ಟೌನ್ ಹಾಲ್ ಬಳಿ ನೆರೆ ಪರಿಹಾರಕ್ಕಾಗಿ ನಡೆದ ಶಾಂತಿಯುತ ಪ್ರತಿಭಟನೆ
Recommended Video
ಬೆಂಗಳೂರು, ಸೆಪ್ಟೆಂಬರ್ 30: ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿಗೆ ಪರಿಹಾರ ಧನ ಒದಗಿಸಲು ಕರ್ನಾಟಕ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರುವಂತೆ ಮಾಡಲು ಕನ್ನಡ ಪರ ಮನಸ್ಸುಗಳು ಶಾಂತಿಯುತ ಪ್ರತಿಭಟನೆಯನ್ನು ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಭಾನುವಾರ (ಸೆ.29) ಹಮ್ಮಿಕೊಂಡಿದ್ದು, ಪ್ರತಿಭಟನೆಯು ಯಶಸ್ವಿಯಾಗಿ ನೆರವೇರಿದೆ.
ಉತ್ತರ ಕರ್ನಾಟಕ ನೆರೆ ಪರಿಹಾರ ಶಾಂತಿಯುತ ಧರಣಿಗೆ ಸಾಮಾಜಿಕ ಜಾಲತಾಣದಲ್ಲಿ ಕರೆ ನೀಡಲಾಗಿದ್ದು, ಜಾತಿ, ಪಕ್ಷ, ಸಂಘಟನೆ ಎನ್ನದೇ ಎಲ್ಲರೂ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದ್ದಾರೆ.
"ಪ್ರತಿ ವರ್ಷ ಕರ್ನಾಟಕದಿಂದ 4 ಲಕ್ಷದಷ್ಟು ಹಣ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹೋಗುತ್ತದೆ. ಆದರೆ ನಮಗೆ ಕಷ್ಟಕಾಲದಲ್ಲಿ ಸ್ವಲ್ಪ ಮಟ್ಟದಲ್ಲಿ ಸಹಾಯ ಮಾಡಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ" ಎಂದು ಪ್ರತಿಭಟನಾಕಾರರು ಖಂಡಿಸಿದರು. ರಾಜ್ಯದ ಸಂಸದರ ಬೇಜವಾಬ್ದಾರಿತನವನ್ನು, ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಘೋಷಣೆ ಕೂಗಿದರು.

ರಾಜ್ಯದ ಬೆಳಗಾವಿ, ಬಾಗಲಕೋಟ, ಉತ್ತರ ಕನ್ನಡ ರಾಯಚೂರ ಸೇರಿದಂತೆ 20 ಜಿಲ್ಲೆಗಳು ನೆರೆಯ ಹೊಡೆತಕ್ಕೆ ಸಿಲುಕಿದ್ದವು. ಆಯಾ ಜಿಲ್ಲೆಗಳಿಗೆ ಭೇಟಿಕೊಟ್ಟು ಬಂದಿದ್ದ ಕೆಲವರು ಪ್ರತಿಭಟನೆ ಸಂದರ್ಭ ನೆರೆ ಪ್ರದೇಶಗಳಲ್ಲಿನ ವಸ್ತು ಸ್ಥಿತಿಯನ್ನು ವಿವರಿಸಿದರು. ಪ್ರತಿಭಟನೆಯ ರೂಪವಾಗಿ #Karnatakaflood #Pariharkodi_illaokkutadindabidi ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಟ್ವೀಟ್ ಗಳನ್ನು ಮಾಡಿದರು.
ಸರ್ಕಾರವು ಶೀಘ್ರ ಪರಿಹಾರ ಕೊಡದೇ ಹೋದಲ್ಲಿ ಮುಂದಿನ ಹೋರಾಟವನ್ನು ಆಂದೋಲನದ ರೀತಿ ಕೈಗೊಳ್ಳಬೇಕೆಂದು ಪ್ರತಿಭಟನೆಯಲ್ಲಿ ತಿರ್ಮಾನ ಕೈಗೊಳ್ಳಲಾಯಿತು. ಸಾಮಾಜಿಕ ಜಾಲತಾಣದ ಕನ್ನಡಪರ ಸಂಘಟನೆಯ ಶಿವಾನಂದ ಗುಂಡಾನವರ, ಪವನ ಹೆಗ್ಡೆ, ಅಕ್ಕ ಅನು, ಮಂಜುನಾಥ, ಹನುಮಂತ ಮತ್ತು ಬನವಾಸಿ ಬಳಗದ ಆನಂದ, ಅರುಣ ಜಾವಗಲ್ ಇತರರು ಭಾಗವಹಿಸಿದ್ದರು.












Click it and Unblock the Notifications