ದ್ವಾರಕನಾಥ್ ನೇತೃತ್ವದ ಅಲೆಮಾರಿ ಮುಖಂಡರಿಂದ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ: ಪ್ರತ್ಯೇಕ ಮಂಡಳಿ ರಚನೆಗೆ ಮನವಿ
ಬೆಂಗಳೂರು, ಜೂನ್ 12: ಅಲೆಮಾರಿ ಜನಾಂಗಕ್ಕೆ ಸೇರಿದ 93 ಸಮುದಾಯಗಳ ಜನರಿಗೆ ಸರಿಯಾಗಿ ಗುರುತು ಇಲ್ಲವಾಗಿದ್ದು, ಸರ್ಕಾರ ಇವರ ಸಮಸ್ಯೆ ಬಗೆಹರಿಸಿ ಅವರ ರಕ್ಷಣೆಗೆ ಪ್ರತ್ಯೇಕ ಮಂಡಳಿ ರಚಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಡಾ. ಸಿಎಸ್ ದ್ವಾರಕನಾಥ್ ಅವರ ನೇತೃತ್ವದ ಅಲೆಮಾರಿ ಸಮುದಾಯದ ಮುಖಂಡರ ನಿಯೋಗವು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದೆ.
ಕುಮಾರ ಕೃಪ ಅತಿಥಿ ಗೃಹದಲ್ಲಿ ಅಲೆಮಾರಿ ಸಮುದಾಯದ ಮುಖಂಡರ ಜತೆ ಡಿಸಿಎಂ ಶಿವಕುಮಾರ್ ಅವರನ್ನು ಭೇಟಿ ಮಾಡಿದ ದ್ವಾರಕನಾಥ್ ಅವರು ಈ ಸಮುದಾಯಗಳ ಸಮಸ್ಯೆ ಹಾಗೂ ಮೀಸಲಾತಿ ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿದರು. ಕಳೆದ ಚುನಾವಣೆಯಲ್ಲಿ ಎಲ್ಲಾ ಅಲೆಮಾರಿ ಜನಾಂಗಗಳು ಕಾಂಗ್ರೆಸ್‌ಗೆ ಮತ ಹಾಕಿದ್ದು, ಅವರ ರಕ್ಷಣೆಗೆ ಈಗ ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.

ಇನ್ನು ಎಲ್ಲವನ್ನೂ ಕೇಳಿದ ಡಿಸಿಎಂ ಶಿವಕುಮಾರ್, ಈ ವಿಚಾರವಾಗಿ ಸಮಾಜ ಕಲ್ಯಾಣ ಸಚಿವ ಮಹಾದೇವಪ್ಪ ಅವರನ್ನ ಭೇಟಿ ಮಾಡುವಂತೆ ಸೂಚನೆ ನೀಡಿದರು. ಅಲೆಮಾರಿ ಸಮುದಾಯಗಳನ್ನು ಗುರುತಿಸಿ, ಅವರಿಗೆ ರಕ್ಷಣೆ ನೀಡಬೇಕು, ಅವರ ಸಮಸ್ಯೆಗಳನ್ನು ಬಗೆಹರಿಸಲು ಒಂದು ಸಮಿತಿ ರಚನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, "ಇದು ನಮ್ಮ ಪಕ್ಷದ ಸಿದ್ಧಾಂತ ಹಾಗೂ ಜವಾಬ್ದಾರಿ. ಹೀಗಾಗಿ ನಮ್ಮ ನಾಯಕರ ಜೊತೆ ಚರ್ಚೆ ಮಾದುತ್ತೇವೆ. ನಂತರ ಸಂಬಂಧ ಪಟ್ಟ ಇಲಾಖೆ ಜೊತೆ ಚರ್ಚೆ ಮಾಡುತ್ತೇವೆ." ಎಂದು ಹೇಳಿದರು.
ಪ್ರತ್ಯೇಕ ನಿಗಮ ಸ್ಥಾಪನೆಯ ಭರವಸೆ
ಪ್ರತ್ಯೇಕ ನಿಗಮ ಸ್ಥಾಪನೆ ಮಾಡುತ್ತೀರಾ ಎಂಬ ಪ್ರಶ್ನೆಗೆ, "ಮೊದಲು ಈ ಸಮುದಾಯದವರನ್ನು ಗುರುತಿಸಿ ಅವರ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಅಧ್ಯಯನ ನಡೆಸಲು ಸಮಿತಿ ರಚನೆ ಮಾಡಲಾಗುವುದು. ನಿಗಮ ಮಂಡಳಿ ಮಾಡಿದ ತಕ್ಷಣ ಸಮಸ್ಯೆ ಬಗೆ ಹರಿಯುವುದಿಲ್ಲ. ಈಗಾಗಲೇ ರಚನೆ ಆಗಿರುವ ನಿಗಮ ಮಂಡಳಿಗಳು ಎಲ್ಲಾ ಸಮಸ್ಯೆ ಬಗೆಹರಿಸಿಲ್ಲ. ಹೀಗಾಗಿ ಮೊದಲು ಅವರ ರಕ್ಷಣೆ ಮಾಡುವ ಕಾರ್ಯ ಆಗಬೇಕು" ಎಂದರು.
ಇನ್ನು ರಾಜ್ಯದಲ್ಲಿ ನಿಷ್ಕ್ರೀಯವಾಗಿರುವ ನಿಗಮ ಮಂಡಳಿಗಳನ್ನು ಕೈ ಬಿಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ "ಈ ವಿಚಾರವಾಗಿ ಈಗಲೇ ಏನೂ ಹೇಳುವುದಿಲ್ಲ. ಮೊದಲು ಬಜೆಟ್ ಮಂಡನೆ ಮಾಡುತ್ತೇವೆ. ಈ ವಿಚಾರವಾಗಿ ಹಣಕಾಸು ಸಚಿವರು ಉತ್ತರ ನೀಡಲಿದ್ದಾರೆ" ಎಂದರು.
ಆರ್ ಎಸ್ಎಸ್ ಸೇರಿದಂತೆ ಅಂಗ ಸಂಸ್ಥೆಗಳಿಗೆ ಬಿಜೆಪಿ ಸರ್ಕಾರ ಭೂಮಿ ಹಂಚಿಕೆ ಮಾಡಿರುವ ವಿಚಾರವನ್ನೆ ಮರುಪರಿಶೀಲನೆ ಮಾಡುತ್ತೀರಾ ಎಂದು ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, "ಕಂದಾಯ ಸಚಿವರು ಈ ವಿಚಾರವನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ. ಅವರು ಸೂಕ್ತ ನಿರ್ಧಾರ ಮಾಡಲಿದ್ದಾರೆ" ಎಂದು ಹೇಳಿದರು.












Click it and Unblock the Notifications