ಶ್ರದ್ಧಾ, ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಗಳು ಒಂದು ನೋಟ

ನಮ್ಮೆಲ್ಲರೊಳಗೂ ಒಂದು ಸಂವೇದನ ಶೀಲತೆ, ಸೃಜನ ಶೀಲತೆ ಇದೆ. ಅದು ನಾವು ಕಂಡ, ಕೇಳಿದ, ತಿಳಿದ ಮತ್ತೊಬ್ಬರನ್ನ ಕುರಿತಾಗಿ ಒಂದು ವ್ಯಕ್ತಿತ್ವ ಚಿತ್ರಣವನ್ನ ಕಟ್ಟಿ ಕೊಳ್ಳುವ ಹಾಗೆ ಮಾಡುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಕುರಿತಾಗಿನ ಚಿತ್ರಣವೂ ಅವನ ಒಡನಾಟ, ಗುಣ, ನಡತೆ, ವರ್ತನೆ, ಆಚಾರ, ವಿಚಾರ, ಕಲೆ, ಕೌಶಲ್ಯ, ಬದುಕಿನ ರೀತಿ, ಅವನೆಡೆಗಿನ ಒಲವು, ಅವನ ಪ್ರೀತಿ, ಅವನೆಡೆಗಿನ ಭೀತಿಗೆ ಅನುಸಾರವಾಗಿ ಮೂಡಿಕೊಂಡಿರುವಂಥದ್ದಾಗಿರುತ್ತದೆ. ಈ ಎಲ್ಲಾ ಚಿತ್ರಣಗಳೂ ನಮ್ಮೊಳಗೇ ಅವರ ಕುರಿತಾಗಿ ಮೂಡಿಕೊಂಡ ಭಾವನೆಗಳ ಮೂರ್ತ ಸ್ವರೂಪದಿಂದ ರೂಪು ತಳೆದ ಚಿತ್ರಗಳಾಗಿರುತ್ತವೆ ನಿಜ.

ಶ್ರಾದ್ಧಾ ಮತ್ತು ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಗಳು ಕೂಡಾ ನಮ್ಮೊಳಗೇ ಹಾಗೆ ಮೂಡಿರಬಹುದಾದಂಥ ನಮ್ಮ ತಂದೆ ಮತ್ತು ತಾಯಿಯವರುಗಳ ವ್ಯಕ್ತಿತ್ವ ಚಿತ್ರಣಗಳ ಮೂರ್ತರೂಪಗಳ ಅನಾವರಣ ಅಂದುಕೊಳ್ಳಬಹುದು. ಶ್ರೀನಿವಾಸ ವೈದ್ಯ ಮತ್ತು ವಸುಧೇಂದ್ರ ರವರ ಲೇಖನ, ಕಥೆ ಅಥವಾ ಇತರೆ ಬರಹ ಪ್ರಕಾರಗಳಿಂದ ಆಯ್ದ ಪಾತ್ರಗಳನ್ನ ಬೆಸೆದು ಕಟ್ಟಿದ ಒಂದು ಸುಂದರ ರಚನೆ ಈ ಶ್ರಾದ್ಧ ಮತ್ತು ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಗಳು ನಾಟಕ. ಬಹಳವೇ ಮೆಚ್ಚಿಗೆಯಾಗುವ ಐದು ಜನರ ನಟವರ್ಗದಿಂದ, ನಾಟಕಕ್ಕೆ ಅಗತ್ಯವಿದ್ದ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಬಲವನೀಯುವ ಬೆರಳೆಣಿಕೆಯಷ್ಟು ವಸ್ತುಗಳಿಂದ.. ಆಯ್ದ ಪಾತ್ರಗಳ ಮೂಲಕವೂ ಹೀಗೊಂದು ಚಿತ್ರಕಥೆಯನ್ನೂ ಕಟ್ಟಬಹುದೆಂಬ ಕ್ರಿಯಾಶೀಲತೆಯಿಂದ ನಾಟಕ ಖಂಡಿತ ಎಲ್ಲರನ್ನ ತನ್ನತ್ತ ಸೆಳೆದುಕೊಳ್ಳುತ್ತದೆ.

ಈ ನಾಟಕದ ರಚನೆಯೂ ಒಂದು ವೈಶಿಷ್ಟ್ಯದಿಂದ ಕೂಡಿರುವಂಥದ್ದೆ.. ನಾಟಕದೊಳಗಣ ಚಿತ್ರಕಥೆಯ ಆಧಾರದ ಮೇಲೆ ನಾಟಕವನ್ನ ಎರಡು ವಿಭಾಗಗಳನ್ನಾಗಿ ವಿಂಗಡಿಸಿ ಕೊಳ್ಳಬಹುದು. ಮೊದಲಾರ್ಧವನ್ನ ನಮ್ಮೆಲ್ಲರ ಅಪ್ಪಂದಿರೊಳಗಿರ ಬಹುದಾದ ವ್ಯಕ್ತಿತ್ವ ಚಿತ್ರಣವನ್ನಾಗಿಯೂ, ಎರಡನೆಯ ಅರ್ಧವನ್ನ ನಮ್ಮೆಲ್ಲರ ಅಮ್ಮಂದಿರೊಳಗಿರ ಬಹುದಾದ ವ್ಯಕ್ತಿತ್ವ ಚಿತ್ರಣವನ್ನಾಗಿಯೂ ಕಾಣಬಹುದು. ಒಂದು ವಿಭಾಗದಲ್ಲಿ ಮಗನ ಕುರಿತಾಗಿ ಅಪ್ಪನ ವರ್ತನೆ, ಆಸೆ, ಸಿಟ್ಟು, ಸೆಡವು, ಮಮಕಾರ ಪ್ರೀತಿ ಗಳ ಭಾವನೆಗಳನ್ನ ರಂಗದ ಮೇಲೆ ಅದ್ಭುತ ಭಾವುಕತೆಯ ಮೇಲೆ ಕಂಡರೆ.. ಮತ್ತೊಂದು ವಿಭಾಗದಲ್ಲಿ ಎಲ್ಲಾ ಅಮ್ಮಂದಿರೊಳಗೂ ಇರಬಹುದಾದ ಬಯಕೆ, ಬೇಡಿಕೆ, ಹಪಾಹಪಿತತೆ, ಆಸೆ, ತುಡಿತ, ಮಿಡಿತ, ಮತ್ತವರ ಒಂದಿಷ್ಟೇ ಪರಿಧಿಯೊಳಗೆ ಕಟ್ಟಿಕೊಂಡ ಜಗತ್ತಿನ ಪರಿಚಯವನ್ನ ಕಾಣಬಹುದು.

ನಮ್ಮ ಮತ್ತು ನಮ್ಮ ತಂದೆ ತಾಯಿ ವ್ಯಕ್ತಿತ್ವ ಹೋಲಿಕೆ

ನಮ್ಮ ಮತ್ತು ನಮ್ಮ ತಂದೆ ತಾಯಿ ವ್ಯಕ್ತಿತ್ವ ಹೋಲಿಕೆ

ನಾಟಕವನ್ನ ನೋಡುವಾಗ ರಂಗದ ಮೇಲಿನ ಪಾತ್ರಧಾರಿಗಳಲ್ಲಿ ನಮ್ಮ ಮತ್ತು ನಮ್ಮ ತಂದೆ ತಾಯಿಯವರುಗಳ ವ್ಯಕ್ತಿತ್ವವೇ ಅಭಿನಯಿಸುತ್ತಿದೆಯೇನೋ ಅಂದುಕೊಳ್ಳಬೇಕು. ಒಬ್ಬ ಮಗನಾಗಿ ಅಪ್ಪನಿಂದ ಬಹುಪಾಲು ಸಿಟ್ಟು, ಸೆಡವು, ಕೋಪ, ಹಠ, ಭಯ, ನಿರ್ವಿಕಾರ ಭೀತಿ ಗಳಂಥ ಭಾವನೆಗಳನ್ನ ಕಟ್ಟಿಕೊಂಡ, ಮತ್ತು ಅಂತ ವರ್ತನೆಗಳ ಒಳಗೆಯೇ ಅಪ್ಪನೊಳಗೆ ಹುದುಗಿರಬಹುದಾದ ತನ್ನೆಡೆಗಿನ ಅಖಂಡ ಪ್ರೇಮದ ಪರಿಯನ್ನ.. ಅಮ್ಮನಿಂದ ಕೋಮಲತೆ, ಒಂದು ನಿರ್ದಿಷ್ಟ ವಸ್ತುವೆಡೆಗಿನ ಅವಳ ಆಸೆ, ಬಯಕೆ, ಕಕ್ಕುಲತೆ.. ಅವಳಿಗದು ದಕ್ಕಾಗ ಅವಳ ಸಂತೋಷದಿಂದಾದ ಸಂಭ್ರಮ, ಅವಳ ಮುಗ್ಧ ಸಡಗರ, ಮತ್ತದಷ್ಟೇ ಚಿಕ್ಕ ಚಿಕ್ಕ ವಸ್ತುಗಳಿಂದ ತನ್ನ ಸುತ್ತಲೂ ತನ್ನದೇ ಜಗತ್ತೊಂದನ್ನ ಕಟ್ಟಿಕೊಂಡು ತನಗೆ ಬೇಕಾದಂತೆ ಸಂಭ್ರಮದಿಂದ ಬದುಕುವ ಅವಳ ಕ್ರಿಯಾಶೀಲತೆ, ಆ ವಸ್ತುಗಳೊಂದಿಗೆ ಅವರು ಹೊಂದಿರಬಹುದಾದ ಭಾವನಾತ್ಮಕ ನಂಟು, ಅದರೊಂದಿಗಿನ ಅವರ ವ್ಯಕ್ತಿತ್ವದ ಅಂಟು, ಮತ್ತು ಆ ವಸ್ತುಗಳನ್ನ ಅವರಿಗೆ ತಂದು ಕೊಟ್ಟವರ ಕುರಿತಾಗಿ ಆ ವಸ್ತುಗಳೆಡೆಗಿನ ಅಪರೋಪ್ಪದ ಪ್ರೀತಿಯ ಭಾವಗಳ ಪರಿಯನ್ನ ನಾವು ಪರಿಚಯಿಸಿಕೊಳ್ಳಬಹುದು.

ಸರಳ.. ಸುಲಲಿತ.. ಸುಂದರ ಅನಿಯಮಿತ ಸಂಭಾಷಣೆ

ಸರಳ.. ಸುಲಲಿತ.. ಸುಂದರ ಅನಿಯಮಿತ ಸಂಭಾಷಣೆ

ಸರಳ.. ಸುಲಲಿತ.. ಸುಂದರ ಅನಿಯಮಿತ ಸಂಭಾಷಣೆಗಳ ಮೂಲಕವೇ ಕಳೆ ಕಟ್ಟಿಕೊಂಡು ಬೆಳೆದುಕೊಳ್ಳುವ ನಾಟಕವನ್ನ ನೋಡುವಾಗ ಎಲ್ಲೂ ಬೇಸರ ಅನಿಸುವುದಿಲ್ಲ. ನಾಟಕ ಬೋರ್ ಹೊಡೆಸುವುದಿಲ್ಲ. ಮಾತುಗಳು ಕೇಳುಗರನ್ನ ತನ್ನ ತೆಕ್ಕೆಗೆ ಎಳೆದು ಕೊಳ್ಳುತ್ತವೆ, ತನ್ಮಯರಾಗಿ ನೋಡುವಂತೆ ಸೆಳೆದುಕೊಳ್ಳುತ್ತವೆ. ನಿರೂಪಕರಂತೆ ಮಾತನಾಡುತ್ತ ನಾಟಕವನ್ನ ಶುರು ಮಾಡಿ ಕೊನೆಗೆ ಪಾತ್ರಗಳೇ ನಿರೂಪಕರಾದಂತೆ ತೋರುತ್ತದೆ. ಕಚಗುಳಿ ಇಟ್ಟು ನಗಿಸುವ ಮಾತುಗಳ ಬೆನ್ನಲ್ಲೇ ಹುಟ್ಟಿ ಬರುವ ಬಹು ಗಾಂಭೀರ್ಯದ ಜೀವನದ, ಪರಮಾರ್ಥಗಳನ್ನ ತಿಳಿಸಿ ಕೊಡುವ ತತ್ವಗಳನ್ನು ಹೊಂದಿರುವಂತ ಸಂಭಾಷಣೆಗಳನ್ನು ಕೇಳುವಾಗ ಪ್ರತಿಯೊಬ್ಬನೂ ಶರಣಾಗಿರುತ್ತಾನೆ.

ನಾಟಕದ ಸನ್ನಿವೇಶಗಳು ಬಹಳ ಚೆತೋಹಾರಿಯಾಗಿದ್ದು, ಎಲ್ಲರ ಬದುಕಿನೋಳಗೂ ನಡೆದಿರಬಹುದಾದಂಥ ಸನ್ನಿವೇಶಗಳೇ ಅನ್ನಿಸುತ್ತವೆ. ನಾಟಕದೊಳಗೆ ಕಂಡು ಬರುವ ಅಪ್ಪನ ವ್ಯಕ್ತಿತ್ವ ಶಿಸ್ತನ್ನ ಆತ್ಮವನ್ನಾಗಿಸಿಕೊಂಡ, ಮರ್ಯಾದೆಯನ್ನ ಬಟ್ಟೆಯಾಗಿಸಿಕೊಂಡ.. ನಿಷ್ಠೆಯನ್ನು ಉಸಿರಾಗಿಸಿಕೊಂಡ ಒಬ್ಬ ವ್ಯಕ್ತಿಯ ಬದುಕಿನದ್ದು. ಅವರ ದೈಹಿಕ ನಿಲುವೇ ಅವರ ವ್ಯಕ್ತಿತ್ವದ ಕನ್ನಡಿ. ಮಕ್ಕಳಾದವರಿಗೆ ಅದೊಂದು ನಿಲುವಿನೆಡೆಗೆ ಅಂಥದ್ದೊಂದು ಭಯ ಯಾವತ್ತಿಗೂ ಸಹಜ. ಅದು ಅಪ್ಪಂದಿರೆಡೆಗಿನ ಮಾಮೂಲಿ ಭಯ. ಅಪ್ಪ ಮಗನ ವರ್ತನೆ ಬಾಂಧವ್ಯಗಳು ಕಣ್ಣಿಗೆ ಕಟ್ಟಿಕೊಳ್ಳುತ್ತಲೇ ಮನಸೊಳಗೆ ಸ್ಥಾಯಿಯಾಗುತ್ತವೆ.
ಬೆಳೆದು ನಿಂತ ಮಗ ತನ್ನ ದಾರಿ ಅರಸಿ

ಬೆಳೆದು ನಿಂತ ಮಗ ತನ್ನ ದಾರಿ ಅರಸಿ

ಗಣಿತದಲಿ ಸೊನ್ನೆ ಸುತ್ತುವ ಮಗನನ್ನು ಕಂಡು ಕಿಡಿ ಕಾರುವ, ಆಚಾರ ತಪ್ಪದಂತೆ, ಶಿಸ್ತು ತಪ್ಪದಂತೆ, ಶಿಷ್ಟಾಚಾರಗಳನ್ನು, ಸಂಪ್ರಾದಯಗಳನ್ನು ಮೀರದಂತೆ ಮಕ್ಕಳನ್ನು ಹದ್ದು ಬಸ್ತಿನಲ್ಲಿ ಬೆಳೆಸುವ.. ಮಕ್ಕಳಲಿ ಹುಟ್ಟಿನೊಂದಿಗೆ ಬೆರೆಸಿ ಬಿಟ್ಟ ಯಾವತ್ತಿನ ಭಯವನ್ನೇ ಬಂಡವಾಳವನ್ನಾಗಿಸಿಕೊಂಡು ಅವರನ್ನು ಸರಿ ದಾರಿಗೆ ತರಲು ಪ್ರಯತ್ನಿಸುವ.. ಮೇಷ್ಟರನ್ನ ಕಂಡು ತನ್ನ ಮಗ ಕಲಿಯಲಿ ಎನ್ನುವ ಉದ್ದೇಶದಿಂದ ಇಕ್ಕರಿಸಲು ತಾಕೀತು ಮಾಡುವ ಅಪ್ಪನ ಕಡು ಕೋಪದ ವ್ಯಕ್ತಿತ್ವ, ಅದೇ ಬದಿಯ ಕೈಗಳಿಂದ ಅದೇ ಬದಿಯ ಮೀಸೆಯನ್ನ ತೀಡಿಕೊಳ್ಳದ ಗಂಭೀರತೆ ಮರೆವ ವ್ಯಕ್ತಿತ್ವ ಒಂದು ಕಡೆ ಸ್ಥಾಯಿಯಾದರೆ.. ಬೆಳೆದು ನಿಂತ ಮಗ ತನ್ನ ದಾರಿ ಅರಸಿ ಹೊರಟಾಗ..

ಅಪ್ಪನೆಡೆಗೆ ಒಂದು ಒಂದು ಅಭಿಮಾನ

ಅಪ್ಪನೆಡೆಗೆ ಒಂದು ಒಂದು ಅಭಿಮಾನ

ಈ ಊರಿನಲ್ಲಿ ಕಂಡುಕೊಳ್ಳಲಾಗದ ಅವನ ಕನಸಿನ ಬದುಕನ್ನ, ದೂರದ ಬಾಂಬೆ ನಗರದಲ್ಲಿ ನನಸಾಗಿಸಿಕೊಳ್ಳುವುದಕ್ಕೆ ಹೊರಟಾಗ ಗದರಿಸುತ್ತಲೇ ಪ್ರೀತಿಯ ಮಾತುಗಳಾಡುವ, ಕಡೆಗೆ ರೈಲ್ವೆ ಸ್ಟೇಶನ್ ನಲ್ಲಿ ಮೈ ಮರೆತವನಂತೆ ಮಗನನ್ನು ಕ್ಷಣಕಾಲ ಬಿಗಿ ಹಿಡಿದು ತಬ್ಬಿ.. ಕಿಸೆಯೊಳಗೆ ಖರ್ಚಿಗೊಂದಿಷ್ಟು ಹಣವಿಟ್ಟು.. ಜೋಪಾನವಾಗಿ ಬದುಕುವಂತೆ ಹರಸಿ ಬೀಳ್ಕೊಡುವಾಗ, ಹಿಂತಿರುಗಿ ಧೋತ್ರದ ತುಂದಿಯಿಂದ ಕಣ್ ಒರೆಸಿಕೊಳ್ಳುವುದನ್ನ ಕಂಡಾಗ ಅಪ್ಪನಂಥ ಬಂಡೆಯ ವ್ಯಕ್ತಿತ್ವದ ಒಳಗಣ ಸಿಹಿ ನೀರಿನಂಥ ಪ್ರೇಮ ಜಲದ ರುಚಿಯ ಅನುಭವದ ಸ್ಥಾಯಿ ಮತ್ತೊಂದು ಕಡೆ ಪರಿಚಯವಾಗುತ್ತದೆ. ನಾಟಕ ನೋಡುತ್ತಿದ್ದವರಲ್ಲಿ ಪ್ರತೀ ಮಗನಾದವನಿಗೂ ಅಪ್ಪನೆಡೆಗೆ ಒಂದು ಒಂದು ಅಭಿಮಾನ.. ಪ್ರತೀ ಅಪ್ಪನಾದವನಿಗೂ ಮಗನೆಡೆಗೆ ಒಂದು ಪ್ರೀತಿ ಮೂಡಿಸುವಷ್ಟು ಮೋಡಿ ಮಾಡುತ್ತದೆ ಆ ಕ್ಷಣಕ್ಕೆ ಆ ಸನ್ನಿವೇಶ. ಮೊದಲ ಭಾಗದ ಅಂತ್ಯಕ್ಕೆ ಸತ್ತ ತನ್ನಪ್ಪನ ಕುರಿತಾಗಿ ಮಗನ ಪಾತ್ರ ಹೇಳುತ್ತದೆ.. "ನನ್ನಪ್ಪನನ್ನ ಶ್ರದ್ಧೆಯಿಂದ ನೆನಪು ಮಾಡಿಕೊಳ್ಳೋದೆ ನಾನು ಮಾಡುವ ಶ್ರದ್ಧ.. ಅವರ ಪ್ರೀತಿಯ ನೆನಪಿನಲ್ಲಿ ನಾ ಹಾಕುವ ಕಣ್ಣೀರ ಹನಿ.. ಅದೇ ಅವರಿಗೆ ನಾ ನೀಡುವ ತರ್ಪಣ".. ಬಹುಶಃ ಅಲ್ಲಿದ್ದವರೆಲ್ಲರಿಗೂ ಈ ಮಾತು ಎದೆ ಬಾಗಿಲ ತಟ್ಟಿರಬಹುದು.

ವಸುಧೇಂದ್ರ ಅವರ ತಾಯಿಯ ವ್ಯಕ್ತಿತ್ವ.

ವಸುಧೇಂದ್ರ ಅವರ ತಾಯಿಯ ವ್ಯಕ್ತಿತ್ವ.

ನಾಟಕದೊಳಗಣ ಅಮ್ಮನ ಪಾತ್ರ. ಅದು ನೆಚ್ಚಿನ ಲೇಖಕ ವಸುಧೇಂದ್ರ ಅವರ ತಾಯಿಯ ವ್ಯಕ್ತಿತ್ವ. ಕಂಚು ಹಿತ್ತಾಳೆ ತಾಮ್ರದ ಪಾತ್ರೆಗಳ ಒಡನಾಟದಿಂದ ಬೇಸರಿಸಿ ಸ್ಟೀಲ್ ಪಾತ್ರೆಗಳಿಗೆ ಕಾತರಿಸುವ ವಿಶಿಷ್ಟ ಮನೋವಾಂಛೆಯುಳ್ಳ ಪಾತ್ರ. ನಮ್ಮ ಸುತ್ತಲಿನ ಬಹಳಷ್ಟು ಹೆಣ್ಣು ಜೀವಗಳ ಪ್ರತಿ ನಿಧಿಯಂತೆ ಕಾಣುತಿತ್ತು ಆ ಪಾತ್ರ. ಅದೊಂದು ದಿನ ಅಜ್ಜಿ.. ಅಮ್ಮನ ತಾಯಿ ಒಂದು ಮಾತು ಹೇಳಿತ್ತು.. " ಸಾಯೋ ಮೊದಲು ನನಗೊಂದು ರೇಷ್ಮೆ ಸೀರೆ ಉಡಿಸೋ ಮಗ". ರೇಷ್ಮೆ ಸೀರೆಯ ಮೇಲೆ ಅಜ್ಜಿಗೆ ಅಂಥದ್ದೊಂದು ಮೋಹ. ಊರಿಗೆ ಹೋದಾಗಲೆಲ್ಲ ಎಲೆ ಅಡಿಕೆಗಷ್ಟೇ ಒಂದೆರಡು ರುಪಾಯಿ ಹಣ ಕೇಳುವ.. ಅದರ ಮೇಲೆ ಒಂದಾಣೆ ಮುಟ್ಟದ ಲಕ್ಷ್ಮಜ್ಜಿ ಯದು ಅಂತ ಒಂದು ಆಸೆ.

ಯಾವೂರಿಗೆ ಹೋದರು ಆ ಊರಿಂದ ನೆನಪಿಗೆ ಅಂತ ಒಂದೊಂದು ವಸ್ತುಗಳನ್ನು ತಂದಿಟ್ಟು ಕೊಳ್ಳುವ ವೀಣಕ್ಕ.. ಬಂಗಾರದ ಒಡವೆಯಾಸೆಯ ಅಮ್ಮ.. ವ್ಯಾನಿಟಿ ಬ್ಯಾಗಿನ ಹುಚ್ಚಿನ ಅಕ್ಕ.. ಚಾಕಲೇಟ್ ಕೊಡಿಸಿದರೆ ಪ್ರಪಂಚವನ್ನೇ ಮರೆವ ಕಲಾ.. ಧಾರಾವಾಹಿಗಳಿಗಾಗಿ ಜಗಳ ಮಾಡಿ ಕೊಳ್ಳುವ ಗೌರಕ್ಕ.. ಈ ಎಲ್ಲರಿಗೂ ಒಂದೊಂದು ನಿರ್ದಿಷ್ಟ ವಸ್ತುವಿನೊಳಗೆ ತಮಗೊಂದು ಜಗತ್ತು ಕಟ್ಟಿಕೊಳ್ಳುವ ಕಲೆ ಗೊತ್ತು. ಆ ಜಗತ್ತಿನೊಳಗೆ ಸಂತಸದಿಂದ ಬದುಕಿ ಬಿಡುವ ವಿದ್ಯೆ ಗೊತ್ತು. ಅಂತ ಎಲ್ಲರ ಪ್ರತಿನಿಧಿಯಂತೆ ಆ ಪಾತ್ರವಿತ್ತು. ಸಾಲ ಹೇಳಿ ಸ್ಟೀಲ್ ಪಾತ್ರೆಗಳನು ಕೊಳ್ಳುವ, ತಂದ ಸ್ಟೀಲ್ ಪಾತ್ರೆಗಳನ್ನೆಲ್ಲ ಊರವರಿಗೆಲ್ಲ ಪ್ರದರ್ಶಿಸಿ ಬೀಗುವ.. ಸ್ಟೀಲ್ ಪಾತ್ರೆಗಳ ಒಳಗೆ ತಮ್ಮ ಉಸಿರೇ ಇಟ್ಟು ಬದುಕುವ ಕಡೆಗೆ ಸಾಯುವ ಮೊದಲು ತಮ್ಮೆಲ್ಲಾ ಸ್ಟೀಲ್ ಪಾತ್ರೆಗಳನ್ನು ಜತನವಾಗಿರಿಸಿ ಕೊಳ್ಳುವಂತೆ ಭಾಷೆ ಇರಿಸಿಕೊಳ್ಳುವ ಹೆಣ್ಮನದ ಮುಗ್ಧ ಭಾವುಕತೆ ಅಲ್ಲಿ ಯಾರಿಗೂ ಮೆಚ್ಚುಗೆಯಾಗದೆ ಇರುವುದಿಲ್ಲ.

ನಾಟಕದೊಳಗೆ ಸಹಜವಾಗಿ ಬದುಕಿದ್ದಾರೆ

ನಾಟಕದೊಳಗೆ ಸಹಜವಾಗಿ ಬದುಕಿದ್ದಾರೆ

ನಟನೆಯ ವಿಚಾರಕ್ಕೆ ಬಂದರೆ ಐದೂ ಜನರೂ ನಟಿಸಿದ್ದಾರೆ ಅನ್ನುವುದಕ್ಕಿಂತ ನಾಟಕದೊಳಗೆ ಸಹಜವಾಗಿ ಬದುಕಿದ್ದಾರೆ ಅನ್ನಬಹುದು. ಒಬ್ಬೊಬ್ಬರೂ ಆ ಪಾತ್ರಗಳಾಗಿ ಬದಲಾಗಿದ್ದಾರೆ. ಎಲ್ಲರ ಅಭಿನಯವೂ ಬಹಳವೇ ಇಷ್ಟವಾಗುತ್ತದೆ. ಪ್ರತಿಯೊಬ್ಬರ ಪಾತ್ರ ಪೋಷಣೆಯೂ ನಿಜವಾಗಿಯೂ ಅದ್ಭುತ. ಹಲವಾರು ಸನ್ನಿವೇಶಗಳು ನಗೆಯುಕ್ಕಿಸುತ್ತವೆ. ಕೆಲವೊಂದು ಸನ್ನಿವೇಶಗಳು ನಮ್ಮನ್ನ ಮತ್ತಷ್ಟು ಭಾವುಕರನ್ನಾಗಿಸುತ್ತವೆ. ಈ ನಾಟಕ ಮತ್ತೂ ಇಷ್ಟವಾಗುವಂತೆ ಮಾಡೋದು ಬೆಳಕಿನ ಸಂಯೋಜನೆ ಮತ್ತು ಹಿನ್ನಲೆ ಸಂಗೀತ. ಸನ್ನಿವೇಶಗಳಿಗೆ ತಕ್ಕಂತೆ ಬೆಳಕು ಕಟ್ಟಿ ಕೊಡುವ ಭಾವುಕತೆ ಪರಿಪೂರ್ಣ.. ಸಂಗೀತ ಅರ್ಥಪೂರ್ಣ. ನಾಟಕದೊಳಗೆ ಅಗತ್ಯವಿರುವ ವಸ್ತುಗಳ ಆಯ್ಕೆಯಲ್ಲಿ ಮತ್ತು ಅವುಗಳ ಸಮರ್ಪಕ ಬಳಕೆಯಲ್ಲಿ ಕ್ರಿಯಾಶೀಲತೆ ಕಾಣುತ್ತದೆ.

ಒಂದು ಸುಂದರ ನಾಟಕ ಕಟ್ಟಿ ಕೊಡುವಲ್ಲಿ ಯಶಸ್ವಿ ನಿರ್ದೇಶಕನಾಗಿ ವಟಿ ಅಣ್ಣ ಮತ್ತೂ ಇಷ್ಟವಾಗುತ್ತಾರೆ.

ನಾಟಕ ಅಲ್ಲಿಗೆ ಬಂದವರ ಪಾಲಿಗೆ ನಿಜಕ್ಕೂ ಒಂದು ಮರೆಯಲಾಗದ, ಸಿಹಿ ನೆನಪಿನ ದಿನವನ್ನಾಗಿ ಮಾರ್ಪಡಿಸಿದೆ ಅಂದರೆ ತಪ್ಪಾಗಲಾರದು. ನಾಟಕ ಕಂಡ ಎಲ್ಲರ ಮುಖದಲ್ಲೂ ಒಂದು ಸಾರ್ಥಕ ಸಂತೋಷದ ಲಕ್ಷಣ ಗೋಚರಿಸುತ್ತಿತ್ತು. ನನ್ನಂಥ ಯುವ ಮನಸ್ಸಿನವರೇ ನಾಟಕಕ್ಕೆ ಹೆಚ್ಚಿನವರಾಗಿ ಬಂದಿದ್ದು.. ನಮ್ಮೊಳಗೆ ಬದಲಾಗ್ತಿರೋ ನಮ್ಮ ಅಭಿರುಚಿಯ ಮತ್ತು ಮನಸ್ತಿತಿಯ ಸಣ್ಣ ಉದಾಹರಣೆಯಂತೆ ತೋರುತ್ತಿತ್ತು.

ನಾಟಕ ಪ್ರದರ್ಶನ ಯಾವಾಗ ಇದೆ ಮತ್ತೆ?

ನಾಟಕ ಪ್ರದರ್ಶನ ಯಾವಾಗ ಇದೆ ಮತ್ತೆ?

ಶ್ರೀನಿವಾಸ ವೈದ್ಯ ಹಾಗೂ ವಸುಧೇಂದ್ರ ರಚಿಸಿರುವ ಶ್ರಾದ್ಧ ಮತ್ತು ಸ್ಟೈನ್ಲೆಸ್ಸ್ ಸ್ಟೀಲ್ ಪಾತ್ರೆಗಳು ನಾಟಕವನ್ನು ನಿರ್ದೇಶಿಸಿರುವುದು ಕಿರಣ್ ವಟಿ. ಬೆಂಗಳೂರಿನ ರಂಗಶಂಕರದಲ್ಲಿ ನಾಟಕ ಪ್ರದರ್ಶನ ಏ.25ರಂದು ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಕಿರಣ್ ವಟಿ : 9880695659

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+