ಎಡಬಿಡಂಗಿ ರಾಜ್ಯ ಸರ್ಕಾರ, ಅಧಿಕಾರಿಗಳ ಕೈಯಲ್ಲೇ ಎಲ್ಲ ಅಧಿಕಾರ: ಬಿಜೆಪಿ
ಬೆಂಗಳೂರು, ಫೆಬ್ರವರಿ 19: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ದಿಕ್ಕು ದೆಸೆ ಇಲ್ಲದೆ ಎಡಬಿಡಂಗಿಯಾಗಿದೆ. ಇಂತಹ ಸರ್ಕಾರ ಮತ್ತು ಅಧಿಕಾರಿಗಳ ಕೈಗೆ ಅಧಿಕಾರ ಸಿಕ್ಕಿದ್ದು, ಎಲ್ಲರೂ ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂದು ಸರ್ಕಾರಿ ಇಲಾಖೆಗಳು ಮಾಡುತ್ತಿರುವ ಕೆಲಸಗಳೆ ಇದಕ್ಕೆ ಉದಾಹರಣೆ ಎಂದು ಬಿಜೆಪಿ ಆರೋಪಿಸಿದೆ.
ವಸತಿ ಶಾಲೆಯಲ್ಲಿ ಘೋಷವಾಕ್ಯ ಬದಲಿಸಿ ಘಟನೆ ಕುರಿತು ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ಆರ್ ಅಶೋಕ್ ಅವರು, ಘೋಷವಾಕ್ಯ ಬದಲಿಸಿ ಅಧಿಕಾರಿ ವಿರುದ್ಧ ಕ್ರಮ ವಹಿಸುವಂತೆ ಒತ್ತಾಯಿಸಿದರು. ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲ ಅಧಿಕಾರ ಅಧಿಕಾರಿಗಳ ಕೈಯಲ್ಲೇ ಇದೆ. ಸಚಿವರು ಮನೆಯಲ್ಲಿ ಮಜಾ ಮಾಡುತ್ತಿದ್ದಾರೆ.

ವಸತಿ ಶಾಲೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ವಾಣಿಯನ್ನು ಬದಲಿಸಿದ ಅಧಿಕಾರಿಯ ವಿರುದ್ಧ ಕೂಡಲೇ ಕ್ರಮ ವಹಿಸಬೇಕು ಎಂದು ಆರ್.ಅಶೋಕ್ ಅವರು ಒತ್ತಾಯಿಸಿದರು.
ಮನಸ್ಸಿಗೆ ಬಂದಂತೆ ಅಧಿಕಾರಿಗಳ ಕೆಲಸ
ಸರ್ಕಾರಿ ಅಧಿಕಾರಿಗಳು ಹುಚ್ಚುಚ್ಚಾಗಿ ಮನಸ್ಸಿಗೆ ಬಂದಂತೆ ಕೆಲಸ ಮಾಡುತ್ತಿದ್ದಾರೆ. ವಿಧಾನಸೌಧದ ಮುಂಭಾಗ 'ಸರ್ಕಾರದ ಕೆಲಸ ದೇವರ ಕೆಲಸ' ಎಂಬ ಘೋಷವಾಕ್ಯವಿದೆ. ಯಾರೋ ಕಾರ್ಯದರ್ಶಿಗಳು ಬಂದು ಅದನ್ನು ತೆಗೆದುಹಾಕಿ ಎಂದರೆ ಹೇಗಿರುತ್ತದೆ? ಶಾಲೆಯಲ್ಲಿ ಕೈ ಮುಗಿದು ಒಳಗೆ ಬನ್ನಿ ಎಂದರೆ ತಪ್ಪೇನು? ಬೇರೆ ದೇಶದ ಅಧ್ಯಕ್ಷರು ನಮ್ಮ ದೇಶಕ್ಕೆ ಬಂದರೆ ಕೈ ಮುಗಿಯುತ್ತಾರೆ. ಇದೇ ನಮ್ಮ ಸಂಸ್ಕೃತಿ ಎಂದು ತಿಳಿಸಿದರು.

ಸರ್ಕಾರಕ್ಕೆ ಕೇಡುಗಾಲ ಬಂದಿದೆ?
ಈ ಕಾಂಗ್ರೆಸ್ ಸರ್ಕಾರಕ್ಕೆ ಕೇಡುಗಾಲ ಬಂದಿದೆ. ಯಾವುದೇ ಆದೇಶವೇ ಇಲ್ಲದೆ ಈ ಘೋಷವಾಕ್ಯವನ್ನು ಬದಲಿಸಿದ್ದಾರೆ. ಇಲ್ಲಿ ಸರ್ಕಾರ ಸತ್ತಿದೆಯೇ ಬದುಕಿದೆಯೇ ಎಂದು ಗೊತ್ತಿಲ್ಲ. ಕಳೆದ ಬಾರಿ ಇದ್ದ ಸಿದ್ದರಾಮಯ್ಯ ಈಗ ಇಲ್ಲ. ಅವರಿಗೆ ಸರ್ಕಾರದ ಮೇಲೆ ಯಾವುದೇ ಹಿಡಿತವೂ ಇಲ್ಲ. ಅವರು ಆಯವ್ಯಯವನ್ನು ಮಂಡಿಸಿದಾಗಲೇ ಅವರು ಮಂಡಿಸಿದ್ದಲ್ಲ ಎಂದು ಗೊತ್ತಾಯಿತು ಎಂದು ಅವರು ದೂರಿದರು.
ಬೇಕಾಬಿಟ್ಟಿ ಆದೇಶ: ಯಾರಿಗೂ ಕಿಮ್ಮತ್ತಿಲ್ಲ
ಅಧಿಕಾರಿಗಳು ಸಚಿವರು, ಮುಖ್ಯಮಂತ್ರಿಗಳನ್ನು ಕೇಳದೆ ಬೇಕಾಬಿಟ್ಟಿಯಾಗಿ ಆದೇಶ ಮಾಡುತ್ತಿದ್ದಾರೆ ಎಂದರೆ, ಇಲ್ಲಿ ಯಾರಿಗೂ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮಕ್ಕಳಿಗೆ ಪಾಠ ಅರ್ಥವಾಗಿಲ್ಲ ಎಂದರೆ ಶಿಕ್ಷಕರ ಬಳಿ ಪ್ರಶ್ನೆ ಮಾಡಬೇಕು. ಆದರೆ ಮಕ್ಕಳು ಧೈರ್ಯದಿಂದ ಯಾರಿಗೆ ಪ್ರಶ್ನೆ ಮಾಡಬೇಕು? ಎಂದು ವಿಪಕ್ಷ ನಾಯಕರು ಪ್ರಶ್ನಿಸಿದರು.
ಇಲ್ಲಿ ಹಿಂದೂ, ಕ್ರೈಸ್ತ, ಮುಸಲ್ಮಾನ ಎಂದು ಎಲ್ಲೂ ಬಳಸಿಲ್ಲ. ಈ ಸರ್ಕಾರ ದಿಕ್ಕು ದೆಸೆ ಇಲ್ಲದೆ ಎಡಬಿಡಂಗಿಯಾಗಿದೆ. ಅಧಿಕಾರಿಗಳು ಹಾಗೇಯೆ ಇದ್ದಾರೆ ಎಂದು ಆರೋಪಿಸಿದರು.












Click it and Unblock the Notifications