ಸುಂದರ ಬೆಂಗಳೂರನ್ನು ನಿರ್ಮಿಸುವೆ: ಸಿಎಂ ಸಿದ್ದು
ಬೆಂಗಳೂರು, ಮೇ 26: ರಾಜಧಾನಿ ದಿಲ್ಲಿಯಲ್ಲಿ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಸ್ಕಿಪ್ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಸರಣಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.
ಮುಂದಿನ ವಾರ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವೆ. ಇಂದು ಸಮಾರಂಭಕ್ಕೆ ತಾನು ಹೋಗದಿರುವ ಬಗ್ಗೆ ಅನರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಸಮಾರಂಭವೊಂದರಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸಚಿವರಾದ ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಮೇಯರ್ ಕಟ್ಟೆ ಸತ್ಯನಾರಾಯಣ, ಉಪ ಮೇಯರ್ ಇಂದಿರಾ, ಶಾಸಕ ಹ್ಯಾರಿಸ್, ಆಯುಕ್ತ ಲಕ್ಷ್ಮೀನಾರಾಯಣ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಜತೆ ಬೆಂಗಳೂರು ರೌಂಡ್ಸ್ ನಲ್ಲಿ ಉಪಸ್ಥಿತರಿದ್ದರು.
ಮೂರು ವರ್ಷದಲ್ಲಿ ಸುಂದರ ಬೆಂಗಳೂರು ನಿರ್ಮಿಸುವೆ: ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಅಭಿವೃದ್ಧಿ ಏನು ಹೇಳಿದ್ದಾರೆಂದರೆ:

ನಗರದಲ್ಲಿ ರಸ್ತೆ ಅಭಿವೃದ್ಧಿ, ಸಿಗ್ನಲ್ ಮುಕ್ತ ಕಾರಿಡಾರ್ ನಿರ್ಮಾಣ, ಟೆಂಡರ್ ಶ್ಯೂರ್ ಕಾಮಗಾರಿಗಳು ಸೇರಿದಂತೆ ವಿವಿಧ ಅಭಿವೃದ್ಧಿ ಚಟುವಟಿಕೆಗಳು ಪ್ರಗತಿಯಲ್ಲಿದ್ದು, ಮುಂದಿನ ಮೂರು ವರ್ಷಗಳಲ್ಲಿ ಬೆಂಗಳೂರು ಇನ್ನಷ್ಟು ಸುಂದರವಾಗಿ ಬದಲಾಗಲಿದೆ. ಬೆಂಗಳೂರಿನ ನಗರದಲ್ಲಿ ನಡೆದಿರುವ ಕಾಮಗಾರಿಗಳನ್ನು ಮುಖ್ಯಮಂತ್ರಿ ಆದ ನಂತರ ನಾಲ್ಕನೆ ಬಾರಿಗೆ ಖುದ್ದಾಗಿ ಪರಿಶೀಲಿಸಿದ್ದೇನೆ. ಸಿಎನ್ಆರ್ ವೃತ್ತದ ಬಳಿ ಇಂದು ಅಂಡರ್ ಪಾಸ್ ಉದ್ಘಾಟನೆಯಾಗಿದೆ. ಕನ್ನಿಂಗ್ ಹ್ಯಾಮ್ ಮತ್ತು ಮಲ್ಯ ರಸ್ತೆಯ ಟೆಂಡರ್ ಶ್ಯೂರ್ ಕಾಮಗಾರಿಗಳನ್ನು ಪರಿಶೀಲಿಸಿದ್ದೇನೆ.
ನಗರದ 12 ರಸ್ತೆಗಳನ್ನು ಟೆಂಡರ್ ಶ್ಯೂರ್ (ಸರ್ಟಿಫಿಕೇಷನ್ ಹರ್ಬಲ್ ರೋಡ್ ಎಕ್ಸಿಕ್ಯೂಷನ್) ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ರಸ್ತೆಯ ಫುಟ್ ಪಾತ್ ಕೆಳಗೆ ಕಾಲುವೆ ನಿರ್ಮಿಸಿ ಮಳೆ ನೀರು ಹರಿಯಲು ಅವಕಾಶ ಕಲ್ಪಿಸಲಾಗುವುದು. ಅದೇ ರೀತಿ ವಿದ್ಯುತ್, ದೂರವಾಣಿ ಸೇರಿದಂತೆ ಹಲವು ರೀತಿಯ ಕೇಬಲುಗಳನ್ನು ಈ ಕಾಲುವೆಯಲ್ಲಿ ಹುದುಗಿಸಿಡಲಾಗುವುದು. ರಸ್ತೆಯ ಎರಡೂ ಬದಿ ಈ ರೀತಿ ಕಾಲುವೆ ನಿರ್ಮಾಣದಿಂದಾಗಿ ಅಗತ್ಯವಾದಾಗ ಆಯಾ ಭಾಗಗಳಿಂದಲೇ ಕೇಬಲುಗಳ ಸಂಪರ್ಕ ಪಡೆಯಬಹುದು. ಯಾವುದೇ ಸಂದರ್ಭದಲ್ಲೂ ರಸ್ತೆ ಅಗೆಯುವ ಪರಿಸ್ಥಿತಿ ಇರುವುದಿಲ್ಲ. ಪ್ರತಿ ಕಿಮೀಗೆ 10 ಲಕ್ಷ ರೂ.ಗೂ ಅಧಿಕ ವೆಚ್ಚವಾಗಲಿದೆ.

ಮೊದಲ ಹಂತದಲ್ಲಿ 10.2 ಕಿಮೀ ಉದ್ದದ 12 ರಸ್ತೆಗಳಲ್ಲಿ ಈ ಕಾಮಗಾರಿ ನಿರ್ವಹಿಸಲಾಗುತ್ತದೆ. ರೆಸಿಡೆನ್ಸಿ, ರಿಚ್ಮಂಡ್, ಕನ್ನಿಂಗ್ ಹ್ಯಾಮ್, ಮಲ್ಯ ರಸ್ತೆ, ಸೆಂಟ್ ಜಾನ್ ರಸ್ತೆ, ಪೊಲೀಸ್ ಆಯುಕ್ತರ ಕಚೇರಿ, ಮ್ಯೂಸಿಯಂ ರಸ್ತೆಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಎರಡನೆ ಹಂತದಲ್ಲಿ ಮೋದಿ ಆಸ್ಪತ್ರೆ ರಸ್ತೆ, ಸಿದ್ದಯ್ಯ ಪುರಾಣಿಕ್, ಕೆಜಿ ರಸ್ತೆ, ನೃಪತುಂಗ ರಸ್ತೆ, ಜಯನಗರದ 11ನೆ ಮುಖ್ಯರಸ್ತೆ ಸೇರಿ 6.3 ಕಿಮೀ ಉದ್ದ ಟೆಂಡರ್ ಶ್ಯೂರ್ ಕಾಮಗಾರಿ ಉದ್ಘಾಟಿಸಲಾಗುವುದು.
ನಗರದ ಕಸ ಸಮಸ್ಯೆ ನಿವಾರಣೆಗೆ ಹೊರವಲಯದ ಮೂರು ಕಡೆ ಸಂಸ್ಕರಣಾ ಘಟಕಗಳಿಗೆ ಅನುಮೋದನೆ ನೀಡಿದೆ. ದೊಡ್ಡಬಳ್ಳಾಪುರ, ಮಾಗಡಿ ರಸ್ತೆ ಮತ್ತು ಮಂಡೂರು ಬಳಿ ಮೂರು ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಅನುಮೋದನೆ ದೊರಕಿದೆ. ತ್ಯಾಜ್ಯ ಸಂಸ್ಕರಣೆಯಿಂದ ಅನಿಲ ಉತ್ಪಾದನೆ ಮಾಡುತ್ತಿದ್ದು, ಅದನ್ನು ವಿದ್ಯುತ್ ಉತ್ಪಾದನೆಗೆ ಮಾರಾಟ ಮಾಡಲಾಗುವುದು.
ಸುಮಾರು 560 ಕೋಟಿ ರೂ ವೆಚ್ಚದಲ್ಲಿ ರಸ್ತೆಗಳ ಮರು ಡಾಂಬರೀಕರಣ ಹಮ್ಮಿಕೊಳ್ಳಲಾಗುತ್ತಿದೆ. ನಗರದ ಹೊರವರ್ತುಲ ರಸ್ತೆ, ಹಳೆ ಮದ್ರಾಸ್ ರಸ್ತೆಗಳನ್ನು ಸಿಗ್ನಲ್ ಫ್ರೀ ಕಾರಿಡಾರುಗಳನ್ನಾಗಿ ನಿರ್ಮಿಸಲಾಗುತ್ತಿದೆ. ಕಾಮಗಾರಿ ಅನಗತ್ಯ ವಿಳಂಬ ಮಾಡದೆ ಕಾಲಮಿತಿಯಲ್ಲಿ ಮಾಡಲು ಸೂಚನೆ ನೀಡಲಾಗಿದೆ.
ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರೋಡ್, ಬಸವೇಶ್ವರನಗರ, ಸಿದ್ದಯ್ಯ ಪುರಾಣಿಕ್ ರಸ್ತೆ, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಗಳಲ್ಲಿ ಗ್ರೇಡ್ ಸಪರೇಟರ್ ನಿರ್ಮಿಸಲಾಗುತ್ತಿದೆ.
ಫೌಂಟೇನ್ ವೃತ್ತದಿಂದ ಓಕಳೀಪುರಂವರೆಗೆ ಎಂಟು ಪಥದ ರಸ್ತೆ ನಿರ್ಮಿಸಲಾಗುವುದು. ನರ್ಮ್ ಯೋಜನೆಯಡಿ ಕೋರಮಂಗಲ, ಹಡ್ಸನ್ ವೃತ್ತದಿಂದ ಮಿನರ್ವ ವೃತ್ತದವರೆಗೂ ಸುಮಾರು 350 ಕೋಟಿ ರೂ. ವೆಚ್ಚದಲ್ಲಿ ಸ್ಟೀಲ್ ಸೇತುವೆ ನಿರ್ಮಿಸಲಾಗುತ್ತದೆ. ದೇಶದಲ್ಲೆ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನ 10 ಕಡೆ ಒಣ ತ್ಯಾಜ್ಯ ಘಟಕ ಸ್ಥಾಪಿಸಲಾಗಿದೆ. 15 ಕಡೆ ಬಯೋಗ್ಯಾಸ್ ಘಟಕ ನಿರ್ಮಿಸುತ್ತಿದ್ದು, ಆ ಘಟಕಗಳು ಇನ್ನೇನು ಸದ್ಯದಲ್ಲೇ ಉದ್ಘಾಟನೆಯಾಗಲಿವೆ.












Click it and Unblock the Notifications