ಖಾದಿ ಭಂಡಾರ್‌ನಲ್ಲಿ 30 ಪಂಚೆ ಖರೀದಿಸಿದ ಸಿದ್ದರಾಮಯ್ಯ
ಬೆಂಗಳೂರು, ಜೂ. 1: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಬಿಡುವಿಲ್ಲದ ರಾಜಕೀಯದ ಮಧ್ಯೆಯೂ ತಮ್ಮ ವೈಯಕ್ತಿಕ ಜೀವನ, ಓದು, ಕಲೆಗೆ ಒಂದಷ್ಟು ಸಮಯ ಮೀಸಲು ಇಟ್ಟಿರುತ್ತಾರೆ. ಹೀಗೆ ಬುಧವಾರ ಮಧ್ಯಾಹ್ನ ಬಿಡುವಾಗಿದ್ದ ಸಿದ್ದರಾಮಯ್ಯ ಅವೆನ್ಯೂ ರಸ್ತೆಯಲ್ಲಿ ಶಾಪಿಂಗ್‌ಗೆ ತೆರಳಿದ್ದರು.
ಸದ್ಯ ರಾಜ್ಯದಲ್ಲಿ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದೆ. ಪ್ರತಿನಿತ್ಯವೂ ರಾಜಕೀಯದ ಚಟುವಟಿಕೆಗಳು ಬಿರುಸಾಗಿಯೇ ಇವೆ. ಈ ಮಧ್ಯೆ ಪಂಚೆಪ್ರಿಯ ಸಿದ್ದರಾಮಯ್ಯ ತಮ್ಮ ಕಾರು ಹತ್ತಿ ನೇರವಾಗಿ ಅವೆನ್ಯೂ ರಸ್ತೆಯ ಖಾದಿ ಭಂಡಾರ್ ಮಳಿಗೆಗೆ ಭೇಟಿ ನೀಡಿದರು. ಸಿದ್ದರಾಮಯ್ಯ ಬಂದಿದ್ದನ್ನು ಕಂಡು ಮಳಿಗೆ ಸಿಬ್ಬಂದಿಯೂ ಒಂದು ಕ್ಷಣ ಅಚ್ಚರಿಯಾದರು. ಪಂಚೆ ತೋರಿಸಯ್ಯಾ.. ಹೊಸದು ಯಾವುದು ಯಾವುದು ಬಂದಿದೆ ತೆಗಿಯಯ್ಯಾ ನೋಡೋಣ.. ಎಂದು ಅಂಗಡಿಯೊಳಗೆ ಹೆಜ್ಜೆ ಹಾಕಿದರು.

ಸದಾ ಪಂಚೆಯಲ್ಲಿಯೆ ಮಿಂಚುವ ಸಿದ್ದರಾಮಯ್ಯ ಮಾರುಕಟ್ಟೆಗೆ ಹೊಸದಾಗಿ ಬಂದಿರುವ ತರಹೇವಾರಿ ಪಂಚೆಗಳನ್ನು ನೋಡಿದರು. ತಮಗೆ ಇಷ್ಟವಾದಂತಹ 30ಕ್ಕೂ ಹೆಚ್ಚು ಪಂಚೆಗಳನ್ನು ಖರೀದಿ ಮಾಡಿದರು. ಪ್ರತಿ ಪಂಚೆಗೂ 650 ರೂ. ಬೆಲೆ ಇತ್ತು. ಅದರಲ್ಲಿಯೂ 40 ಪರ್ಸೆಂಟ್ ಡಿಸ್ಕೌಂಟ್ ಕೇಳಿ ಪಡೆದು ಬಿಲ್ ಹಾಕಿಸಿದರು ಸಿದ್ದರಾಮಯ್ಯ.
ಇತ್ತೀಚೆಗೆ ಶೂ ಖರೀದಿಸಿದ್ದ ಸಿದ್ದರಾಮಯ್ಯ:
ಕಳೆದ ಜನವರಿಯಲ್ಲಿ ನಡೆದಿದ್ದ ಮೇಕೆದಾಟು ಪಾದಯಾತ್ರೆಯಲ್ಲಿ ಪಾಳ್ಗೊಳ್ಳಬೇಕು, ಮೇಕೆದಾಟು ಯಿಂದ ಬೆಂಗಳೂರುವರೆಗೂ ನಡೆದುಬರಬೇಕು ಎಂದು ಸಿದ್ದರಾಮಯ್ಯ ಎಂ.ಜಿ. ರಸ್ತೆಯ ಮಳಿಗೆಯೊಂದಕ್ಕೆ ಹೋಗಿ ತಾವೇ ಶೂ ಖರೀದಿಸಿದ್ದರು. 8000 ಬೆಲೆಯ ಎರಡು ಜೊತೆ ಶೂ ಖರೀದಿಸಿದ್ದರು.












Click it and Unblock the Notifications