕಳುಹಿಸುವಂತ ಪ್ರತಿನಿಧಿಯ ಬಗ್ಗೆ ನಾವೆಲ್ಲರೂ ಮೊದಲು ತಿಳಿದುಕೊಂಡು ಆಯ್ಕೆ ಮಾಡಬೇಕು.
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಕಾರ್ಯನಿರತರಾದ ವಿದ್ಯಾರ್ಥಿಗಳೆಲ್ಲರೂ ನಿಮ್ಮ ಕ್ಷೇತಗಳಲ್ಲಿ ಎಷ್ಟು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಪಾಲ್ಗೊಂಡಿದ್ದಾರೆ. ಅವರ ಬಗ್ಗೆ ಮತದಾರರಿಗೆ ತಿಳಿದಿದೆಯೇ, ಯಾರು ಉತ್ತಮ ಅಭ್ಯರ್ಥಿ, ಮತಗಟ್ಟೆಗಳು ಎಲ್ಲಿವೆ, ಹೇಗೆ ಹೋಗಬೇಕು, ಅಲ್ಲಿನ ವ್ಯವಸ್ಥೆ ಬಗ್ಗೆ ಬಡಾವಣೆಯ ಮತದಾರರಿಗೆ ತಿಳಿಸಬೇಕು ಎಂದು ಹೇಳಿದರು.

NSS ನ ಐದು ಲಕ್ಷ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ
ರಾಜ್ಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ (NSS) ಅಡಿ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಲಿದ್ದಾರೆ. ಅವರೆಲ್ಲರು ಚುನಾವಣಾ ಆಯೋಗದ ಜೊತೆಗೆ ಸೇರಿ ಎಲ್ಲಾ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸಾರ್ವಜನಿಕರು ಸಹ ಮತದಾನದ ಹಕ್ಕನ್ನು ಚಲಾಯಿಸಿ ಚುನಾವಣೆ ಯಶಸ್ವಿ ಗೊಳಿಸಬೇಕು ಎಂದರು.
ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ಮಾತನಾಡಿ, ನಗರದಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಕೈಜೋಡಿಸಿ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದ ಮಹಾಹಬ್ಬದ ದಿನದಂದು ಎಲ್ಲರೂ ಬಂದು ಮತಚಾಯಿಸುವ ಮೂಲಕ ಮತದಾನದ ಹಬ್ಬವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
5000 ವಿಧ್ಯಾರ್ಥಿಗಳ ಬೃಹತ್ ವಾಕಥಾನ್ ಇದು
ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ನಿಂದ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಯ ಮೂಲಕ, ಕೆ.ಆರ್. ವೃತ್ತ, ನೃಪತುಂಗ ರಸ್ತೆ, ಹಡ್ಸನ್ ವೃತ್ತದ ಮೂಲಕ ಸಾಗಿ ಕಂಠೀರವ ಕ್ರೀಡಾಂಗಣದವರೆಗೆ ಬೃಹತ್ ವಾಕಥಾನ್ ನಡೆಯಿತು. ಮೊದಲ ಬಾರಿಗೆ ಮತದಾನ ಮಾಡುತ್ತಿರುವ 5,000ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಬಿತ್ತಿಪತ್ರಗಳನ್ನು ಹಿಡಿದ ರಸ್ತೆಯುದ್ದಕ್ಕೂ ಘೋಷಣೆಗಳನ್ನು ಕೂಗುತ್ತಾ ಮತದಾರರಲ್ಲಿ ಮತದಾನ ಮಾಡಲು ಪ್ರೇರೇಪಿಸಿದರು.
ಮತದಾನ ಸಂಕಲ್ಪ ನಾಟಕ ಪ್ರದರ್ಶನ
ಬಿ.ಎಂ.ಟಿ.ಸಿ ಹಾಗೂ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಯ ನಾಟಕ ತಂಡದಿಂದ ಪ್ರಜಾಪ್ರಭುತ್ವದಲ್ಲಿ ಮತದಾನದ ಪ್ರಾಮುಖ್ಯತೆಯನ್ನು ತಿಳಿಸುವಂತಹ "ಮತದಾನ ಸಂಕಲ್ಪ" ನಾಟಕ ಪ್ರದರ್ಶಿಸಲಾಯಿತು. ಟಿ.ಎಂ ಬಾಲಕೃಷ್ಣ ರಚಿತ ಈ ನಾಟಕದ ಮೂಲಕ ವಿದ್ಯಾರ್ಥಿಗಳಲ್ಲಿ ಮತದಾನದ ಪ್ರಾಮುಖ್ಯತೆ ಅರಿವು ಮೂಡಿಸಲಾಯಿತು ಎಂದರು.
ಈ ವೇಳೆ ಸ್ವೀಪ್ ಸಮಿತಿ ಅಧ್ಯಕ್ಷರಾದ ಶ್ರೀ ಸಂಗಪ್ಪ, ರಾಜ್ಯ ಸ್ವೀಪ್ ನೋಡಲ್ ಅಧಿಕಾರಿಯಾದ ವಸ್ತ್ರದ್, ಸ್ವೀಪ್ ನೋಡಲ್ ಅಧಿಕಾರಿಯಾದ ಸಿದ್ದೇಶ್ವರ್, ಬೆಂಗಳೂರು ಐಕಾನ್ ಆದ ಮೋಹನ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.












Click it and Unblock the Notifications