Bengaluru Metro: ಹೊಸಕೋಟೆ, ಬಿಡದಿ & ನೆಲಮಂಗಲಕ್ಕೂ ನಮ್ಮ ಮೆಟ್ರೋ: ಡಿ.ಕೆ ಶಿವಕುಮಾರ್ ಅಪ್ಡೇಟ್ಸ್!
ಬೆಂಗಳೂರು ಮೆಟ್ರೋ ಇದೀಗ ಬೆಂಗಳೂರಿನ ಸುತ್ತಮುತ್ತಲಿ ಕರ್ನಾಟಕದ ಪ್ರದೇಶಗಳಿಗೂ ವಿಸ್ತರಣೆಯಾಗಲಿದೆ ಎನ್ನುವ ಬಗ್ಗೆ ಖುದ್ದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಹತ್ವದ ಅಪ್ಡೇಟ್ಸ್ ಕೊಟ್ಟಿದ್ದಾರೆ. ಬೆಂಗಳೂರಿನ ಮೆಟ್ರೋ ತಮಿಳುನಾಡಿನ ಹೊಸೂರು ಮಾರ್ಗಕ್ಕೆ ವಿಸ್ತರಣೆ ಮಾಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾದ ಮೇಲೆ ಈ ಪ್ರಸ್ತಾವನೆಯ ಬಗ್ಗೆ ಯಾವುದೇ ಚರ್ಚೆಗಳು ಆಗಲಿಲ್ಲ. ಇದೀಗ ಬೆಂಗಳೂರಿನ ವಿವಿಧ ಭಾಗಕ್ಕೆ ಮೆಟ್ರೋ ವಿಸ್ತರಣೆಯಾಗುವ ಸಿಹಿಸುದ್ದಿಯನ್ನು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಕೊಟ್ಟಿದ್ದಾರೆ.
ಕೃಷ್ಣರಾಜಪುರ ಹಾಗೂ ಹಳೇ ಮದ್ರಾಸ್ ರಸ್ತೆಯಲ್ಲಿ ಆಗುತ್ತಿರುವ ವಿಪರೀತ ಟ್ರಾಫಿಕ್ ಜಾಮ್‌ನ ಬಗ್ಗೆ ಶಾಸಕ ಶರತ್ ಬಚ್ಚೇಗೌಡ ಅವರು ವಿಷಯ ಪ್ರಸ್ತಾಪಿಸಿದ್ದು, ಇದಕ್ಕೆ ಡಿ.ಕೆ ಶಿವಕುಮಾರ್ ಅವರು ಉತ್ತರಿಸಿದ್ದಾರೆ. ಬೆಂಗಳೂರಿನ ವಿವಿಧ ಭಾಗಕ್ಕೆ ಮೆಟ್ರೋ ವಿಸ್ತರಣೆ ಮಾಡುವ ಬಗ್ಗೆ ಅವರು ಮಾತನಾಡಿದ್ದಾರೆ. ಬೆಂಗಳೂರು ಮೆಟ್ರೋವನ್ನು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಾದ ಹೊಸಕೋಟೆ, ನೆಲಮಂಗಲ ಹಾಗೂ ಬಿಡದಿಗೆ ವಿಸ್ತರಿಸುವ ನಿಟ್ಟಿನಲ್ಲಿ ಪ್ಲಾನ್ ಮಾಡಿಕೊಳ್ಳಲಾಗುತ್ತಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಈ ಮೂಲಕ ಬೆಂಗಳೂರಿನ ವಿವಿಧ ಭಾಗದಲ್ಲಿ ಮೆಟ್ರೋ ವಿಸ್ತರಣೆ ಆಗಲಿದೆ ಎನ್ನುವ ಸೂಚನೆ ಕೊಟ್ಟಿದ್ದಾರೆ.

ಹೊಸಕೋಟೆ, ನೆಲಮಂಗಲ ಹಾಗೂ ಬಿಡದಿಗೆ ಮೆಟ್ರೋ ಸೇವೆ ವಿಸ್ತರಣೆ ಆಗುವುದರಿಂದ ಈ ಭಾಗದಿಂದ ನಿತ್ಯವೂ ಬೆಂಗಳೂರಿಗೆ ಬಂದು ಕೆಲಸ ಮಾಡುವವರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಬೆಂಗಳೂರಿನ ವಿವಿಧ ಭಾಗದಲ್ಲಿ ಸಂಚಾರ ದಟ್ಟಣೆ (ಟ್ರಾಫಿಕ್ ಜಾಮ್) ವಿಪರೀತವಾಗಿದೆ. ಕೃಷ್ಣರಾಜಪುರದ ಟಿನ್‌ಫ್ಯಾಕ್ಟರಿ ಭಾಗದಲ್ಲಿ ಭಾರೀ ಸಂಚಾರ ದಟ್ಟಣೆ ಇತ್ತು. ಇದೀಗ ಈ ಭಾಗದಲ್ಲಿ ಮೆಟ್ರೋ ವಿಸ್ತರಣೆಯಾದ ಮೇಲೆ ಸಂಚಾರ ದಟ್ಟಣೆ ಇಳಿಕೆಯಾಗಿದೆ.
ಆದರೆ, ಬೆಂಗಳೂರಿನ ಹಳೆಯ ಮದ್ರಾಸ್ ರಸ್ತೆಯಲ್ಲಿ ಅದರಲ್ಲಿಯೂ ಮುಖ್ಯವಾಗಿ ಕೃಷೃರಾಜಪುರದಿಂದ ಹೊಸಕೋಟೆಯ ವರೆಗೆ ಟ್ರಾಫಿಕ್ ಜಾಮ್ ಸಮಸ್ಯೆ ಇದೆ. ಇದನ್ನು ಶರತ್ ಬಚ್ಚೇಗೌಡ ಅವರು ಸದನದಲ್ಲಿ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ ಶಿವಕುಮಾರ್ ಅವರು ಬೆಂಗಳೂರಿನ ವಿವಿಧ ಭಾಗದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಇರುವ ಬಗ್ಗೆ ಮಾಹಿತಿ ಇದೆ. ಈ ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ಮೆಟ್ರೋ ಸಮಾಲೋಚನೆ ನಡೆಸುತ್ತಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು ಎಂದಿದ್ದಾರೆ.
ಬೆಂಗಳೂರು ಮೆಟ್ರೋ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಚರ್ಚೆಗಳು ಈಗಾಗಲೇ ಶುರುವಾಗಿದೆ. ಕೋಲಾರದಿಂದ ಅಂದಾಜು 10,000 ಸಾವಿರಕ್ಕೂ ಹೆಚ್ಚು ಜನ ಬೆಂಗಳೂರಿಗೆ ರೈಲುಗಳಲ್ಲಿ ಬರ್ತಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆದಿದೆ ಎಂದು ಡಿ.ಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಹೊರ ಭಾಗದಲ್ಲೂ ಮೆಟ್ರೋ ವಿಸ್ತರಣೆ ಆಗಲಿದೆ ಎನ್ನುವುದು ಕೇಳಿ ಜನ ಖುಷಿಯಾಗಿದ್ದಾರೆ. ಬೆಂಗಳೂರಿನ ಹೊರ ಭಾಗಕ್ಕೂ ಮೆಟ್ರೋ ವಿಸ್ತರಣೆಯಾದರೆ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಇನ್ನಷ್ಟು ಇಳಿಕೆಯಾಗಲಿದ್ದು, ಸಮೂಹ ಸಾರಿಗೆ ಬಳಸುವವರ ಸಂಖ್ಯೆ ಹೆಚ್ಚಳವಾಗಿ ಹಲವು ಲಾಭಗಳಾಗಲಿವೆ. ಇದರಲ್ಲಿ ವಾಯುಮಾಲಿನ್ಯ ಇಳಿಕೆಯಾಗಲಿದೆ ಎನ್ನುವ ಅಂಶವೂ ಸೇರಿದೆ.












Click it and Unblock the Notifications