BBMP Election: ನವೆಂಬರ್ 1ಕ್ಕೆ ವಾರ್ಡ್ ಮರುವಿಂಗಡಣೆ; ಬಿಬಿಎಂಪಿ ಚುನಾವಣೆ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಆಗಸ್ಟ್ 22: ಪಾಲಿಕೆ ಚುನಾವಣೆಗೆ ಸಿದ್ಧತೆ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ನವೆಂಬರ್ 1ರ ವೇಳೆಗೆ ವಾರ್ಡ್ ಮರುವಿಂಗಡಣೆ ಪ್ರಕ್ರಿಯೆ ನಡೆಯಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಟಿ.ಎನ್ ಜವರಾಯಿ ಗೌಡ ಅವರು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ 2024ರ ಜಾರಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು ಮಾತನಾಡಿ, 15-5-2025ರಂದು ಜಿಬಿಎ ಕಾಯ್ದೆ ಜಾರಿ ಮಾಡಲಾಗಿದ್ದು, ಬಿಬಿಎಂಪಿ ವ್ಯಾಪ್ತಿ ಪ್ರದೇಶವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿ ಎಂದು ಘೋಷಣೆ ಮಾಡಿದ್ದು, 19-07-2025ರಂದು ಐದು ಪಾಲಿಕೆ ರಚಿಸಲಾಗಿದೆ. 18-08-2025ರ ವರೆಗೂ ಒಂದು ತಿಂಗಳ ಕಾಲ ಆಕ್ಷೇಪ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ದಾಸರಹಳ್ಳಿ, ಆರ್ ಆರ್ ನಗರ, ಪದ್ಮನಾಭ ನಗರ, ಮಹದೇವಪುರ, ಯಶವಂತಪುರ ಕೆಲವು ವಿಧಾನಸಭಾ ಕ್ಷೇತ್ರಗಳು ಭಾಗ ಆಗಿವೆ ನಿಜ. ಇನ್ನು ಕೆಲವು ಪ್ರದೇಶಗಳನ್ನು ಮುಂದಿನ ದಿನಗಳಲ್ಲಿ ಸೇರಿಸಬೇಕಿದೆ ಎಂದು ತಿಳಿಸಿದರು.

ವಾರ್ಡ್ ಗಳ ಪುನರ್ ವಿಂಗಡಣೆ 01-11-2025ಕ್ಕೆ ನಡೆಯಲಿದೆ. ಇದಕ್ಕಾಗಿ ಪಾಲಿಕೆಯಲ್ಲಿ ಆಯುಕ್ತರ ನೇತೃತ್ವದ ಪ್ರತ್ಯೇಕ ತಂಡ ಇದೆ. ನಾವು ನ್ಯಾಯಾಲಯಕ್ಕೆ ಕಾಲ ಮಿತಿಯಲ್ಲಿ ಅಫಿಡವಿಟ್ ಸಲ್ಲಿಸಿದ್ದೇವೆ. ಇನ್ನು ವಾರ್ಡ್ ಗಳ ರಚನೆ ಬಗ್ಗೆ ಪುನರ್ ವಿಂಗಡಣೆ ಬಳಿಕ ಅಧಿಸೂಚನೆ ಹೊರಡಿಸಲಾಗುವುದು ಎಂದು ವಿವರಿಸಿದರು. ಆದಷ್ಟು ಬೇಗ ಚುನಾವಣೆ ನಡೆಸಿ ಎಂದು ಸದಸ್ಯರ ಮನವಿಗೆ ಸ್ಪಂದಿಸಿದ ಸಚಿವರು, ಮಾನ್ಯ ಸದಸ್ಯರ ಸಲಹೆಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇವೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಗ್ರೇಟರ್ ಬೆಂಗಳೂರು ವಿಧೇಯಕ; ವಿಧಾನ ಪರಿಷತ್ತಿನಲ್ಲೂ ಅಂಗೀಕಾರ
ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ ಗುರುವಾರ ಅಂಗೀಕಾರ ದೊರೆಯಿತು. ವಿಧಾನಸಭೆಯಲ್ಲಿ ಅಂಗೀಕೃತ ಸ್ವರೂಪದಲ್ಲಿರುವ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025' ಅನ್ನು ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮೇಲ್ಮನೆಯಲ್ಲಿ ಮಂಡಿಸಿದರು. ಅಲ್ಪಚರ್ಚೆ ಬಳಿಕ ಅನುಮೋದನೆ ನೀಡಲಾಯಿತು.
ತಿದ್ದುಪಡಿ ವಿಧೇಯಕದ ಪ್ರಸ್ತಾವನೆ ವೇಳೆ ಮಾತನಾಡಿದ ಶಿವಕುಮಾರ್ ಅವರು, ಈ ವಿಧೇಯಕದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಂವಿಧಾನದ 74ನೇ ತಿದ್ದುಪಡಿ ಅಡಿಯಲ್ಲಿ ಬರುವ ಪಾಲಿಕೆಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ. ಭವಿಷ್ಯದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಈ ತಿದ್ದುಪಡಿಯಲ್ಲಿ ಜಿಬಿಎ ಪಾಲಿಕೆಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಸ್ಪಷ್ಟನೆ ನೀಡಲಾಗಿದೆಎಂದು ತಿಳಿಸಿದರು.
ಸದಸ್ಯರಾದ ಗೋವಿಂದರಾಜು, ಟಿ.ಎ ಶರವಣ, ಹೆಚ್.ಎಸ್ ಗೋಪಿನಾಥ್ ಅವರು ಕೋರಿದ ಸ್ಪಷ್ಟನೆಗೆ ಉತ್ತರ ನೀಡಿದ ಸಚಿವರು, ನಾವು ಅನೇಕ ಬಾರಿ ನೋಡಿರುವಂತೆ ರಾಜ್ಯ ಸರ್ಕಾರ ಒಂದು ಪಕ್ಷ ಅಧಿಕಾರದಲ್ಲಿದ್ದರೆ, ಪಾಲಿಕೆಯಲ್ಲಿ ಮತ್ತೊಂದು ಪಕ್ಷ ಅಧಿಕಾರದಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ಸಂವಿಧಾನದ 74ನೇ ತಿದ್ದುಪಡಿಗೆ ಧಕ್ಕೆಯಾಗದಂತೆ ಹಾಗೂ ರಾಜ್ಯ ಸರ್ಕಾರ ಪಾಲಿಕೆಗಳನ್ನು ನಿಯಂತ್ರಿಸುವಂತಾಗದಂತೆ ಎಚ್ಚರಿಕೆ ವಹಿಸಲು ಈ ತಿದ್ದುಪಡಿ ತರಲಾಗಿದೆ ಎಂದರು.
ಕೆಲವು ಶಾಸಕರು ಜನಸಂಖ್ಯೆ ಹಾಗೂ ವಾರ್ಡ್ ರಚನೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈಗ ನಾವು ಬಳಸಿರುವುದು 2011ರ ಜನಗಣತಿ. ಆಗ ಒಂದು ವಾರ್ಡ್ ನಲ್ಲಿ 18 ಸಾವಿರ ಜನಸಂಖ್ಯೆ ಇದ್ದರೆ ಈಗಿನ ಪರಿಸ್ಥಿತಿಯಲ್ಲಿ 30 ಸಾವಿರದಷ್ಟು ಇರಲಿದೆ. ಮುಂದೆ ಹೊಸ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಯಲ್ಲಿ ಒಳಪಡಿಸುವ ಸಂದರ್ಭದಲ್ಲಿ ನಿಮ್ಮ ಪಕ್ಷದ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು. ಈ ವಿಚಾರವನ್ನು ಬೇರೆ ರೂಪದಲ್ಲಿ ಚರ್ಚೆಗೆ ಪ್ರಸ್ತಾವನೆ ನೀಡಿ, ಆಗ ಈ ವಿಚಾರವಾಗಿ ನಿಮಗಿರುವ ಅನುಮಾನಗಳಿಗೆ ಸಂಪೂರ್ಣವಾಗಿ ವಿವರಣೆ ನೀಡುತ್ತೇನೆ. ಈಗ ಈ ವಿಧೇಯಕ ಅಂಗೀಕಾರ ಮಾಡಿಕೊಡಿ ಎಂದು ತಿಳಿಸಿದರು.












Click it and Unblock the Notifications