Kichcha Sudeep : ಡಿ.ಕೆ. ಶಿವಕುಮಾರ್ ಭೇಟಿಯಾದ ಕಿಚ್ಚ ಸುದೀಪ್: ಕಾರಣವೇನು?
ನಟ ಕಿಚ್ಚ ಸುದೀಪ್ ಭಾನುವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ಗೃಹ ಕಚೇರಿಯಲ್ಲಿ ಭೇಟಿಯಾಗಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಎಕ್ಸ್ ಹ್ಯಾಂಡಲ್‌ನಲ್ಲಿ ಈ ಮಾಹಿತಿಯನ್ನು ನೀಡಿದ್ದು, ಫೋಟೊಗಳನ್ನು ಕೂಡ ಹಂಚಿಕೊಂಡಿದ್ದಾರೆ.
ನಟ ಸುದೀಪ್ ಹಲವು ರಾಜಕಾರಣಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಗ್ಲೋಬಲ್ ಮಾಲ್ ಉದ್ಘಾಟನೆ ಸಂದರ್ಭದಲ್ಲಿ ಕೂಡ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು.

ಸುದೀಪ್ ಭಾನುವಾರ ಡಿ.ಕೆ. ಶಿವಕುಮಾರ್ ಅವರ ಗೃಹ ಕಚೇರಿಗೆ ಭೇಟಿ ನೀಡಿ ಕೆಲ ಸಮಯ ಚರ್ಚೆ ನಡೆಸಿದ್ದಾರೆ. ಯಾವ ವಿಚಾರದ ಬಗ್ಗೆ ಚರ್ಚೆ ನಡೆಸಲಾಗಿದೆ ಎನ್ನುವ ವಿಚಾರವನ್ನು ಇಬ್ಬರೂ ಕೂಡ ತಿಳಿಸಿಲ್ಲ. ಇದೊಂದು ಔಪಚಾರಿಕ ಭೇಟಿ ಎಂದು ಹೇಳಲಾಗುತ್ತಿದೆ.
ಬಿಜೆಪಿ ಪರ ಪ್ರಚಾರ
2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ನಟ ಸುದೀಪ್ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಸುದೀಪ್ ಬಿಜೆಪಿ ಪರವಾಗಿ ಮತಯಾಚನೆ ಮಾಡಿದ್ದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಪ್ತರಾಗಿರುವ ಸುದೀಪ್, ಬೊಮ್ಮಾಯಿ ಅವರಿಗಾಗಿ ಬಿಜೆಪಿ ಪರ ಪ್ರಚಾರ ಮಾಡಿದ್ದಾಗಿ ಹೇಳಿದ್ದರು.
ಚುನಾವಣೆ ಬಳಿಕ ಡಿ.ಕೆ. ಶಿವಕುಮಾರ್ ಜೊತೆಯಲ್ಲಿ ಎರಡನೇ ಬಾರಿ ಕಾಣಿಸಿಕೊಂಡಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸುದೀಪ್ ಏನಾದರೂ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡ್ತಾರ ಎನ್ನುವ ಪ್ರಶ್ನೆಗಳು ಕೂಡ ಕೇಳಿ ಬಂದಿವೆ. ಆದರೆ, ಲೋಕಸಭಾ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಡಿಕೆ ಶಿವಕುಮಾರ್ ಇದನ್ನು ಸೌಜನ್ಯಯುತ ಭೇಟಿ ಎಂದು ಟ್ವಿಟರ್ ಪೋಸ್ಟ್‌ನಲ್ಲಿ ಖಚಿತ ಪಡಿಸಿದ್ದಾರೆ.












Click it and Unblock the Notifications