ಕುಖ್ಯಾತ ಕ್ರಿಮಿನಲ್ ಮುರಳೀಧರನ್ ಮೇಲೆ ಪೊಲೀಸರಿಂದ ಗುಂಡಿನ ದಾಳಿ
ಬೆಂಗಳೂರು, ಡಿಸೆಂಬರ್ 13: ಪೊಲೀಸರಿಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿ ಮುರಳೀಧರನ್ ಮೇಲೆ ಬೈಯಪ್ಪನಹಳ್ಳಿ ಪೊಲೀಸರು ಗುಂಡು ಹಾರಿಸಿದ್ದಾರೆ.
34 ಕೇಸುಗಳಲ್ಲಿ ಭಾಗಿಯಾಗಿದ್ದ ಮುರಳೀಧರನ್ ಹಲವಾರು ದಿನಗಳಿಂದ ತಲೆಮರೆಸಿಕೊಂಡಿದ್ದ, ಆತನಿದ್ದ ಖಚಿತ ಮಾಹಿತಿಯೊಂದಿಗೆ ಪೊಲೀಸರು ಆ ಜಾಗಕ್ಕೆ ಧಾವಿಸಿದ್ದರು. ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಮೇಶ್ ಹಾಗೂ ಸಿಬ್ಬಂದಿಗಳು ಬುಧವಾರ ರಾತ್ರಿ ಕತ್ತಳಿಪಾಳ್ಯ ಮುಖ್ಯರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರು.
ಬೆಳಗಿ ಜಾವ ಸುಮಾರು 3.30ರ ವೇಳೆ ಮೋಹನ್ ಹೋಂಡಾ ಆಕ್ಟೀವಾದಲ್ಲಿ ವೇಗವಾಗಿ ಹೋಗುತ್ತಿದ್ದಾಗ ಆರೋಪಿಯನ್ನು ತಡೆದು ನಿಲ್ಲಿಸಿ ಶರಣಾಗುವಂತೆ ಸೂಚಿಸಿದಾಗ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.

ಆರೋಪಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಪೇದೆ ವಿಜಯ್‌ಕುಮಾರ್ ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ಮುರಳಿ ಆತನ ಸಹಚರರಾದ ಪೀಟರ್, ವಿಷ್ಣು, ವಜ್ರೇಶ್ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಸುಲಿಗೆ ಪ್ರಕರಣಗಳು ದಾಖಲಾಗಿವೆ.












Click it and Unblock the Notifications