IPL ಪ್ರೇಕ್ಷಕರಿಗೆ ಗುಡ್ ನ್ಯೂಸ್: ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2026 ಪಂದ್ಯದ ಪ್ರಯುಕ್ತ ನಮ್ಮ ಮೆಟ್ರೋ ಸೇವೆ ವಿಸ್ತರಣೆ
ಬೆಂಗಳೂರು: ಟಾಟಾ ಐಪಿಎಲ್ ಕ್ರಿಕೆಟ್ ಜ್ವರ ಕ್ರೀಡಾಭಿಮಾನಿಗಳನ್ನು ಆವರಿಸಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತುರರಾಗಿದ್ದಾರೆ. ಈ ಬಾರಿ ಏಪ್ರಿಲ್ 15, 18 ಹಾಗೂ 24 ರಂದು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ. ಈ ಪೈಕಿ ರಾತ್ರಿ ವೇಳೆ ನಡೆಯುವ ಪಂದ್ಯಗಳನ್ನು ವೀಕ್ಷಿಸಲು ಆಗಮಿಸುವ ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಅನುಕೂಲಕರ ಸಂಚಾರ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಭರ್ಜರಿ ಸಿಹಿಸುದ್ದಿ ನೀಡಿದೆ. ಏಪ್ರಿಲ್ 15 ಮತ್ತು 24 ರಂದು ಮೆಟ್ರೋ ರೈಲು ಸೇವಾ ಅವಧಿಯನ್ನು ಬೆಳಗಿನ ಜಾವ 2 ಗಂಟೆಯವರೆಗೆ ವಿಸ್ತರಿಸಿರುವುದಾಗಿ ಬಿಎಂಆರ್‌ಸಿಎಲ್ ಅಧಿಕೃತ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಕೊನೆಯ ರೈಲಿನ ವೇಳಾಪಟ್ಟಿ ಹೀಗಿದೆ
ಸಾಮಾನ್ಯ ದಿನಗಳಲ್ಲಿ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 11:00 ಗಂಟೆಗೆ ಕೊನೆಗೊಳ್ಳುತ್ತಿದ್ದ ಮೆಟ್ರೋ ಸೇವೆಯನ್ನು, ಈ ಪಂದ್ಯಗಳ ದಿನದಂದು ಮುಂದಿನ ದಿನದ ಮುಂಜಾನೆ 2:00 ಗಂಟೆಯವರೆಗೆ ವಿಸ್ತರಿಸಲಾಗಿದೆ.

ಬಿಎಂಆರ್‌ಸಿಎಲ್ ಬಿಡುಗಡೆ ಮಾಡಿರುವ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲುಗಳು ಕೆಳಕಂಡಂತೆ ಹೊರಡಲಿವೆ:
1. ವೈಟ್‌ಫೀಲ್ಡ್ (ಕಾಡುಗೋಡಿ) ನಿಲ್ದಾಣದಿಂದ ರಾತ್ರಿ 12.30ಕ್ಕೆ ಕೊನೆಯ ರೈಲು ಹೊರಡಲಿದೆ.
2. ಬೊಮ್ಮಸಂದ್ರ ನಿಲ್ದಾಣದಿಂದ ರಾತ್ರಿ 12.30ಕ್ಕೆ ರೈಲು ಹೊರಡಲಿದೆ.
3. ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಹಾಗೂ ಮಾದಾವರ ನಿಲ್ದಾಣಗಳಿಂದ ರಾತ್ರಿ 12.45ಕ್ಕೆ ಕೊನೆಯ ರೈಲು ಪ್ರಯಾಣ ಬೆಳೆಸಲಿದೆ.
4. ಆರ್.ವಿ. ರಸ್ತೆ ನಿಲ್ದಾಣದಿಂದ ರಾತ್ರಿ 02.00ಕ್ಕೆ ಕೊನೆಯ ರೈಲು ಇರಲಿದೆ.
5. ಹಾಗೆಯೇ, ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ದಿಂದ ನಾಲ್ಕೂ ದಿಕ್ಕುಗಳಿಗೆ ಮಧ್ಯರಾತ್ರಿ 01:30ಕ್ಕೆ ಕೊನೆಯ ರೈಲು ಸಂಚರಿಸಲಿದೆ. ಆದರೆ, ಏಪ್ರಿಲ್ 18 ರಂದು ಹಗಲು ಹಾಗೂ ರಾತ್ರಿ ಕ್ರಿಕೆಟ್ ಪಂದ್ಯ ನಡೆಯಲಿದ್ದು, ಅಂದು ಮೆಟ್ರೋ ಸೇವೆಗಳ ಅವಧಿಯಲ್ಲಿ ಯಾವುದೇ ವಿಸ್ತರಣೆ ಇರುವುದಿಲ್ಲ. ಬದಲಾಗಿ ನಿಗದಿತ ವೇಳಾಪಟ್ಟಿಯಂತೆಯೇ ರೈಲುಗಳು ಸಂಚರಿಸಲಿವೆ ಎಂದು ಸ್ಪಷ್ಟಪಡಿಸಲಾಗಿದೆ.
ಟಿಕೆಟ್ ಮತ್ತು ಪ್ರವೇಶದ ವಿವರ
ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವ ಐಪಿಎಲ್ ವೀಕ್ಷಕರ ಪ್ರಯಾಣವನ್ನು ಸುಗಮಗೊಳಿಸಲು, ಡಿಜಿಟಲ್ ಐಪಿಎಲ್ ಪಂದ್ಯದ ಟಿಕೆಟ್‌ಗಳಲ್ಲೇ ನಮ್ಮ ಮೆಟ್ರೋ ಕ್ಯೂಆರ್ (QR) ಕೋಡ್ ಅನ್ನು ಅಳವಡಿಸಲಾಗಿದ್ದು, ಇದು ಎರಡೂ ಮಾರ್ಗಗಳ ಪ್ರಯಾಣಕ್ಕೆ ಮಾನ್ಯವಾಗಿರುತ್ತದೆ. ಕ್ರೀಡಾಂಗಣಕ್ಕೆ ಕಬ್ಬನ್ ರಸ್ತೆ ಭಾಗದ ಗೇಟ್‌ಗಳನ್ನು ಬಳಸುವ ಪ್ರೇಕ್ಷಕರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ಮತ್ತು ಲಿಂಕ್ ರಸ್ತೆ ಭಾಗದ ಗೇಟ್‌ಗಳನ್ನು ಬಳಸುವವರು ಸಮೀಪದಲ್ಲಿರುವ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಳಸುವಂತೆ ಸೂಚಿಸಲಾಗಿದೆ.
ಪಾರ್ಕಿಂಗ್ ದರ ಮತ್ತು ಸುರಕ್ಷತಾ ಕ್ರಮಗಳು
ಸ್ಟೇಡಿಯಂ ಸುತ್ತಮುತ್ತಲಿನ ಕೇಂದ್ರ ವ್ಯವಹಾರ ಪ್ರದೇಶದಲ್ಲಿ ವಾಹನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ಪ್ರೇಕ್ಷಕರು ತಮ್ಮ ವಾಹನಗಳನ್ನು ನಿಗದಿತ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕ್ ಮಾಡಿ ಅಲ್ಲಿಂದ ಮೆಟ್ರೋ ಮೂಲಕ ಸ್ಟೇಡಿಯಂ ತಲುಪಲು ಬಿಎಂಆರ್‌ಸಿಎಲ್ ಸಲಹೆ ನೀಡಿದೆ. ಪಂದ್ಯದ ದಿನಗಳಲ್ಲಿ ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್ ದರವನ್ನು ದ್ವಿಚಕ್ರ ವಾಹನಗಳಿಗೆ ರೂ. 30 ಮತ್ತು ಕಾರುಗಳಿಗೆ ರೂ. 60 ಎಂದು ನಿಗದಿಪಡಿಸಲಾಗಿದ್ದು, ಇದು ಅಂದಿನ ಮೆಟ್ರೋ ಸೇವೆ ಮುಕ್ತಾಯವಾಗುವವರೆಗೆ ಮಾನ್ಯವಾಗಿರುತ್ತದೆ.
ಪ್ರೇಕ್ಷಕರ ಅನುಕೂಲಕ್ಕಾಗಿ ಬೈಯಪ್ಪನಹಳ್ಳಿ, ಕೆಂಗೇರಿ, ಜಾಲಹಳ್ಳಿ, ನಾಗಸಂದ್ರ ಸೇರಿದಂತೆ 44 ನಿಲ್ದಾಣಗಳಲ್ಲಿ ಈ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ದಟ್ಟಣೆ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಅಹಿತಕರ ಘಟನೆಗಳನ್ನು ತಡೆಯಲು, ಅಗತ್ಯವಿದ್ದಲ್ಲಿ ಮೆಟ್ರೋ ನಿಲ್ದಾಣಗಳ ಪ್ರವೇಶ ದ್ವಾರಗಳನ್ನು ನಿಯಂತ್ರಿಸುವ ಅಥವಾ ತಾತ್ಕಾಲಿಕವಾಗಿ ಮುಚ್ಚುವ ಹಕ್ಕನ್ನು ಬಿಎಂಆರ್‌ಸಿಎಲ್ ಕಾಯ್ದಿರಿಸಿಕೊಂಡಿದೆ.












Click it and Unblock the Notifications