ನ.28ರಂದು ಸೋದರಿ ನಿವೇದಿತಾ ಪ್ರತಿಷ್ಠಾನದಿಂದ ಫಿಫ್ತ್ ಪಿಲ್ಲರ್ ಕಾರ್ಯಕ್ರಮ
ಬೆಂಗಳೂರು, ನವೆಂಬರ್ 26: ಸೋದರಿ ನಿವೇದಿತಾ ಪ್ರತಿಷ್ಠಾನವು ನವೆಂಬರ್ 28 ರಂದು ಫಿಫ್ತ್ ಪಿಲ್ಲರ್ ಎನ್ನುವ ಕಾರ್ಯಕ್ರಮವನ್ನು ಬನಶಂಕರಿಯ ಅವರ್ ಸ್ಕೂಲ್‌ನಲ್ಲಿ ಆಯೋಜಿಸಿದೆ.
ಇದು ನವೋದ್ಯಮಗಳ ಯುಗ. ತಾಜಾ ಚಿಂತನೆಗಳ ಬಲದೊಂದಿಗೆ ವಿನೂತನ ಬಗೆಯ ನವೋದ್ಯಮಗಳು ಆರ್ಥಿಕತೆಗೆ ಬಲ ತುಂಬುತ್ತಿರುವುದಷ್ಟೇ ಅಲ್ಲ, ಜನಸಾಮಾನ್ಯರ ಬದುಕಿನಲ್ಲೂ ನವೋದ್ಯಮದ ಅನ್ವೇಷಣೆಗಳು ಮಹತ್ವದ ಸುಧಾರಣೆ ತಂದಿವೆ. ಮಾಹಿತಿ-ತಂತ್ರಜ್ಞಾನದ ರಾಜಧಾನಿ, ಜೈವಿಕ ತಂತ್ರಜ್ಞಾನದ ರಾಜಧಾನಿ ಎಂಬ ಹಿರಿಮೆ ಪಡೆದುಕೊಂಡಿರುವ ಬೆಂಗಳೂರು ಈಗ ನವೋದ್ಯಮಗಳ ರಾಜಧಾನಿಯಾಗುವತ್ತ ದಾಪುಗಾಲು ಇಡುತ್ತಿದೆ.
ಸೃಜನಶೀಲತೆ, ಶ್ರಮ, ಅದ್ಭುತ ಐಡಿಯಾಗಳಿಂದ ರೂಪಗೊಳ್ಳುವ ನವೋದ್ಯಮಗಳಲ್ಲಿ ಪುರುಷರಷ್ಟೇ ಮಹಿಳೆಯರು ಪ್ರಧಾನ ಪಾತ್ರ ವಹಿಸಿದ್ದಾರೆ/ವಹಿಸುತ್ತಿದ್ದಾರೆ. ಅರ್ಹತೆ, ಇಚ್ಛಾಶಕ್ತಿ ಎರಡನ್ನು ಪ್ರಬಲವಾಗಿ ಹೊಂದಿರುವ ಮಹಿಳೆಯರಿಗೆ ಉದ್ಯಮ ಕ್ಷೇತ್ರದಲ್ಲಿ ಹೇರಳ ಅವಕಾಶಗಳಿವೆಯಾದರೂ ಸೂಕ್ತ ಮಾರ್ಗದರ್ಶನ ಮತ್ತು ಪ್ರೇರಣೆಯ ಕೊರತೆಯಿಂದಾಗಿ ಅದೆಷ್ಟೋ ಜನರ ಚಿಂತನೆಗಳು ಅನುಷ್ಠಾನ ರೂಪಕ್ಕೆ ಬರುತ್ತಿಲ್ಲ.

ಅದರಲ್ಲೂ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ನವೋದ್ಯಮಕ್ಕೆ ಅವಕಾಶಗಳು ಹೆಚ್ಚಿವೆ. ಹಪ್ಪಳ, ಶ್ಯಾವಿಗೆ, ರೊಟ್ಟಿ ತಯಾರಿಕೆಯಿಂದ ಹಿಡಿದು ಕರ-ಕುಶಲ ಗೃಹ ಉತ್ಪನ್ನಗಳ ಸಿದ್ಧಪಡಿಸುವಿಕೆವರೆಗಿನ ಸಣ್ಣ-ಸಣ್ಣ ಉದ್ಯಮಗಳು ಭರವಸೆಯ ಮಿಂಚುಗಳಾಗಿ, ಉದ್ಯೋಗ ಸೃಷ್ಟಿಸುವ ಕ್ಷೇತ್ರಗಳಾಗಿ ಹೊಮ್ಮಿವೆ. ಹೀಗಾಗಿ ನವೋದ್ಯಮ ಕ್ಷೇತ್ರದಲ್ಲಿ ಮಹಿಳೆಯರ ಆಸಕ್ತಿ, ಸಹಭಾಗಿತ್ವ ಹೆಚ್ಚುತ್ತಿದ್ದು, ಇವರಿಗೆ ಸರಿಯಾದ ಮಾರ್ಗದರ್ಶನ ನೀಡಲು ಸೋದರಿ ನಿವೇದಿತಾ ಪ್ರತಿಷ್ಠಾನ ವೇದಿಕೆ ಕಲ್ಪಿಸುತ್ತಿದೆ.
ಮಹಿಳೆಯರಿಗೆ ಉದ್ಯಮ ಆರಂಭಿಸುವ ಕೌಶಲವಿದ್ದರೂ ಪ್ರಾರಂಭಿಕ ಹಂತದಲ್ಲಿ ಹಲವು ಪ್ರಶ್ನೆಗಳು ಕಾಡುತ್ತವೆ. ಬಂಡವಾಳದ ಕ್ರೂಢೀಕರಣ ಹೇಗೆ? ಉತ್ಪನ್ನಗಳ ಗುಣಮಟ್ಟ ಹೆಚ್ಚಿಸುವುದು ಹೇಗೆ? ಅದನ್ನು ಗ್ರಾಹಕರಲ್ಲಿ ತಲುಪಿಸುವ ಜಾಲವನ್ನು ಸಶಕ್ತಗೊಳಿಸುವುದು ಹೇಗೆ? ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಸ್ಪರ್ಧೆ ಉಳಿಸಿಕೊಳ್ಳುವುದು ಹೇಗೆ? ಉದ್ಯಮವನ್ನು ವಿಸ್ತರಿಸುವುದು ಹೇಗೆ ಎಂಬೆಲ್ಲಾ ಪ್ರಶ್ನೆಗಳಿಗೆ ಒಂದೇ ಕಡೆ ಉತ್ತರ ಕಂಡುಕೊಳ್ಳುವುದು ಕಷ್ಟ.
ಆದ್ದರಿಂದ ನವೋದ್ಯಮ ಸಂಸ್ಕೃತಿಯ ಎಲ್ಲ ಆಯಾಮಗಳ ಬಗ್ಗೆ ಮತ್ತು ಮಹಿಳಾ ಶಕ್ತಿಯೇ ಅದನ್ನು ಸಮರ್ಥವಾಗಿ ಮುನ್ನಡೆಸುವ ಬಗೆಯನ್ನು Fifth Pillar ಕಾರ್ಯಕ್ರಮದ ಮೂಲಕ SNP (ಸೋದರಿ ನಿವೇದಿತಾ ಪ್ರತಿಷ್ಠಾನ) ತಿಳಿಸಿಕೊಡಲಿದೆ. ನವೋದ್ಯಮ ಆರಂಭಿಸ ಬೇಕೆಂಬ ಆಸಕ್ತರ ಸಂಖ್ಯೆ ಹೆಚ್ಚದ್ದರೂ ಅವರಿಗೆ ರೊಲ್ ಮಾಡೆಲ್‌ಗಳ ಕೊರತೆ ಇದೆ. ಈಗಾಗಲೇ ಉದ್ಯಮ ಸ್ಥಾಪಿಸಿ, ಸಾಧನೆಯ ಹೆಜ್ಜೆ ಗುರುತುಗಳನ್ನು ಮೂಡಿಸಿರುವ, ಆ ಮೂಲಕ ಇತರರಿಗೂ ಪ್ರೇರಣೆ ನೀಡಿರುವ ಮಹಿಳಾ ಉದ್ಯಮಿಗಳು SNP ಆಯೋಜಿಸುತ್ತಿರುವ ಫಿಪ್ತ್ ಪಿಲ್ಲರ್ ಕಾರ್ಯಕ್ರಮದಲ್ಲಿ ತಮ್ಮ ಸ್ಫೂರ್ತಿಗಾಥೆಯನ್ನು ಹಂಚಿಕೊಳ್ಳಲಿದ್ದಾರೆ.
ಕೆಲವೊಮ್ಮೆ ಸಮಸ್ಯೆಗಳೇ ನವೋದ್ಯಮದ ಹುಟ್ಟಿಗೆ ಕಾರಣವಾಗುತ್ತವೆ. ಥಟ್ಟನೆ ಹೊಳೆದ ವಿಚಾರವೊಂದು ಉದ್ಯಮಕ್ಕೆ ಬುನಾದಿಯಾಗುತ್ತದೆ. ಈ ಎಲ್ಲ ಪ್ರೇರಕ ಸಂಗತಿಗಳನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ದರೆ ಹೊಸ ಉದ್ಯಮ, ಹೊಸ ಕನಸುಗಳ ಜೊತೆ ಸ್ವಾವಲಂಬನೆ, ಆತ್ಮವಿಶ್ವಾಸ, ಆರ್ಥಿಕ ಚಟುವಟಿಕೆ ಮಹಿಳಾ ಒಳಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಈಗಾಗಲೇ ಪ್ರಸ್ತಾಪಿಸಿದಂತೆ ಎರಡನೇ ಮತ್ತು ಮೂರನೇ ಹಂತದ ನಗರಗಳು ಭವಿಷ್ಯದ ಮಧ್ಯಮ ಆರ್ಥಿಕ ಕೇಂದ್ರಗಳಾಗಿ ಹೊಮ್ಮಲಿರುವುದರಿಂದ ಮಹಿಳೆಯರಿಗೆ ಉದ್ಯಮ ರಂಗದಲ್ಲಿ ಖಂಡಿತವಾಗಿಯೂ ಅವಕಾಶಗಳು ಹೆಚ್ಚಲಿವೆ.
ಈ ಮೂಲಕ ಶ್ರಮ ಸಂಸ್ಕೃತಿ ಮುನ್ನೆಲೆಗೆ ಬರಲಿದ್ದು, ಒಗ್ಗಟ್ಟು, ಹೆಚ್ಚು ಪರಿಶ್ರಮ, ಹೆಚ್ಚು ಲಾಭದ ಮೂಲಕ ಮಹಿಳಾ ಉದ್ಯಮಿಗಳ ಪಡೆಯೇ ಸಿದ್ಧಗೊಳ್ಳಲಿದೆ. ಈ ಹಾದಿಯಲ್ಲಿನ ಆರಂಭಿಕ ತೊಡಕುಗಳನ್ನು ನಿವಾರಿಸಿಕೊಂಡರೆ ಸಾಕು. ಇದಕ್ಕಾಗಿಯೇ ನವೆಂಬರ್ 28, ಭಾನುವಾರದಂದು ಬೆಂಗಳೂರಿನ ಬನಶಂಕರಿಯ ಅವರ್ ಸ್ಕೂಲ್ ಸಭಾಗಂಣದಲ್ಲಿ ನಿವೇದಿತಾ ಪ್ರತಿಷ್ಠಾನ ಫಿಪ್ತ್ ಪಿಲ್ಲರ್ ಕಾರ್ಯಕ್ರಮ ಆಯೋಜಿಸಿದೆ. ಹೊಸ ಉದ್ಯಮ ಸ್ಥಾಪಿಸಲು ಉತ್ಸುಕರಾಗಿರುವ ಮಹಿಳೆಯರಿಗೆ ಈ ಕಾರ್ಯಕ್ರಮ ಖಂಡಿತವಾಗಿಯೂ ದಿಕ್ಸೂಚಿಯಾಗಲಿದೆ.
ಈ ಸಲದ ಫಿಪ್ತ್ ಫಿಲ್ಲರ್ ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಫೌಂಡೇಶನ್‌ನ ಮುಖ್ಯಸ್ಥರಾದ ಡಾ. ತೇಜಸ್ವಿನಿ ಅನಂತಕುಮಾರ್,
ಧರ್ಮ ಟೆಕ್ನಾಲಜಿ ಕೃಷಿ ಯಂತ್ರೋಪಕರಣಗಳ ತಯಾರಿಕಾ ಘಟಕದ ಸಂಸ್ಥಾಪಕರಾದ ಶ್ರೀಮತಿ ಶೈಲಜಾ ವಿಠ್ಠಲ್, ವಾಸವಿ ಕಾಂಡಿಮೆಂಟ್ಸ್‌ನ ಸ್ವಾತಿ ಕೆ.ಎಸ್, ಸೇಫ್ ಹ್ಯಾಂಡ್ಸ್ 24×7 ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಶ್ರಾವಣಿ ಪವಾರ್, ಮಾದರಿ ಕೃಷಿಕರಾದ ಶ್ರೀಮತಿ ಕಮಲಮ್ಮ, ICATT ಏರ್ ಆಂಬುಲೆನ್ಸ್ ಸಹ ಸಂಸ್ಥಾಪಕರು ಮತ್ತು ನಿರ್ದೇಶಕರು ಹಾಗೂ PHEM ಎಜುಕೇಶನ್ ಪ್ರೈ. ಲಿಮಿಟೆಡ್ ನಿರ್ದೇಶಕರು ಡಾ.ಶಾಲಿನಿ ನಲ್ವಾಡ್, ಸೋದರಿ ನಿವೇದಿತಾ ಪ್ರತಿಷ್ಠಾನದ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳಲಿದ್ದಾರೆ.












Click it and Unblock the Notifications