BMTC Advertisement: ಬಿಎಂಟಿಸಿ ಬಸ್ ಸುತ್ತ ಜಾಹೀರಾತು ಹಾಕಲು ಟೆಂಡರ್- ಆದಾಯ ಹೆಚ್ಚಿಸಲು ಹೊಸ ನೀತಿ
ಬೆಂಗಳೂರು ನವೆಂಬರ್ 29: ಕಳೆದ ಮೂರು ತಿಂಗಳಿನಲ್ಲಿ ಮಹಿಳೆಯರ ಸೀಟಿನಲ್ಲಿ ಕುಳಿತು ಪ್ರಯಾಣ, ಟಿಕೆಟ್ ರಹಿತ ಪ್ರಯಾಣಕ್ಕಾಗಿ ಬಿಎಂಟಿಸಿ 19 ಲಕ್ಷ ದಂಡವನ್ನು ವಸೂಲಿ ಮಾಡಿದೆ. ಇದೀಗ ಜಾಹೀರಾತಿನ ಮೂಲಕ ಆರ್ಥಿಕ ನಷ್ಟವನ್ನು ಸರಿದೂಗಿಸಲು ಮುಂದಾಗಿದೆ. ಇದಕ್ಕಾಗಿ ಬಿಎಂಟಿಸಿ ಬಸ್‌ಗಳಿಗೆ ಜಾಹೀರಾತು ಹಾಕಲು ಟೆಂಡರ್ ಕರೆದಿದೆ.
ಹೌದು... ಕರ್ನಾಟಕ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದ ಬಳಿಕ ಸಾರಿಗೆ ನಿಗಮಗಳ ಆದಾಯ ಪಾತಾಳಕ್ಕಚ್ಚಿದೆ. ಆದರೆ ಈ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಾತ್ರ ಎಲ್ಲಿಯೂ ಹೇಳಿಕೊಂಡಿಲ್ಲ. ಸಾರಿಗೆ ನಿಗಮಗಳು ಲಾಭದ ಹಾದಿಗೆ ಮರಳಿದೆಯಾ ಅಂತ ಪ್ರಶ್ನಿಸಿದರೆ ಇಲ್ಲ ಅಂತಲೇ ಉತ್ತರ ಸಿಗುತ್ತದೆ.

ಹೀಗಾಗಿ ಬಿಎಂಟಿಸಿ ಆದಾಯ ಹೆಚ್ಚಿಸಲು ಬಿಗ್ ಪ್ಲ್ಯಾನ್‌ವೊಂದನ್ನ ಮಾಡಿದೆ. ಈ ಪ್ಲ್ಯಾನ್ ಪ್ರಕಾರ ಎಲ್ಲವೂ ಅಂದುಕೊಂಡಂತೆ ಆದರೆ ಬಿಎಂಟಿಸಿ ಆದಾಯ ತಿಂಗಳಿಗೆ 30 ಲಕ್ಷ ರೂಪಾಯಿ ಹೆಚ್ಚಾಗುವ ನಿರೀಕ್ಷೆಯಿದೆ. ಇದಕ್ಕಾಗಿ ಬಿಎಂಟಿಸಿ ಜಾಹೀರಾತಿನ ಮೊರೆ ಹೋಗಿದೆ. ಬಿಎಂಟಿಸಿಯ 3000 ಬಸ್‌ಗಳಲ್ಲಿ ಸಂಪೂರ್ಣ ಸುತ್ತುವರಿದಂತೆ ಜಾಹೀರಾತು ಪ್ರದರ್ಶನಕ್ಕೆ ತಯಾರಿ ನಡೆಸಿದೆಯಂತೆ. ಇದಕ್ಕಾಗಿ ಟೆಂಡರ್ ಕರೆಯಲಾಗಿದ್ದು ಡಿಸೆಂಬರ್ 7ರವರೆಗೆ ಟೆಂಡರ್‌ನಲ್ಲಿ ಭಾಗಿಯಾಗಲು ಬಿಎಂಟಿಸಿ ಟೆಂಡರ್‌ಗಳಿಗೆ ಕರೆ ನೀಡಿದೆ.
ಈವರೆಗೆ ಬಿಎಂಟಿಸಿ ಬಸ್‌ಗಳಿಗೆ ಹಿಂಬದಿ ಭಾಗದಲ್ಲಿ ಮಾತ್ರ ಜಾಹೀರಾತುಗಳನ್ನು ಹಾಕಲು ಅವಕಾಶ ನೀಡಲಾಗಿತ್ತು. ಆದರೆ ಈಗ ಮುಂಬದಿಯ ಹಾಗೂ ಹಿಂಬದಿಯ ಗಾಜು ಎರಡನ್ನೂ ಹೊರತುಪಡಿಸಿ ಉಳಿದ ಎಲ್ಲಾಭಾಗದಲ್ಲೂ ಜಾಹೀರಾತು ಅಳವಡಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾಮಾನ್ಯ ಬಿಎಂಟಿಸಿ ಬಸ್ ಹಾಗೂ ಎಸ್ ಬಸ್‌ಗಳಲ್ಲಿ ಜಾಹೀರಾತು ಪ್ರದರ್ಶನ ಬೇರೆ ಬೇರೆಯಾಗಿರುತ್ತದೆ. ಇದಕ್ಕೆ ತಗಲು ವೆಚ್ಚ ಕೂಡ ಕೊಂಚ ವಿಭಿನ್ನವಾಗಿರುತ್ತದೆ.
ಬಿಎಂಟಿಸಿಯ ಆರು ಸಾವಿರಕ್ಕೂ ಹೆಚ್ಚಿನ ಬಸ್‌ಗಳ ಪೈಕಿ 3000 ಹವಾ ನಿಯಂತ್ರಿತವಲ್ಲದ ಬಸ್‌ಗಳಲ್ಲಿ, ಹೊಸ ರೂಪದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಬಿಎಂಟಿಸಿ ಮುಂದಾಗಿದೆ. ಒಂದು ಬಸ್‌ಗೆ ಜಾಹೀರಾತು ಅಳವಡಿಸಲು 12,000 ರಿಂದ 13,000 ರೂಪಾಯಿ ನಿಗದಿ ಮಾಡಲಾಗಿದೆ. ತಿಂಗಳಿಗೆ ಮೂರು ಕೋಟಿ ರೂಪಾಯಿಯಿಂದ ಎಪ್ಪತ್ತೈದು ಕೋಟಿ ರೂಪಾಯಿವರೆಗೆ ಆದಾಯವನ್ನು ನಿರೀಕ್ಷೆ ಮಾಡಲಾಗಿದೆ.
ಸಾರ್ವಜನಿಕರಿಂದ ಜಾಹೀರಾತಿಗೆ ವಿರೋಧ ವ್ಯಕ್ತ
ಸಾರ್ವಜನಿಕರಿಂದ ಜಾಹೀರಾತಿಗೆ ವಿರೋಧ ವ್ಯಕ್ತವಾಗಿದೆ. ಈಗಿರುವ ಬಸ್‌ಗಳಿಗೆ ಹಿಂಬದಿಯಲ್ಲಿ ಹಾಕುವ ಜಾಹೀರಾತುಗಳಿಂದ ಬಸ್ ಯಾವುದು, ಎಲ್ಲಿಗೆ ಹೋಗುತ್ತದೆ ಎನ್ನುವುದು ಗೊತ್ತಾಗದಂತಾಗಿದೆ. ಹೀಗಿರುವಾಗ ಬಸ್ ಸುತ್ತಲೂ ಜಾಹೀರಾತು ಹಾಕಿದರೆ ಬಸ್ ನಂಬರ್, ಪ್ರಯಾಣಿಸುವ ಸ್ಥಳದ ಬಗ್ಗೆ ತಿಳಿಯುವುದು ಕಷ್ಟವಾಗುತ್ತದೆ. ಅಷ್ಟೇ ಅಲ್ಲ ದೂರದಿಂದ ಖಾಸಗಿ ಬಸ್ ಹಾಗೂ ಬಿಎಂಟಿಸಿ ಬಸ್ ಯಾವುದು ಎಂದು ಗುರುತಿಸುವುದು ಕೂಡ ಕಷ್ಟವಾಗುತ್ತದೆ. ಹೀಗಾಗಿ ಬಿಎಂಟಿಸಿ ಹೊಸ ಜಾಹೀರಾತು ನೀತಿ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಇದರಲ್ಲಿ ಎಷ್ಟು ಕಂಪನಿಗಳು ಭಾಗಿಯಾಗಲಿವೆ ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ ಬಿಎಂಟಿಸಿ ಮಾತ್ರ ಆರ್ಥಿಕ ನಷ್ಟವನ್ನು ಸರಿದೂಗಿಸಲು ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಇದರಿಂದ ಬಿಎಂಟಿಸಿ ನಷ್ಟವನ್ನು ದೂಗಿಸುವ ಚಿಂತನೆಯಲ್ಲಿದೆ.












Click it and Unblock the Notifications