Namma Metro: ನಮ್ಮ ಮೆಟ್ರೋ ಬೆಂಗಳೂರು ಏರ್‌ಪೋರ್ಟ್ ಮಾರ್ಗದ ಕುರಿತು ಟೀಕೆ
ಬೆಂಗಳೂರು, ಫೆಬ್ರವರಿ 26: ಬೆಂಗಳೂರು ನಗರದಲ್ಲಿ ನಮ್ಮ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿದೆ. ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಈಗಾಗಲೇ ಯೋಜನೆ ರೂಪಿಸಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಮೆಟ್ರೋ 'ನೀಲಿ' ಮಾರ್ಗದ ಈ ಕಾಮಗಾರಿ ಜೂನ್ 2026 ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಆದರೆ ಬೆಂಗಳೂರು ಏರ್‌ಪೋರ್ಟ್ ಮೆಟ್ರೋ ಮಾರ್ಗ ಜನರು, ತಜ್ಞರ ಟೀಕೆಗೆ ಕಾರಣವಾಗಿದೆ.
ಬೆಂಗಳೂರು ನಗರದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವುದು ಸಂಚಾರ ದಟ್ಟಣೆಯ ಕಾರಣ ದೊಡ್ಡ ಸಾಹಸ. ಇಂತಹ ಸಮಯದಲ್ಲಿಯೇ ಏರ್‌ಪೋರ್ಟ್ ಮೆಟ್ರೋ ರೈಲು ಮಾರ್ಗ ಜನರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಯೋಜನೆಯ ವಿವರ ನೋಡಿದ ಜನರು ಮೆಟ್ರೋ ಬದಲು ಬಸ್, ಖಾಸಗಿ ವಾಹನಗಳು, ಕ್ಯಾಬ್ ಉತ್ತಮ ಎಂದು ಹೇಳುತ್ತಿದ್ದಾರೆ.

ನಗರದಿಂದ ದೇವನಹಳ್ಳಿಯಲ್ಲಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸಲು ಎರಡು-ಮೂರು ಕಡೆ ನಿಲ್ದಾಣ ಬದಲಾವಣೆ ಮಾಡಬೇಕಿದೆ. ದೆಹಲಿಯ ಮಾದರಿಯಲ್ಲಿ ನಗರದಿಂದ ವಿಮಾನ ನಿಲ್ದಾಣಕ್ಕೆ ಒಂದು ರೈಲು ಮಾರ್ಗ ನೇರವಾಗಿ ಸಂಪರ್ಕ ಕಲ್ಪಿಸುವುದಿಲ್ಲ.
ಲಗೇಜ್, ನಿಲ್ದಾಣ ಬದಲಾವಣೆ: ವಿಮಾನ ನಿಲ್ದಾಣದ ಪ್ರಯಾಣಿಕರು ಎಂದರೆ ಅವರ ಬಳಿ ಲಗೇಜ್ ಇದ್ದೇ ಇರುತ್ತದೆ. ಅದರಲ್ಲೂ ಕುಟುಂಬ ಸಮೇತ ಪ್ರಯಾಣ ಮಾಡುವವರಾದರೆ ಲಗೇಜ್ ಅಧಿಕವಾಗಿಯೇ ಇರುತ್ತದೆ. ಇಷ್ಟು ಲಗೇಜ್ ಹೊತ್ತು 2-3 ಕಡೆ ರೈಲು ಬದಲಿಸಿ ಮೆಟ್ರೋ ಮೂಲಕ ವಿಮಾನ ನಿಲ್ದಾಣ ತಲುಪುವುದು ಸುಲಭವಲ್ಲ ಎಂಬುದು ಸದ್ಯದ ಮಾತು.
ನಮ್ಮ ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ಎರಡು ವಿಭಾಗಗಳಲ್ಲಿ ನಡೆಯುತ್ತಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆ. ಆರ್. ಪುರ, ಕೆ. ಆರ್. ಪುರ-ವಿಮಾನ ನಿಲ್ದಾಣ ಎಂದು ವಿಭಾಗಿಸಲಾಗಿದೆ. ಹೆಬ್ಬಾಳ, ಯಲಹಂಕ ಮೂಲಕ ರೈಲು ನಗರದಿಂದ ವಿಮಾನ ನಿಲ್ದಾಣ ಸಂಪರ್ಕಿಸುತ್ತದೆ.
ಬೆಂಗಳೂರು ನಗರದ ಮುಖ್ಯ ಪ್ರದೇಶದಿಂದ ಏರ್‌ಪೋರ್ಟ್‌ಗೆ ನೇರವಾದ ರೈಲು ಸಂಪರ್ಕವಿಲ್ಲ. ಇದು ಟೀಕೆಗೆ ಗುರಿಯಾಗಿದೆ. ರೈಲು ಸಂಚಾರ ಆರಂಭವಾದ ಬಳಿಕ ಜನರ ಪ್ರತಿಕ್ರಿಯೆ ಹೇಗಿರಲಿದೆ?. ಈ ಮಾರ್ಗದಲ್ಲಿ ಸಂಚಾರ ನಡೆಸುವ ಮೆಟ್ರೋ ರೈಲಿನಲ್ಲಿ ಲಗೇಜ್‌ಗಳನ್ನು ಸಾಗಣೆ ಮಾಡಲು ಯಾವ ರೀತಿ ಅನುಕೂಲ ಮಾಡಿಕೊಡಲಾಗುತ್ತದೆ? ಎಂದು ಕಾದು ನೋಡಬೇಕಿದೆ.
ತಜ್ಞರು ಉದಾಹರಣೆ ಮೂಲಕ ವಿವರಿಸಿದ್ದಾರೆ. ಹಸಿರು ನಮ್ಮ ಮೆಟ್ರೋ ರೈಲಿನಲ್ಲಿ ಬರುವ ವಿಮಾನ ನಿಲ್ದಾಣದ ಪ್ರಯಾಣಿಕ ಮೊದಲು ಮೆಜೆಸ್ಟಿಕ್ ಇಂಟರ್ ಚೇಂಜ್ ನಿಲ್ದಾಣದಲ್ಲಿ ಇಳಿದು ನೇರಳೆ ಮಾರ್ಗಕ್ಕೆ ಹೋಗಬೇಕು. ಆ ಮಾರ್ಗದಲ್ಲಿ ಎಂ. ಜಿ. ರಸ್ತೆಯ ನಿಲ್ದಾಣದಲ್ಲಿ ಮತ್ತೆ ರೈಲನ್ನು ಬದಲಾವಣೆ ಮಾಡಿಕೊಂಡು ಹೆಬ್ಬಾಳ ಮೂಲಕ ವಿಮಾನ ನಿಲ್ದಾಣ ತಲುಪಬೇಕಿದೆ.
ನಮ್ಮ ಮೆಟ್ರೋ ಯೋಜನೆ ರೂಪಿಸಿದಂತೆ ಈಗ ಕಾಮಗಾರಿ ನಡೆಯುತ್ತಿದೆ. ನಗರದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಒಂದೇ ನೇರವಾದ ಮಾರ್ಗದ ಕುರಿತು ಯಾವುದೇ ಚರ್ಚೆ ನಡೆದಿಲ್ಲ, ಪ್ರಸ್ತಾವನೆ ಇಲ್ಲ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ. ಆದರೆ ಕನಕಪುರ ರಸ್ತೆಯ ಮಾರ್ಗದಿಂದ ಏರ್‌ಪೋರ್ಟ್ ಮಾರ್ಗಕ್ಕೆ ನೇರ ಸಂಪರ್ಕ ಕಲ್ಪಿಸುವ ಕುರಿತು ನಾವು ಚರ್ಚೆ ನಡೆಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಭಾರತೀಯ ರೈಲ್ವೆ ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ವಿಮಾನ ನಿಲ್ದಾಣ ಬಳಿಯ ರೈಲು ನಿಲ್ದಾಣವನ್ನು 3 ಕೋಟಿ ರೂ. ವೆಚ್ಚದಲ್ಲಿ ಪುನರ್ ಅಭಿವೃದ್ಧಿಗೊಳಿಸಿ ವಿಮಾನ ನಿಲ್ದಾಣಕ್ಕೆ ರೈಲು ಸೇವೆ ಒದಗಿಸಿದೆ. ಆದರೆ ಈ ರೈಲು ಸೇವೆ ಸಹ ವಿಮಾನ ನಿಲ್ದಾಣ ಪ್ರಯಾಣಿಕರನ್ನು ಆಕರ್ಷಿಸಲು ವಿಫಲವಾಗಿದೆ.












Click it and Unblock the Notifications