ಕನ್ನಡ ರಾಜ್ಯೋತ್ಸವ: ಕರ್ನಾಟಕದಲ್ಲೇ ಕರಾಳ ದಿನಾಚರಣೆಗೆ ಸಿದ್ಧತೆ!
kannadigaru: ಕನ್ನಡ ರಾಜ್ಯೋತ್ಸವಕ್ಕೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲೇ ಕನ್ನಡ ರಾಜ್ಯೋತ್ಸವದಂದು ಕರಾಳ ದಿನಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಾಗೆಂದು ಇದು ಬೆಳಗಾವಿ ಗಡಿ ವಿವಾದವಲ್ಲ. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ ಪುಂಡಾಟವಲ್ಲ. ಎಂಎಎಸ್ ಈ ಬಾರಿಯೂ ಕಿರಿಕಿರಿ ಮಾಡುತ್ತಿದೆ. ಆದರೆ, ಈ ನಡುವೆ ಕನ್ನಡ ಮನೆಯಿಂದಲೇ ಕನ್ನಡ ರಾಜ್ಯೋತ್ಸವದಂದು ವಿರೋಧ ವ್ಯಕ್ತವಾಗುತ್ತಿದೆ.
ಕನ್ನಡ, ಕರ್ನಾಟಕ ರಾಜ್ಯೋತ್ಸವವನ್ನು ನವೆಂಬರ್ 1ರಂದು ಕನ್ನಡಿಗರೆಲ್ಲರೂ ಸಂಭ್ರಮದಿಂದ ಆಚರಿಸುವ ದಿನ. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು... ಎನ್ನುವ ಸಾಲುಗಳೇ ಕನ್ನಡಿಗರು ಎಲ್ಲಿದ್ದರೂ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವಂತೆ ಮಾಡುತ್ತದೆ. ಆದರೆ, ಕನ್ನಡ ರಾಜ್ಯೋತ್ಸವದ ದಿನವೇ ಕನ್ನಡದ ನೆಲದಲ್ಲೇ ಕನ್ನಡ ರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಸಲು ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ಮುಂದಾಗಿದೆ. ಇದಕ್ಕೆ ಕನ್ನಡಿಗರಿಂದ ಅಸಮಾಧಾನ ವ್ಯಕ್ತವಾಗುತ್ತಿದೆ.

ಈಗಾಗಲೇ ಕನ್ನಡ ರಾಜ್ಯೋತ್ಸವಕ್ಕೆ ಭರ್ಜರಿ ಸಿದ್ಧತೆಗಳು ನಡೆದಿವೆ. ಈ ನಡುವೆ ಕನ್ನಡಿಗರು ಸಂಭ್ರಮದಿಂದ ಇರುವ ದಿನದಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಈ ನಿರ್ಧಾರ ಸಹಜವಾಗಿಯೇ ಅಚ್ಚರಿ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟಕ್ಕೂ ಖಾಸಗಿ ಶಿಕ್ಷಣ ಸಂಸ್ಥೆಗಳು ಈ ನಿರ್ಧಾರಕ್ಕೆ ಬಂದಿರುವುದು ಏಕೆ, ಇಲ್ಲಿದೆ ಕಾರಣ.
ಕರ್ನಾಟಕದಲ್ಲಿ 1995ರ ನಂತರ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಕಡೆಗಣಿಸಿದೆ. ನಮ್ಮನ್ನು ಅನುದಾನಕ್ಕೆ ಒಳಪಡಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ಆರೋಪಿಸಿವೆ. ಅಲ್ಲದೇ ಕನ್ನಡ ರಾಜ್ಯೋತ್ಸವದಂದೇ ಕರಾಳ ದಿನವನ್ನು ಆಚರಿಸುವತಂಹ ನಿರ್ಧಾರಕ್ಕೆ ಬಂದಿವೆ.

ಕರ್ನಾಟಕದ ಸರ್ಕಾರಗಳು ನಮ್ಮ ಸಮಸ್ಯೆಗೆ ಕನಿಷ್ಠ ಕರುಣೆಯನ್ನು ಸಹ ತೋರಿಸುತ್ತಿಲ್ಲ. ಕಳೆದ 30 ವರ್ಷಗಳಿಂದಲೂ ನಾವು ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಆದರೆ ನಮ್ಮ ಮನವಿಗಳಿಗೆ ಸ್ಪಂದನೆ ಸಿಗುತ್ತಿಲ್ಲ. ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ, ಈ ನಿರ್ಧಾರಕ್ಕೆ ಬಂದಿದ್ದೇವೆ. ಕನ್ನಡ ರಾಜ್ಯೋತ್ಸವದಂದು ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ಸದಸ್ಯರೆಲ್ಲರೂ ಕಪ್ಪು ಪಟ್ಟಿಯನ್ನು ಧರಿಸಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಆಡಳಿತ ಮಂಡಳಿ ಹೇಳಿದೆ.
ಭಾಷಣ ಮಾಡಿದ್ರೆ ಸಾಕಾ ?
Kannada Rajyotsava in Karnataka: ಕನ್ನಡ ರಾಜ್ಯೋತ್ಸವದ ದಿನ ರಾಜಕಾರಣಿಗಳು, ಕನ್ನಡ ಪರ ಪ್ರಗತಿಪರರು ಹಾಗೂ ಸಾಹಿತಿಗಳು ಸೇರಿದಂತೆ ಹಲವರು ಭಾಷಗಳನ್ನು ಮಾಡುತ್ತಾರೆ. ಅವರಿಗೆ ಯಾರಿಗೂ ನಮ್ಮ ಸಮಸ್ಯೆ ಕಾಣಿಸುತ್ತಿಲ್ಲ. ನಾವು ಸತತವಾಗಿ 30 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಆದರೆ, ನಮ್ಮ ಹೋರಾಟಕ್ಕೆ ಯಾರೂ ಸಹ ಸ್ಪಂದಿಸಿಲ್ಲ. ಹೀಗಾಗಿ, ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಕನ್ನಡ ರಾಜ್ಯೋತ್ಸವದ ದಿನದಂದೇ ಪ್ರತಿಭಟನೆ ಮಾಡುವ ಹಾಗೂ ಕರಾಳ ದಿನವನ್ನಾಗಿ ಆಚರಿಸುವ ಕನ್ನಡ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ನಿರ್ಧಾರಕ್ಕೆ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆ ಮಾಡುವುದಕ್ಕೆ ಬೇರೆ ದಿನಗಳಿವೆ. ಅಲ್ಲದೇ ಕನ್ನಡ ಹಾಗೂ ಕರ್ನಾಟಕದ ಹಿರಿಮೆ ಗರಿಮೆಯ ಬಗ್ಗೆ ಸಂಭ್ರಮವಿಸುವ ದಿನ ಈ ರೀತಿ ಪ್ರತಿಭಟನೆ ನಡೆಸುವುದು ಸರಿ ಅಲ್ಲ ಎಂದು ಕನ್ನಡಿಗರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications