ಇನ್ನೇನು ತಾಳಿ ಕಟ್ಟಬೇಕು ಅನ್ನವಷ್ಟರಲ್ಲಿ ಪ್ರಿಯಕರನ ಎಂಟ್ರಿ, ಮುಂದೇನಾಯ್ತು?
ಬೆಂಗಳೂರು, ನ 18: ಕಿಕ್ಕಿರಿದು ತುಂಬಿದ ಕಲ್ಯಾಣಮಂಟಪ, ಜರತಾರಿ ಸೀರೆ ಉಟ್ಟ ಮಹಿಳೆಯರ ಅತ್ತಿಂದಿತ್ತ ಓಡಾಟ, ವಧುವರರ ಕಡೆಯವರಿಂದ ಬಂದವರಿಗೆ ಅತಿಥಿ ಸತ್ಕಾರ, ಇನ್ನೊಂದೆಡೆ ವಾದ್ಯ, ಪುರೋಹಿತರ ಮಂತ್ರಘೋಷ.. ಇನ್ನೇನು ತಾಳಿಕಟ್ಟಬೇಕು ಅನ್ನುವಷ್ಟರಲ್ಲಿ ಪ್ರಿಯಕರನ ಎಂಟ್ರಿ! ಹೈಡ್ರಾಮಾ..
ನಗರದ ಹೊರವಲಯ, ನೆಲಮಂಗಲದಲ್ಲಿರುವ ವಿಶ್ವಶಾಂತಿ ಸಮುದಾಯ ಭವನದಲ್ಲಿ ಭಾನುವಾರ (ನ 18) ನಡೆದ ಮದುವೆ ಕಾರ್ಯಕ್ರಮ, ವಧು ಮತ್ತು ವರನ ಕುಟುಂಬದವರಿಗೆ ಅವಿಸ್ಮರಣೀಯ ಘಟನೆಯಾಗದೇ, ತಲೆತಗ್ಗಿಸುವಂತಹ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ.
ಭಾನುವಾರ ರಾತ್ರಿ ನಡೆದ ಮದುವೆ ಶಾಸ್ತ್ರದಲ್ಲಿ ನಗುನಗುತ್ತಲೇ ಇದ್ದ ವಧು, ಮರುದಿನ ಮದುವೆಯ ಶಾಸ್ತ್ರಗಳಲ್ಲೂ ಲವಲವಿಕೆಯಿಂದಲೇ ಭಾಗವಹಿಸಿದ್ದಳು. ಆದರೆ, ಯಾವಾಗ ತನ್ನ ಪ್ರಿಯಕರ, ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟನೋ, ತಾಳಿ ಕಟ್ಟಿಸಿಕೊಳ್ಳಲು ನಿರಾಕರಿಸಿದ್ದಾಳೆ.

ಗಿರೀಶ್ ಮತ್ತು ರೇವತಿ (ಹೆಸರು ಬದಲಾಯಿಸಲಾಗಿದೆ) ಅವರ ಮದುವೆಯನ್ನು ಎರಡೂ ಕುಟುಂಬದವರು ಮಾತುಕತೆ ನಡೆಸಿ ಮಹೂರ್ತ ನಿಗದಿ ಪಡಿಸಿದ್ದರು. ಆದರೆ, ವಧು ನಾಲ್ಕೂವರೆ ವರ್ಷದಿಂದ ತಾನು ಪ್ರೀತಿಸುತ್ತಿದ್ದ ವಿಷಯವನ್ನು ಮನೆಯಲ್ಲಿ ಮುಚ್ಚಿಟ್ಟಿದ್ದಳು.
ಪುರೋಹಿತರು ಗಟ್ಟಿಮೇಳ..ಗಟ್ಟಿಮೇಳ ಎನ್ನುವಾಗ ಮದುವೆ ಮಂಟಪದಲ್ಲಿ ವಧುವಿನ ಪ್ರಿಯಕರ ಪ್ರತ್ಯಕ್ಷನಾಗಿದ್ದಾನೆ, ತನ್ನ ಪ್ರಿಯತಮೆ ರೇವತಿಯ ಮುಂದೆ ಕಣ್ಣೀರಿಟ್ಟಿದ್ದಾನೆ. ನನ್ನನ್ನು ಬಿಟ್ಟು ಹೋಗಬೇಡ ಎಂದು ಗೋಗರೆದಿದ್ದಾನೆ. ಪ್ರಿಯಕರನ ಕಣ್ಣೀರಿಗೆ ಕರಗಿ ವಧು, ಮಾಂಗಲ್ಯ ಕಟ್ಟಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾಳೆ.
ಈ ಎಲ್ಲಾ ಘಟನೆಗಳಿಂದ ಕೆರಳಿದ ವಧುವಿನ ಕಡೆಯವರು, ವಧುವಿನ ಪ್ರಿಯಕರನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಮದುವೆ ಮಂಟಪದಲ್ಲಿನ ಗಲಾಟೆ ತಾರಕಕ್ಕೇರಿದಾಗ, ಸ್ಥಳದಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನೆಲಮಂಗಲ ಪೊಲೀಸರ ಭೇಟಿ ನೀಡಿ ಪ್ರಿಯಕರನನ್ನು ವಶಕ್ಕೆ ಪಡೆದಿದ್ದಾರೆ.
ಅಲ್ಲಿಗೆ, ಮದುವೆ ಕಾರ್ಯಕ್ರಮ ರದ್ದಾಗಿದೆ. ಒಂದು ಕಡೆ ವರನ ಕಡೆಯವರು ತಲ್ಲೆತಗ್ಗಿಸುವಂತಾದರೆ, ಮಗಳ ಮದುವೆಯನ್ನು ಚೆನ್ನಾಗಿ ನಡೆಸಿಕೊಡಬೇಕು ಎನ್ನುವ ಹೆತ್ತವರ ಕನಸೂ ನುಚ್ಚುನೂರಾಗಿದೆ. ಲವ್ ಈಸ್ ಬ್ಲೈಂಡ್..












Click it and Unblock the Notifications