ಬೆಂಗಳೂರಲ್ಲಿ 600 ಎಕರೆಯಲ್ಲಿ ಇಂಡಸ್ಟ್ರಿಯಲ್ ಪಾರ್ಕ್, ಯೋಜನೆ ವಿವರಗಳು
ಬೆಂಗಳೂರು, ಡಿಸೆಂಬರ್ 12: ಬೆಂಗಳೂರು ನಗರದ ಹೊರ ವಲಯಕ್ಕೆ ಕೈಗಾರಿಕೆಗಳನ್ನು ಸ್ಥಳಾಂತರಗೊಳಿಸಬೇಕು ಎಂಬ ಚರ್ಚೆ ಸದಾ ನಡೆಯುತ್ತಲೇ ಇರುತ್ತದೆ. ನಗರದಲ್ಲಿ ಸಂಚಾರ ದಟ್ಟಣೆ ಸೇರಿ ಹಲವು ಸಮಸ್ಯೆಗಳಿವೆ. ಇವುಗಳನ್ನು ಪರಿಹಾರ ಮಾಡಲು ಹೊರ ವಲಯದಲ್ಲಿ ಕೈಗಾರಿಕೆ ಸ್ಥಾಪಿಸಬೇಕು ಎಂಬ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಈಗ ಸರ್ಕಾರ ಕ್ರಮವೊಂದನ್ನು ಕೈಗೊಂಡಿದ್ದು, ಸುಮಾರು 647.69 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್ ನಿರ್ಮಾಣ ಮಾಡಲು ಮುಂದಾಗಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸರ್ಜಾಪುರದಲ್ಲಿ ಬೃಹತ್ ಕೈಗಾರಿಕಾ ಪಾರ್ಕ್ ನಿರ್ಮಾಣ ಮಾಡಲಿದೆ. ಇದಕ್ಕಾಗಿ ವಿಸ್ತೃತ ಯೋಜನಾ ವರದಿಯನ್ನು ತಯಾರು ಮಾಡಲು ಕೆಐಎಡಿಬಿ ಆಸಕ್ತ, ಪರಿಣಿತಿ ಹೊಂದಿದ ಸಂಸ್ಥೆಗಳಿಂದ ಟೆಂಡರ್ ಆಹ್ವಾನಿಸಿದೆ.

ಸರ್ಜಾಪುರ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 647.69 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ಪಾರ್ಕ್ ನಗರದ ಹೊಸ ಕೈಗಾರಿಕಾ ಝೋನ್ ಆಗಲಿದೆ ಎಂದು ಅಂದಾಜಿಸಲಾಗಿದೆ. ಡಿಪಿಆರ್‌ನಲ್ಲಿ ಆರ್ಥಿಕ ಚಟುವಟಿಕೆ, ಸಮೀಕ್ಷೆ, ಲೇಔಟ್ ನಿರ್ಮಾಣ, ವಿನ್ಯಾಸ, ವೆಚ್ಚ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿವರವಾದ ವರದಿ ತಯಾರು ಮಾಡಲಾಗುತ್ತದೆ.
ರಾಜ್ಯ ಸರ್ಕಾರದ ಯೋಜನೆ: ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್‌ನ ಐಟಿ ಹಬ್ ಮಾದರಿಯಲ್ಲಿ ರಾಜ್ಯ ಸರ್ಕಾರ ಸರ್ಜಾಪುರದಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪನೆಗೆ ಚಿಂತನೆ ನಡೆಸಿ, ಡಿಪಿಆರ್ ತಯಾರಿಕೆ ಹೆಜ್ಜೆ ಇಟ್ಟಿದೆ. ಈ ಯೋಜನೆಗೆ ಅಂದಾಜು 1050 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದ್ದು, ಇದರ ಭೂ ಸ್ವಾಧೀನದ ಉಸ್ತುವಾರಿಯನ್ನು ಕೆಐಎಡಿಬಿಗೆ ನೀಡಲಾಗಿದೆ.
ಬೆಂಗಳೂರು ನಗರದೊಳಗಿನ ಒತ್ತಡವನ್ನು ಕಡಿಮೆ ಮಾಡಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯಲ್ಲಿ ಈ ಯೋಜನೆ ಜಾರಿಯಾಗಲಿದ್ದು, ಸದ್ಯ ಇನ್ನೂ ಪ್ರಸ್ತಾವನೆಯ ಹಂತದಲ್ಲಿದೆ. ಬಿಕ್ಕನಹಳ್ಳಿ, ಎಸ್ ಮಾದೇಹಳ್ಳಿ, ಆಡಿಗರ ಕಲ್ಲಹಳ್ಳಿ, ಅಮಾನಿಕೆರೆ ಸೇರಿದಂತೆ ವಿವಿಧ ಗ್ರಾಮಗಳು ಈ ವ್ಯಾಪ್ತಿಯಲ್ಲಿ ಬರಲಿವೆ.
6 ಗ್ರಾಮಗಳಿಗೆ ಸೇರಿದ ಸ್ವಾಧೀನಪಡಿಸಿಕೊಂಡಿರುವ ಸುಮಾರು 647 ಎಕರೆ ಭೂಮಿ ಈಗಾಗಲೇ ಕೆಐಎಡಿಬಿಯ ಬಳಿ ಇದೆ. ಇನ್ನೂ ಅಗತ್ಯವಿರುವ ಭೂಮಿಯನ್ನು ಈ ಯೋಜನೆಗಾಗಿ ಸ್ವಾಧೀನ ಮಾಡಿಕೊಳ್ಳಬೇಕಿದೆ. ಇದಕ್ಕಾಗಿ ಪ್ರಾಥಮಿಕಾ ಅಧಿಸೂಚನೆಯನ್ನು ಸಿದ್ಧಗೊಳಿಸಲಾಗುತ್ತಿದೆ. ಸಾರ್ವಜನಿಕ ಉದ್ದೇಶಗಳಿಗಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಜಾರಿಗೊಳಿಸಿರುವ ಭೂ ಸ್ವಾಧೀನ ಕಾಯಿದೆ 2013ರ ನಿಯಮದಂತೆ ಈ ಯೋಜನೆಗೆ ಭೂಮಿ ನೀಡಿದವರಿಗೆ ಪರಿಹಾರ ನೀಡಲು ತೀರ್ಮಾನಿಸಲಾಗಿದೆ.
ಕರ್ನಾಟಕ ಸರ್ಕಾರ ಬೆಂಗಳೂರಲ್ಲಿ ಸ್ಟಾರ್ಟ್ ಅಪ್ ಉತ್ತೇಜನಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಕೈಗಾರಿಕಾ ಪಾರ್ಕ್ ಅನ್ನು ಸಹ ಇದಕ್ಕೆ ಅನುಕೂಲವಾಗುವಂತೆ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ಕೃತಕ ಬುದ್ಧಿಮತ್ತೆ, ಆರ್ಥಿಕತೆ, ತಂತ್ರಜ್ಞಾನ ಕ್ಷೇತ್ರದ ಕೈಗಾರಿಕೆಗಳು ಈ ಪಾರ್ಕ್‌ನಲ್ಲಿ ಘಟಕಗಳನ್ನು ತೆರೆಯಲು ಅನುಕೂಲ ಮಾಡಿಕೊಡಲಾಗುತ್ತದೆ.
ಕೆಐಎಡಿಬಿ ಈಗಾಗಲೇ ದೇವನಹಳ್ಳಿ, ದೊಡ್ಡಬಳ್ಳಾಪುರದಲ್ಲಿ ಕೈಗಾರಿಕಾ ಪಾರ್ಕ್ ನಿರ್ಮಾಣ ಮಾಡುವಾಗ ಭೂಮಿ ನೀಡಿದ ರೈತರಿಗೆ ಅಭಿವೃದ್ಧಿಗೊಳಿಸಿದ ನಿವೇಶನಗಳನ್ನು ನೀಡಲಾಗಿದೆ. ಇದೇ ಮಾದರಿಯಲ್ಲಿ ಸರ್ಜಾಪುರದಲ್ಲಿಯೂ ನೀಡಲು ತೀರ್ಮಾನಿಸಲಾಗಿದೆ.












Click it and Unblock the Notifications