Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ರೂಲ್ಸ್ ಬ್ರೇಕ್: ಆರಂಭದಿಂದ ಇದುವರೆಗೂ ಸಂಗ್ರಹವಾದ ದಂಡವೆಷ್ಟು?
Bengaluru-Mysuru Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತದೆ. ಅದರಲ್ಲೂ ಟೋಲ್ ವಿಚಾರದಲ್ಲಿ ಆಗಾಗ ಮುನ್ನಲೆಯಲ್ಲಿರುತ್ತದೆ. ಹಾಗಾದರೆ, ಈ ಹೆದ್ದಾರಿ ಆರಂಭವಾದ ಮೂರು ವರ್ಷಗಳಲ್ಲಿ ಸಂಚಾರ ನಿಯಮ ಉಲ್ಲಂಘನೆಯಲ್ಲಿ ಎಷ್ಟು ದಂಡ ವಿಧಿಸಲಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಆರಂಭ ಆದ ಇದುವರೆಗೂ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಚಾಲಕರಿಗೆ ಐಟಿಎಂಎಸ್ ಮೂಲಕ 85,80,67,000 ರೂಪಾಯಿ ದಂಡ ವಿಧಿಸಲಾಗಿದ್ದು, ಅದರಲ್ಲಿ ಸಂಗ್ರಹವಾದ ಮೊತ್ತ ಕೇವಲ 4,90,78,500 ರೂಪಾಯಿ ಮಾತ್ರ ಆಗಿದೆ ಎಂದು ಸುವರ್ಣ ನ್ಯೂಸ್ ವರದಿ ಮಾಡಿದೆ.

2022-23ನೇ ಸಾಲಿನಲ್ಲಿ 4,74,550 ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ. ಸೀಟ್ ಬೆಲ್ಟ್ ಧರಿಸದ 2,95,413, ಓವರ್ ಸ್ಪೀಡ್‌ಗೆ 49,584, ಲೈನ್ ಶಿಸ್ತು ಉಲ್ಲಂಘನೆಗೆ 49,652, ಚಾಲಕ ಮೊಬೈಲ್ ಫೋನ್ ಬಳಸಿದ್ದಕ್ಕೆ 8,568 ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ 31,57,96,500 ರೂಪಾಯಿ ದಂಡ ವಿಧಿಸಲಾಗಿದ್ದು, ಇದರಲ್ಲಿ 1,98,78,500 ರೂಪಾಯಿ ದಂಡ ಸಂಗ್ರಹಿಸಿದ್ದು, ಇನ್ನೂ 29,59,17,000 ರೂಪಾಯಿ ಬಾಕಿ ದಂಡ ಪಾವತಿ ಆಗಬೇಕಿದೆ.
2023-24ನೇ ಸಾಲಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ 4,55,458 ಪ್ರಕರಣಗಳು ದಾಖಲಾಗಿವೆ. ಸೀಟ್‌ಬೆಲ್ಟ್ ಧರಿಸದ 2,12,461, ಓವರ್ ಸ್ಪೀಡ್‌ಗೆ 1,96,237, ಲೈನ್ ಶಿಸ್ತು ಉಲ್ಲಂಘನೆಗೆ 36,016 ಹಾಗೂ ಚಾಲಕ ಮೊಬೈಲ್ ಹಿಡಿದು ಚಾಲನೆ ಮಾಡಿದ್ದಕ್ಕೆ 8,777 ಪ್ರಕರಣಗಳು ದಾಖಲಾಗಿವೆ. ಈ ನಿಯಮ ಉಲ್ಲಂಘನೆಗೆ 34,28,65,000 ದಂಡ ವಿಧಿಸಿದ್ದು, 1,98,36,500 ರೂಪಾಯಿ ಮಾತ್ರ ಸಂಗ್ರಹಿಸಲಾಗಿದೆ. ಇನ್ನೂ 32, 31,28,500 ರೂಪಾಯಿ ದಂಡ ಬಾಕಿ ವಸೂಲಿ ಆಗಬೇಕಿದೆ.
2024-25ನೇ ಸಾಲಿನ ನವೆಂಬರ್ ಅಂತ್ಯದವರೆಗೆ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ 4,11,932 ಪ್ರಕರಣಗಳು ದಾಖಲಿಸಲಾಗಿವೆ. ಸೀಟ್ ಬೆಲ್ಟ್ ಧರಿಸದಿರುವುದಕ್ಕೆ 1,91,437, ಓವರ್ ಸ್ಪೀಡ್‌ಗೆ 29,006, ಲೈನ್ ಶಿಸ್ತು ಕಾಪಾಡದಿರುವುದಕ್ಕೆ 42,670, ವಾಹನ ಚಾಲನೆ ಮಾಡುವಾಗ ಚಾಲಕ ಮೊಬೈಲ್‌ನಲ್ಲಿ ಮಾತನಾಡಿದ್ದಕ್ಕೆ ಸಂಬಂಧಿಸಿದಂತೆ 4,11,932 ಪ್ರಕರಣಗಳು ದಾಖಲಾಗಿವೆ.
ಈ ನಿಯಮ ಉಲ್ಲಂಘನೆಗೆ 24,83,84,000 ರೂಪಾಯಿ ದಂಡ ವಿಧಿಸಿದ್ದು, ಅದರಿಂದ ಬಂದ ಹಣ 93,62,500 ರೂಪಾಯಿ ಇನ್ನೂ 23,90,21,500 ರೂಪಾಯಿ ಬಾಕಿ ದಂಡ ವಸೂಲಿ ಆಗಬೇಕಿದೆ ಎಂದು ಸುವರ್ಣ ನ್ಯೂಸ್ ವರದಿ ಮಾಡಿದೆ. ಐಟಿಎಂಎಸ್ ಕ್ಯಾಮೆರಾಗಳಿಂದ ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ವಾಹನ ಸವಾರರು ಸಂಚಾರ ನಿಯಮ ಉಲ್ಲಂಘಿಸಿದಲ್ಲಿ ಅಂತಹ ವಾಹನಗಳನ್ನು ಪತ್ತೆ ಹಚ್ಚಿ ಸ್ವಯಂಚಾಲಿತ ಭಾವಚಿತ್ರಗಳನ್ನು ತೆಗೆಯುವ ಕೆಲಸ ನಡೆಯುತ್ತಿದೆ.
ವಾಹನಗಳ ನೋಂದಣಿ ಸಂಖ್ಯೆಯನ್ನು ಆಧರಿಸಿ ವಾಹನ ಮಾಲೀಕರ ಮೊಬೈಲ್‌ಗೆ ಕೂಡಲೇ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದ ಬಗ್ಗೆ ಪಾವತಿಸಬೇಕಾದ ದಂಡದ ಬಗ್ಗೆ ಕೂಡಲೇ ಎಸ್‌ಎಂಎಸ್ ಸಂದೇಶ ಕಳುಹಿಸುವ ವಿಶೇಷತೆಯನ್ನು ಈ ಕ್ಯಾಮೆರಾಗಳು ಒಳಗೊಂಡಿವೆ.
ಹೆದ್ದಾರಿಯ 12 ಕಡೆಗಳಲ್ಲಿ ಐಟಿಎಂಎಸ್ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ರಾಮನಗರ-5, ಮಂಡ್ಯ-5, ಮೈಸೂರಿನಲ್ಲಿ 2 ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದೆ. ಆದರೆ, ಐಟಿಎಂಎಸ್ ಕ್ಯಾಮೆರಾಗಳ ಕಾರ್ಯನಿರ್ವಹಣೆಯ ಬಗ್ಗೆಯೂ ಚಾಲಕರಿಂದ ದೂರುಗಳು ಕೇಳಿಬರುತ್ತಿವೆ. ಸೀಟ್ ಬೆಲ್ಟ್ ಧರಿಸಿದ್ದರೂ ಹಾಗೂ ವಾಹನ ಚಾಲನೆ ಸಮಯದಲ್ಲಿ ಮೊಬೈಲ್ ಬಳಸದಿದ್ದರೂ ದಂಡ ವಿಧಿಸಲಾಗುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ.
ವಾಹನ ಸವಾರರು ನೀಡಿದ ದೂರುಗಳನ್ನು ಪರಿಗಣಿಸಿ ಸಂಬಂಧಪಟ್ಟ ವಾಹನ ಚಾಲಕರಿಂದ ದೂರುಗಳನ್ನು ಪರಿಶೀಲಿಸಿ ಕ್ರಮ ಜರುಗಿಸಲಾಗುತ್ತಿದೆ ಎಂದು ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರ ಪ್ರಶ್ನೆಗೆ ಉತ್ತರಿಸಿದ್ದಾರೆ.












Click it and Unblock the Notifications