Namma Metro: ಭಾನುವಾರ ಮೆಜೆಸ್ಟಿಕ್-ಇಂದಿರಾನಗರ ಮೆಟ್ರೋ ರೈಲು ಸೇವೆ ವ್ಯತ್ಯಯ
ಜನವರಿ 19ರ ಭಾನುವಾರ ಬೆಳಗ್ಗೆ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಪ್ರಯಾಣ ಮಾಡಲು ನೀವು ಯೋಜಿಸಿದ್ದರೆ ನಿಮ್ಮ ಯೋಜನೆಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಜನವರಿ 19ರಂದು ಭಾನುವಾರ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ನಾಡ ಪ್ರಭು ಕೆಂಪೇಗೌಡ ನಿಲ್ದಾಣ ಮತ್ತು ಇಂದಿರಾನಗರ ನಿಲ್ದಾಣಗಳ ನಡುವೆ ರೈಲು ಸೇವೆ ಲಭ್ಯವಿರುವುದಿಲ್ಲ ಎಂದು ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ.
ಉಳಿದಂತೆ ನೇರಳೆ ಮಾರ್ಗದ ಇತರೆ ವಿಭಾಗಗಳಲ್ಲಿ ಸೇವೆ ಎಂದಿನಂತೆ ಇರಲಿದೆ ಎಂದು ಬಿಎಂಆರ್ ಸಿಎಲ್ ಮಾಹಿತಿ ನೀಡಿದೆ. ಹಸಿರು ಮಾರ್ಗದ ರೈಲು ಸೇವೆಯಲ್ಲಿ ಕೂಡ ಯಾವುದೇ ವ್ಯತ್ಯಯ ಇರುವುದಿಲ್ಲ ಎಂದು ತಿಳಿಸಿದೆ. ಎಂಜಿ ರಸ್ತೆ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ನಿರ್ವಹಣೆ ಕೆಲಸ ಇರುವ ಕಾರಣ ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಚಲ್ಲಘಟ್ಟ ಮತ್ತು ನಾಡಪ್ರಭು ಕೆಂಪೇಗೌಡ ನಿಲ್ದಾಣ, ವೈಟ್‌ಫೀಲ್ಡ್ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವೆ ನಿಗದಿತ ವೇಳಾಪಟ್ಟಿಯಲ್ಲಿ ಬೆಳಿಗ್ಗೆ 7 ಗಂಟೆಗೆ ರೈಲು ಸಂಚಾರ ಆರಂಭವಾಗಲಿದೆ. ಮೆಟ್ರೋ ಪ್ರಯಾಣಿಕರು ಭಾನುವಾರ ರೈಲು ಸಂಚಾರದಲ್ಲಿನ ಸಮಯದ ಬದಲಾವಣೆಯನ್ನು ಗಮನಿಸಬೇಕು ಎಂದು ಮನವಿ ಮಾಡಿದೆ.
ಪ್ರಯಾಣದರ ಏರಿಕೆ ಶಾಕ್
ಶೀಘ್ರದಲ್ಲೇ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕ್ ಸಿಗುವುದು ಖಚಿತವಾಗಿದೆ. ನಮ್ಮ ಮೆಟ್ರೋ ರೈಲು ಪ್ರಯಾಣ ದರವನ್ನು 45% ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಸಂಸದ ಪಿಸಿ ಮೋಹನ್ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಪ್ರಯಾಣ ದರ ಏರಿಕೆ ಮಾಡದಂತೆ ಅವರು ಮನವಿ ಮಾಡಿದ್ದರೂ ಈಗ ಪ್ರಯಾಣದರವನ್ನು ಏಕಾಏಕಿ 45% ಹೆಚ್ಚಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಮೆಟ್ರೋ ರೈಲು ಸೇವೆಯಲ್ಲಿ ಸಾಕಷ್ಟು ಸಮಸ್ಯೆಗಳಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ನೇರಳೆ ಮಾರ್ಗದಲ್ಲಿ ಜನಸಂದಣಿ ನಿಯಂತ್ರಣ ಮಾಡಲು ಆಗುತ್ತಿಲ್ಲ, 2 ನಿಮಿಷಕ್ಕೊಂದು ರೈಲು ಸಂಚರಿಸುವಂತೆ ನೋಡಿಕೊಳ್ಳು ಆಗುತ್ತಿಲ್ಲ, ಈಗ ಪ್ರಯಾಣ ದರ ಏರಿಕೆ ಮಾಡುವ ಮೂಲಕ ಸಾರ್ವಜನಿಕರ ಮೇಲೆ ಮತ್ತಷ್ಟು ಹೊರೆಯಾಗುತ್ತಿದೆ ಎಂದು ಹೇಳಿದ್ದಾರೆ.
ಪಾರ್ಕಿಂಗ್ ಮತ್ತು ಭದ್ರತೆ ವಿಚಾರದಲ್ಲಿ ಕೂಡ ಇನ್ನಷ್ಟು ಸುಧಾರಣೆಯಾಗಬೇಕಾಗಿದೆ. ಕೊನೆಯ ಮೈಲಿಯ ಸಂಪರ್ಕ ಕೂಡ ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು, ಸಮಸ್ಯೆಗಳನ್ನು ಬಗೆಹರಿಸುವ ಮುನ್ನವೇ ದರ ಏರಿಕೆ ಮಾಡುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.












Click it and Unblock the Notifications