ಮಕ್ಕಳ ಮುಂದೆ ಪತ್ನಿಯನ್ನು ಇರಿದು ಕೊಂದ ಪತಿ

ಪತ್ನಿ ಕಾಂತಿಮಣಿ (32) ಕೊಲೆಯಾದ ಮಹಿಳೆ. ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುವ ತಿರುಮಲೇಶ ಅಲಿಯಾಸ್ ರಮೇಶ (37) ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಏನಿದು ಘಟನೆ: ಆಂಧ್ರಪ್ರದೇಶದ ಚಿತ್ತೂರಿನ ರಮೇಶ ಮದ್ಯವ್ಯಸನಿಯಾಗಿದ್ದು 10 ವರ್ಷಗಳ ಹಿಂದೆ ಕಾಂತಿಮಣಿಯನ್ನು ಮದುವೆಯಾಗಿ ಬೆಂಗಳೂರಿಗೆ ಬಂದಿದ್ದ. ಕೆಲ ದಿನಗಳಿಂದ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯ ಟ್ಯಾಂಕ್ ಬಂಡ್ ಪ್ರದೇಶದಲ್ಲಿ ವಾಸವಾಗಿದ್ದ. ದಂಪತಿಗೆ ಯುವರಾಜ (7) ಹಾಗೂ ಪುನೀತ (3) ಇಬ್ಬರು ಮಕ್ಕಳಿದ್ದಾರೆ.
ಇತ್ತೀಚೆಗೆ ಪ್ರತಿ ದಿನ ಗಂಡ-ಹೆಂಡತಿ ನಡುವೆ ಜಗಳ ನಡೆದು ಹಲವು ಬಾರಿ ಸಂಬಂಧಿಕರು ರಾಜಿ ಸಂಧಾನ ನಡೆಸಿದ್ದರು. ಆದರೂ ರಮೇಶ ಕೆಲಸಕ್ಕೆ ಹೋಗಿ ಬರುವಾಗ ಮದ್ಯ ಸೇವಿಸಿ ಮನೆಗೆ ಬಂದು ಗಲಾಟೆ ಮಾಡುವ ಚಾಳಿ ಮುಂದುವರೆಸಿದ್ದ. ಮಂಗಳವಾರ ರಾತ್ರಿ ಜಗಳ ನಡೆದು ಮಕ್ಕಳ ಮುಂದೆಯೇ ರಮೇಶ ಅಡಿಗೆ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿಯ ಹೊಟ್ಟೆ ಹಾಗೂ ಎದೆಗೆ ಇರಿದಿದ್ದಾನೆ.
ಕಾಂತಿಮಣಿ ಅವರು ನೋವಿನಿಂದ ಕಿರುಚಿಕೊಂಡು ಹೊರಗೆ ಓಡಿ ಬರಲು ಪ್ರಯತ್ನಿಸಿದಾಗ ಮಕ್ಕಳೂ ಸಹ ಅಳುತ್ತಾ ಹೊರಗೆ ಬಂದಿದ್ದಾರೆ. ನೆರೆಹೊರೆಯವರು ಸೇರಿದ್ದನ್ನು ನೋಡಿ ರಮೇಶ ಅದೇ ಚಾಕುವಿನಿಂದ ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ತಕ್ಷಣ ಅವರಿಬ್ಬರನ್ನು ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಿದ್ದಾರೆ. ಚಿಕಿತ್ಸೆಗೆ ಫಲಕಾರಿಯಾಗದೆ ಕಾಂತಿಮಣಿ ಸಾವನ್ನಪ್ಪಿದ್ದರೆ, ರಮೇಶನ ಸ್ಥಿತಿಯೂ ಕೂಡ ಚಿಂತಾಜನಕವಾಗಿದೆ.












Click it and Unblock the Notifications