ರವಿ ಬೆಳೆಗೆರೆ ಬಂಧನ, ರಾಮಲಿಂಗಾ ರೆಡ್ಡಿ ಹೇಳಿಕೆ
ಬೆಂಗಳೂರು, ಡಿಸೆಂಬರ್. 08 : 'ಪತ್ರಕರ್ತ ರವಿ ಬೆಳಗೆರೆ ಬಂಧನಕ್ಕೂ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವರು, 'ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುವಾಗ ಈ ವಿಚಾರ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೂ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ' ಎಂದರು.

ಹಾಯ್ ಬೆಂಗಳೂರು ಪತ್ರಿಕೆಯ ಪ್ರಧಾನ ಸಂಪಾದಕ ರವಿ ಬೆಳಗೆರೆ ಅವರನ್ನು ಸಿಸಿಬಿ ಪೊಲೀಸರು ಬೆಂಗಳೂರಿನ ಹಾಯ್ ಬೆಂಗಳೂರು ಪತ್ರಿಕಾ ಕಚೇರಿಯಲ್ಲಿ ಶುಕ್ರವಾರ ಬಂಧಿಸಿದ್ದಾರೆ. ಸಹೋದ್ಯೋಗಿ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ ಬೆಳಗೆರೆ ಅವರನ್ನು ಬಂಧಿಸಲಾಗಿದ್ದು, ಕೆಲವೇ ಕ್ಷಣದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಸೆ.5ರಂದು ನಡೆದ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಎಸ್‌ಐಟಿ ಪೊಲೀಸರು ನಡೆಸುತ್ತಿದ್ದಾರೆ. ಎಸ್‌ಐಟಿ ಬಂಧಿಸಿದ್ದ ತಾಹೀರ್ ಹುಸೇನ್ ಎಂಬಾತ ಮತ್ತೊಬ್ಬ ಶಾರ್ಪ್ ಶೂಟರ್ ಶಶಿಧರ್ ಮುಂಡೇವಾಡಿ ಬಗ್ಗೆ ಮಾಹಿತಿ ನೀಡಿದ್ದ.
ವಿಜಯಪುರ ಮೂಲದ ಶಶಧರ್ ಮುಂಡೇವಾಡಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ರವಿ ಬೆಳಗೆರೆ ಅವರು ಸುನೀಲ್ ಹೆಗ್ಗವರವಳ್ಳಿ ಹತ್ಯೆಗೆ 30 ಲಕ್ಷ ರೂ.ಗಳ ಸುಪಾರಿ ನೀಡಿದ್ದರು ಎಂದು ಹೇಳಿಕೆ ನೀಡಿದ್ದ. ಈ ಹೇಳಿಕೆ ಆಧರಿಸಿ ಸಿಸಿಬಿ ಪೊಲೀಸರು ರವಿ ಬೆಳಗೆರೆ ಅವರನ್ನು ಬಂಧಿಸಿದ್ದಾರೆ.
ಶುಕ್ರವಾರ ಸಂಜೆ ಸಿಸಿಬಿ ಪೊಲೀಸರು ಶಶಿಧರ್ ಮುಂಡೇವಾಡಿಯನ್ನು ಬೆಂಗಳೂರಿನ 9ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೋರ್ಟ್ ಡಿ.18ರ ತನಕ ಶಶಿಧರ್ ನನ್ನು ಸಿಸಿಬಿ ವಶಕ್ಕೆ ಒಪ್ಪಿಸಿದೆ.











Click it and Unblock the Notifications