Auto Meter Price: ಜನವರಿ 1ರಿಂದ ಆಟೋ ಮೀಟರ್ ದರ ಏರಿಕೆ ಇಲ್ಲ: ಇಲ್ಲಿದೆ ಸ್ಪಷ್ಟನೆ
ಬೆಂಗಳೂರು, ಡಿಸೆಂಬರ್ 19: ರಾಜ್ಯದಲ್ಲಿ ಬೆಲೆ ಏರಿಕೆ ಎನ್ನುವುದು ಜನರಿಗೆ ಹೊಸತಲ್ಲ. ಪೆಟ್ರೋಲ್ ಹಾಗೂ ಡೀಸೆಲ್, ಹಾಲು, ತರಕಾರಿ, ಹೂ-ಹಣ್ಣುಗಳ ಬೆಲೆ ಸೇರಿದಂತೆ ದಿನ ನಿತ್ಯದ ಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈ ನಡುವೆ ಆಟೋ ದರ ಕೂಡ ಹೆಚ್ಚಾಗುತ್ತದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಬೆಂಗಳೂರಿನಲ್ಲಿ ಜನವರಿ 1ರಿಂದ ಆಟೋ ಮೀಟರ್ ಬೆಲೆ ಏರಿಕೆ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದರಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಹೀಗಾಗಿ ಈ ಸುದ್ದಿ ಸುಳ್ಳೋ? ಸತ್ಯವೋ? ಎನ್ನುವ ಸ್ಪಷ್ಟನೆ ಇಲ್ಲಿದೆ. ಈ ಬಗ್ಗೆ ಒಲಾ ಊಬರ್ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್ ಪಾಷ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಆಟೋ ರಿಕ್ಷಾ ಮೀಟರ್ ದರವನ್ನು ಹೆಚ್ಚಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಚರ್ಚಿಸಲು ಈ ತಿಂಗಳ 23ರಂದು ಸಭೆ ಕರೆದಿರುವುದರಿಂದ ನಮಗೆ ಸಾರಿಗೆ ಇಲಾಖೆಯಿಂದ ನೋಟಿಸ್ ಬಂದಿದೆ. ಇದು ಕೇವಲ ಚರ್ಚೆಯ ಸಭೆಯಾಗಿದ್ದು, ದರ ಹೆಚ್ಚಿಸಲು ಇನ್ನೂ ನಿರ್ಧರಿಸಲಾಗಿಲ್ಲ. ಆದರೆ ಕೆಲವು ಡಿಜಿಟಲ್ ಮಾಧ್ಯಮಗಳಿಗೆ ಕೆಲವರು 2025ರ ಜನವರಿ 1ರಿಂದ ಆಟೋ ಮೀಟರ್ ಬೆಲೆ ಏರಿಕೆಯಾಗಲಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ.
ಅದನ್ನು ಈಗಾಗಲೇ ಕೆಲವರು ಪ್ರಸಾರ ಸಹ ಮಾಡಿದ್ದಾರೆ. ಈ ಬಗ್ಗೆ ಕೆಲವು ವಿಡಿಯೋ ತುಣುಕುಗಳನ್ನು ನಾನು ನೋಡಿದ್ದೇನೆ. ಇದು ಸತ್ಯಕ್ಕೆ ದೂರವಾದ ಸಂಗತಿ. ಕೆಲ ಸಂಘಟನೆಯ ನಾಯಕರು ಅವರ ಸ್ವಪ್ರತಿಷ್ಠೆಗೆ ಹಾಗೂ ಅವರ ಪ್ರಚಾರ ಹುಚ್ಚಿನಿಂದ ಮಾಧ್ಯಮದವರ ದಿಕ್ಕು ತಪ್ಪಿಸಿದ್ದಾರೆ. ಇದರಿಂದ ಸಾರ್ವಜನಿಕರು ಸಹ ಆತಂಕಗೊಂಡಿದ್ದಾರೆ.
ಜನವರಿಯಲ್ಲಿ ಯಾವುದೇ ರೀತಿಯ ದರ ಹೆಚ್ಚಳ ವಾಗುವುದಿಲ್ಲ. ಹಾಗೇನಾದರೂ ದರ ಹೆಚ್ಚಳಕ್ಕೆ ಎಲ್ಲರೂ ಒಪ್ಪಿಗೆ ನೀಡಿದರೆ ಅದು ಮುಂದಿನ 6 ತಿಂಗಳ ನಂತರ ಆಗಬಹುದು. ದರ ಹೆಚ್ಚಳಕ್ಕೆ ಸಭೆಯಲ್ಲಿ ಒಮ್ಮತ ಸಿಗದಿದ್ದರೆ ದರ ಹೆಚ್ಚಳವಾಗುವುದಿಲ್ಲ. ಸದ್ಯಕ್ಕೆ ಜನವರಿಯಲ್ಲಿ (ಹೊಸವರ್ಷದಲ್ಲಿ) ಯಾವುದೇ ದರ ಹೆಚ್ಚಳ ವಾಗುವುದಿಲ್ಲ. ದರ ಹೆಚ್ಚಳ ಬೇಕಾ? ಬೇಡವಾ? ಎಂಬ ಬಗ್ಗೆ ನಾವು ನಮ್ಮ ನಿರ್ಧಾರವನ್ನು 23ರಂದು ಸಾರಿಗೆ ಅಧಿಕಾರಿಗಳು ಕರೆದಿರುವ ಸಭೆಯಲ್ಲಿ ಬಹಿರಂಗ ಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಆಟೋ ಮೀಟರ್ ದರ ಹೆಚ್ಚಿಸುವಂತೆ ಆಟೋ ಚಾಲಕರ ಸಂಘ ಒತ್ತಾಯ
ದಿನ ನಿತ್ಯದ ಅಗತ್ಯತೆಯ ಎಲ್ಲಾ ವಸ್ತುಗಳ ದರ ಏರಿಕೆಯಾಗಿದೆ. ಹೀಗಾಗಿ ಆಟೋ ಮೀಟರ್ ದರ ಕೂಡ ಹೆಚ್ಚಿಸುವಂತೆ ಬೆಂಗಳೂರು ಆಟೋ ಚಾಲಕರ ಸಂಘ ಒತ್ತಾಯ ಮಾಡುತ್ತಲೇ ಬರುತ್ತಿದ್ದಾರೆ. ಮೂರು ವರ್ಷಗಳಿಂದ ಪ್ರಯಾಣ ದರ ಏರಿಕೆಯಾಗದ ಕಾರಣ ಚಾಲಕರಿಗೆ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಹೀಗಾಗಿ ಕನಿಷ್ಠ ಆಟೋ ದರವನ್ನು ಕೂಡ ಹೆಚ್ಚಿಸುವಂತೆ ಸಂಘ ಒತ್ತಾಯಿಸುತ್ತಿದೆ.












Click it and Unblock the Notifications