Bengaluru Second Airport: ಶಿರಾ ಬಳಿ ಏರ್‌ಪೋರ್ಟ್ ನಿರ್ಮಾಣಕ್ಕೆ ಈ ಪ್ರಭಾವಿಗಳಿಂದ ಅಡ್ಡಿ
ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಕಾಂಗ್ರೆಸ್ ಸರ್ಕಾರವು ಈಗಾಗಲೇ ಹೊಸ ಏರ್‌ಪೋರ್ಟ್‌ಗಾಗಿ ಮೂರು ಸ್ಥಳಗಳನ್ನು ಗುರುತಿಸಿ, ಕೇಂದ್ರ ಸರ್ಕಾರದಿಂದ ಪರಿಶೀಲನೆಯೂ ನಡೆದಿದೆ. ಮತ್ತೊಂದೆಡೆ ಏರ್‌ಪೋರ್ಟ್ ವಿಚಾರವಾಗಿ ಕಾಂಗ್ರೆಸ್ ನಾಯಕರ ನಡುವೆಯೇ ಹಗ್ಗಜಗ್ಗಾಟ ಶುರುವಾಗಿದೆ. ಬೆಂಗಳೂರಿನ ಸಮೀಪ ಎರಡನೇ ಏರ್‌ಪೋರ್ಟ್ ಬೇಕು ಎಂದು ಕೆಲವರು ಕಾಳಜಿ ವಹಿಸಿದ್ದರೆ, ತುಮಕೂರು ಜಿಲ್ಲೆಯ ಶಿರಾದಲ್ಲಿ ಏರ್‌ಪೋರ್ಟ್ ನಿರ್ಮಿಸಬೇಕು ಎಂದು ಪಟ್ಟು ಹಿಡಿದ್ದಾರೆ. ಆದರೆ, ಶಿರಾ ಬಳಿ ಏರ್‌ಪೋರ್ಟ್ ನಿರ್ಮಾಣ ಕೈಬಿಡಲು ಕೆಲ ಪ್ರಭಾವಿಗಳ ಕೈವಾಡ ಇದೆ ಎಂದು ಕಾಂಗ್ರೆಸ್ ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು, ಎರಡನೇ ವಿಮಾನ ನಿಲ್ದಾಣದ ಬಗ್ಗೆ ಮಹತ್ವದ ಮಾಹಿತಿ ನೀಡಿರುವ ಅವರು, ಕೆಲವು ಪ್ರಭಾವಿ ಸಚಿವರ ಒತ್ತಡದಿಂದಾಗಿ ರಾಜ್ಯ ಸರ್ಕಾರವು ತುಮಕೂರು ಬಳಿ ಶಿರಾದಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಯೋಜನೆಯನ್ನು ಕೈಬಿಟ್ಟಿದೆ. ಆರು ತಿಂಗಳ ಹಿಂದೆಯೇ ಶಿರಾ ಬಳಿ ಈ ಹೊಸ ವಿಮಾನ ನಿಲ್ದಾಣ ನಿರ್ಮಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೆ. ಇದರಿಂದ ಕನಿಷ್ಠ ಎಂಟು ಜಿಲ್ಲೆಗಳಿಗೆ ಪ್ರಯೋಜನವಾಗಲಿದೆ ಎಂದೂ ಮನವಿ ಮಾಡಿದ್ದೆ. ಇದಕ್ಕೆ ಹಲವು ಶಾಸಕರು ಗಂಭೀರವಾಗಿ ಪರಿಗಣಿಸಿದ್ದರು. ಶಿರಾದಲ್ಲೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸಬೇಕೆಂದು ಬಯಸಿದ್ದರು. ಆದರೆ ಕೆಲವು ಪ್ರಭಾವಿ ಸಚಿವರ ಒತ್ತಡದಿಂದಾಗಿ ಶಿರಾ ಪ್ರದೇಶವನ್ನು ಕೈಬಿಟ್ಟಿದೆ. ಸರ್ಕಾರ ತನ್ನ ನಿರ್ಧಾರವನ್ನ ಮತ್ತೆ ಪುನರ್ ವಿಮರ್ಶಿಸಲಿ ಎಂದು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ನವದೆಹಲಿಗೆ ಭೇಟಿ ನೀಡಿದಾಗ ಹೊಸ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು ಅವರ ಗಮನಕ್ಕೆ ತರಲಾಗಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ತುಮಕೂರು ಬಳಿಯ ಶಿರಾದಲ್ಲಿ ಎರಡನೇ ವಿಮಾನ ನಿಲ್ದಾಣದ ಸ್ಥಾಪನೆಯ ಅಗತ್ಯವಿದೆ. ಇದು ನಿರ್ಮಾಣವಾಗುವುದರಿಂದ ಕನಿಷ್ಠ ಏಳರಿಂದ ಎಂಟು ಜಿಲ್ಲೆಗಳೂ ಸೇರಿ ಶಿರಾ ಸುತ್ತಮುತ್ತಲಿನ ಅನೇಕ ಪ್ರದೇಶಗಳು ಪ್ರಯೋಜನ ಪಡೆದುಕೊಳ್ಳಲಿವೆ ಎಂದು ಸತೀಶ್ ಜಾರಕಿಹೊಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತುಮಕೂರು ಭಾಗದಲ್ಲೇ ಎರಡನೇ ಏರ್‌ಪೋರ್ಟ್ ನಿರ್ಮಾಣವಾಗಬೇಕು ಎಂದು ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ, ಜಿ.ಪರಮೇಶ್ವರ್, ಬಿಜೆಪಿ ಸಂಸದ ವಿ.ಸೋಮಣ್ಣ ಸೇರಿದಂತೆ ಹಲವರು ಪಟ್ಟು ಹಿಡಿದಿದ್ದಾರೆ. ಕನಕಪುರ ರಸ್ತೆ ಹಾಗೂ ನೆಲಮಂಗಲ ಕುಣಿಗಲ್ ಭಾಗದಲ್ಲಿ ವಿಮಾನ ನಿಲ್ದಾಣಕ್ಕೆ ಸ್ಥಳ ಗುರುತಿಸಿದೆ. ಇದಕ್ಕೆ ಕಾಂಗ್ರೆಸ್‌ನಲ್ಲೇ ವಿರೋಧವೂ ಇದೆ. ಜಿ.ಪರಮೇಶ್ವರ್, ಶಾಸಕ ಟಿಬಿ ಜಯಚಂದ್ರ ಸೇರಿದಂತೆ ಹಲವು ನಾಯಕರು ಈ ಏರ್‌ಪೋರ್ಟ್ ತುಮಕೂರು ಭಾಗದಲ್ಲಿ ನಿರ್ಮಾಣವಾಗಬೇಕು ಎಂದು ಧ್ವನಿ ಎತ್ತಿದ್ದಾರೆ. ಕೇಂದ್ರ ಸಚಿವ ವಿ.ಸೋಮಣ್ಣ ಅವರು ಈ ಹೊಸ ಏರ್‌ಪೋರ್ಟ್‌ಗೆ ಹೊಸ ಜಾಗವೊಂದನ್ನು ಸಹ ಸೂಚಿಸಿದ್ದಾರೆ.

ಎರಡನೇ ವಿಮಾನ ನಿಲ್ದಾಣವನ್ನು ತುಮಕೂರಿನ ಶಿರಾದಲ್ಲಿ ಸ್ಥಾಪಿಸಿದರೆ, ಸಾಕಷ್ಟು ಅನುಕೂಲವಾಗಲಿದೆ ಎಂದು ಕಾಂಗ್ರೆಸ್‌ನ ಟಿಬಿ ಜಯಚಂದ್ರ ಹೇಳಿರುವುದಕ್ಕೆ ನನ್ನ ಸಹಮತವಿದೆ. ಎರಡನೇ ವಿಮಾನ ನಿಲ್ದಾಣದ ಸಂಬಂಧ 34 ಶಾಸಕರು ನನಗೂ ಮನವಿ ಪತ್ರ ಸಲ್ಲಿಸಿದ್ದು, ಅದನ್ನು ನಾನು ಕೇಂದ್ರ ನಾಗರೀಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಅವರಿಗೂ ಸಲ್ಲಿಸಿದ್ದೇನೆ ಎಂದಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡ ಏರಡನೇ ಏರ್‌ಪೋರ್ಟ್‌ಗೆ ಪ್ರಸ್ತಾವನೆ ಸಲ್ಲಿಸಿದ್ದೆ. ಅವರು ಒಂದೆರಡು ಮೂರೋ ಜಾಗಗಳನ್ನು ಗುರುತಿಸಿದ್ದಾರೆ. ಇದಕ್ಕಾಗಿ ರಾಜ್ಯಕ್ಕೆ ಬಂದಿರುವ ವಿಮಾನ ನಿಲ್ದಾಣ ಪ್ರಾಧಿಕಾರದ ತಂಡವು ಆ ಸ್ಥಳಗಳನ್ನ ನೋಡ್ತಾರೆ. ಆದರೆ ನಾನು ಶಿರಾ ಭಾಗದಲ್ಲಿ ಏರ್‌ಪೋರ್ಟ್ ನಿರ್ಮಾಣ ಸಂಬಂಧ ಕೇಂದ್ರದ ಮೇಲೆ ಒತ್ತಡ ಹಾಕುತ್ತೇನೆ ಎಂದಿದ್ದರು.












Click it and Unblock the Notifications