ಬೆಂಗಳೂರು ನಮ್ದು, ಇಲ್ಲಿ ಹಿಂದಿ ಮಾತಾಡೋ: ಕನ್ನಡಿಗನಿಗೆ ಪರಭಾಷಿಕನಿಂದ ಬೆದರಿಕೆ
ಭಾಷಾ ವಿಚಾರವಾಗಿ ಬೆಂಗಳೂರು ಆಗಾಗ ಕೊತಕೊತ ಕುದಿಯುತ್ತಲೇ ಇದೆ. ಹಿಂದಿ ಹೇರಿಕೆ ವಿರುದ್ಧ ಕನ್ನಡಿಗರು ದೊಡ್ಡ ಅಭಿಯಾನ ಮಾಡುವ ಮೂಲಕ ಪರಭಾಷಿಕರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಪ್ರತಿನಿತ್ಯವೂ ಭಾಷಾ ವಿಚಾರವಾಗಿ ಗಲಾಟೆಗಳು ನಡೆಯುತ್ತಲೇ ಇವೆ. ಮೊದಲು ಕನ್ನಡ ಕಲಿಯಲು ಗಾಂಚಾಲಿ ತೋರುತ್ತಿದ್ದ ಪರಭಾಷಿಕರು ಈಗ ಕನ್ನಡ ನೆಲದಲ್ಲೇ ಹಿಂದಿ ಕಲಿರೋ ಎಂದು ಕನ್ನಡಿಗರಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ದರ್ಪ ತೋರುತ್ತಿದ್ದಾರೆ. ಈ ಸಂಬಂಧ ವಿಡಿಯೋವೊಂದು ವೈರಲ್ ಆಗಿದ್ದು, ಇದು ಬೆಂಗಳೂರು ನೀನು ಹಿಂದಿಯಲ್ಲಿ ಮಾತಾಡೋ ಎಂದು ಕನ್ನಡಿಗನಿಗೆ ಪರಭಾಷಿಕನೊಬ್ಬ ಅವಾಜ್ ಹಾಕಿದ್ದಾನೆ.
ಯುವತಿಯೊಂದಿಗೆ ಬೆಂಗಳೂರಿಗೆ ಬಂದಿರುವ ಹಿಂದಿಭಾಷಿಕನೊಬ್ಬ ಕನ್ನಡಿಗನೊಂದಿಗೆ ಭಾಷಾ ವಿಚಾರವಾಗಿ ಕಿರಿಕ್ ಮಾಡಿದ್ದಾನೆ. ಈತನ ಪೊಗರು ಕಂಡ ಕನ್ನಡಿಗ ಆತನಿಗೆ ಕನ್ನಡದಲ್ಲಿ ಮಾತನಾಡುವಂತೆ ಹೇಳಿದ್ದಾನೆ. ಇದರಿಂದ ಗರಂ ಆಗಿರುವ ಹಿಂದಿ ಭಾಷಿಕ ಸಾರ್ವಜನಿಕ ಸ್ಥಳದಲ್ಲೇ ಕನ್ನಡಿಗನಿಗೆ ಬೆದರಿಕೆ ಹಾಕುವಂತೆ ಮಾತನಾಡಿದ್ದಾನೆ. ಇದನ್ನು ರೆಕಾರ್ಡ್ ಮಾಡಿಕೊಳ್ಳಲು ಕನ್ನಡಿಗ ಮುಂದಾದಾಗ, ರೆಕಾರ್ಡ್ ಬೇಕಾ ಮಾಡ್ಕೋ, ಕರ್ನಾಟಕ ನಮ್ದು, ಬೆಂಗಳೂರು ನಮ್ದು, ಇಲ್ಲಿ ಹಿಂದಿ ಮಾತಾಡು ಎಂದು ಅವಾಜ್ ಹಾಕಿದ್ದಾನೆ.

ಇದಕ್ಕೆ ಸರಿಯಾಗಿ ಬೆವರಳಿಸಿರುವ ಕನ್ನಡಿಗ, ಲೋ ನೀನು ಎಲ್ಲಿಂದಲೋ ಬೆಂಗಳೂರಿಗೆ ಬಂದಿರೋದು, ನೀನು ಮೊದಲು ಕನ್ನಡದಲ್ಲಿ ಮಾತಾಡು ಎಂದು ಚಳಿಬಿಡಿಸಿದ್ದಾನೆ. ಆದರೂ ಸುಮ್ಮನಾಗದ ಹಿಂದಿವಾಲ ನೀನು ಹಿಂದಿ ಮಾತಾಡು, ಹಿಂದಿಯಲ್ಲೇ ಮಾತಾಡು ಎನ್ನುತ್ತಾ ಕೂಗಾಡಿದ್ದಾನೆ. ಕೊನೆಗೆ ಅವನೊಂದಿಗೆ ಇದ್ದ ಯುವತಿ ಆತನನ್ನು ಪಕ್ಕಕ್ಕೆ ಎಳೆದೊಯ್ದಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರಿ ಖಂಡನೆ ವ್ಯಕ್ತವಾಗುತ್ತಿದೆ.
ನಾವು ಕನ್ನಡ ಕಲಿರಿ ಅಂದರೆ ಕಲಿಯಲ್ಲ ಅಂದ್ರು. ಆಯ್ತು ಅಂತ ಸುಮ್ಮನಿದ್ವಿ, ಈಗ ನೋಡಿದ್ರೆ ನಮ್ಮೂರಲ್ಲೇ ಬಂದು ನಮ್ಮನ್ನೇ ಹಿಂದಿ ಮಾತಾಡು ಎಂದು ಅವಾಜ್ ಹಾಕೋಕೆ ಇವರಿಗೆ ಎಷ್ಟು ಪೊಗರು? ಎಂದು ಪ್ರಶ್ನೆ ಕೇಳಿದ್ದಾರೆ. ಬೆಂಗಳೂರನ್ನು ಪರಭಾಷಿಕರ ಸ್ವರ್ಗ ಮಾಡಿರೋ ಸರ್ಕಾರಗಳಿಗೆ ಇದೆಲ್ಲ ಕಾಣಲ್ವಾ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವಿಡಿಯೋ ಹಂಚಿಕೊಂಡಿರುವ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ, ತಮ್ಮ ಊರಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಆಗದೆ ನಮ್ಮೂರಿಗೆ ಬಂದ್ರು, ಕನ್ನಡವನ್ನ ಕನ್ನಡ್ ಮಾಡಿದ್ರು. ಕನ್ನಡ ಕಲೀರಪ್ಪ ಅಂದ್ರೆ, ಇಲ್ಲ ನಾವು ಕಲಿಯಲ್ಲ ಅಂದ್ರು. ಈಗ ನಮ್ಮೂರಲ್ಲಿ ನಮಗೆ ಹಿಂದಿಲಿ ಮಾತಾಡಿ ಅಂತ ಬೆದರಿಕೆ ಹಾಕೋ ಲೆವೆಲ್‌ಗೆ ಬಂದಿದ್ದಾರೆ. ಇವರ ದುರಹಂಕಾರಕ್ಕೆ ಕಾರಣ ನಮ್ಮಲ್ಲೇ ಇರೋ ಗುಲಾಮಗಿರಿ ಮಾಡೋರು ಎಂದು ಕಿಡಿಕಾರಿದ್ದಾರೆ.
ಮೊದಲು ಇವನನ್ನ ಪತ್ತೆ ಹಚ್ಚಿ, ಮುಂದೆಂದೂ ಹಿಂದಿಯೇತರ ರಾಜ್ಯದಲ್ಲಿ ಇಂತಹ ಅವಿವೇಕ ದುರ್ವರ್ತನೆ ತೋರಿಸಬಾರದು ಹಾಗೆ ಬುದ್ಧಿ ಕಲಿಸೋಣ ಎಂದು ಹಲವರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಈ ಮಟ್ಟಕ್ಕೆ ವಲಸಿಗರ ದುರಹಂಕಾರ, ದೌರ್ಜನ್ಯ ಮೆರೆಯಲು ಕಾರಣರಾದ ಕಾಂಗ್ರೆಸ್ ಹಾಗೂ ಬಿಜೆಪಿಗೆ ನಾಚಿಕೆಯಾಗಬೇಕು. ಅವರವರ ರಾಜ್ಯಗಳಲ್ಲಿ ಅಭಿವೃದ್ಧಿ ಆಗಿದ್ದರೆ ಇಲ್ಲಿಗೆ ಬಂದು ಈ ರೀತಿ ಬದುಕುವ ದುರ್ಗತಿ ಅವರಿಗೆ ಬರುತ್ತಿರಲಿಲ್ಲ. ಇವನು ಕೂಡಲೇ ಕ್ಷಮೆ ಕೇಳದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ವಾರ್ನಿಂಗ್ ಕೂಡ ಕೊಟ್ಟಿದ್ದಾರೆ.












Click it and Unblock the Notifications