Kumba Mela 2025: ಕರ್ನಾಟಕದ ತ್ರಿವೇಣಿ ಸಂಗಮದಲ್ಲಿ 3 ದಿನ ಕುಂಭಮೇಳ 2025, ಯಾವಾಗ? ಎಲ್ಲಿ?
ಬೆಂಗಳೂರು, ಜನವರಿ 20: ಭಾರತ ಸೇರಿದಂತೆ ದೇಶ ವಿದೇಶಗಳಲ್ಲಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ 'ಮಹಾ ಕುಂಭ ಮೇಳ 2025' ಕುರಿತೆ ಚರ್ಚೆಗಳು ನಡೆಯುತ್ತಿವೆ. ಪ್ರಯಾಗ್‌ರಾಜ್‌ಗೆ ಅನೇಕ ರಾಜಕಾರಣಿಗಳು, ಸಲೆಬ್ರೆಟಿಗಳು ಭೇಟಿ ನೀಡುತ್ತಿದ್ದಾರೆ. ಈ ಮಧ್ಯೆ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದಲ್ಲಿ ಮೂರು ದಿನ ನಡೆಯಲಿರುವ ಕುಂಭಮೇಳಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಹೌದು, ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಮುಂದಿನ ತಿಂಗಳಿನಿಂದ ಮೂರು ದಿನ ಕುಂಭ ಮೇಳ ಹಮ್ಮಿಕೊಳ್ಳಲಾಗಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಈ ಕುಂಭ ಮೇಳ ನಡೆಯುತ್ತದೆ. ಟಿ. ನರಸೀಪುರದ ತ್ರಿವೇಣಿ ಸಂಗಮದಲ್ಲಿ ಫೆಬ್ರವರಿ 10ರಿಂದ 12ರವರೆಗೆ ವಿಶೇಷವಾದ ಕುಂಭ ಮೇಳ 2025 ಹಮ್ಮಿಕೊಳ್ಳಲಾಗಿದೆ. ಭಕ್ತಾಧಿಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ತಿಳಿಸಿದರು.

ಕುಂಭ ಮೇಳ 2025 ಆಚರಣೆ ಸಂಬಂಧಿಸಿದಂತೆ ಭಾನುವಾರ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಫೆಬ್ರವರಿ 10ರಿಂದ ಮೂರು ದಿನ ಕುಂಭ ನಡೆಯಲಿದ್ದು, ಎಲ್ಲ ಸೌಕರ್ಯಗಳನ್ನು ಒದಗಿಸಬೇಕು. ಅಚ್ಚುಕಟ್ಟಾಗಿ ಸುವ್ಯವಸ್ಥಿತವಾಗಿ ನಡೆಯುವಂತೆ ಮಾಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸದಿರು.
ಕುಂಭಮೇಳದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸ್ವಚ್ಛತೆ ಕಾಪಾಡುವ ಜೊತೆಗೆ ಪ್ಲಾಸ್ಟಿಕ್ ಮುಕ್ತ ಪ್ರದೇಶವೆಂದು ಘೋಷಣೆ ಮಾಡಬೇಕು. ಇಲ್ಲಿಗೆ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಆ ಭಕ್ತಾಧಿಗಳಿಗೆ ಕುಡಿಯುವ ನಿರೀನ ವ್ಯವಸ್ಥೇ, ಪಾರ್ಕಿಂಗ್ ವ್ಯವಸ್ಥೆ, ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಬೇಕು.
ಇದೇ ಸಭೆಯಲ್ಲಿದ್ದ ವಿಧಾನಪರಿಷತ್ ಸದಸ್ಯ ಯತೀಂದ್ರ ಅವರು ಮಾತನಾಡಿ, ಮೂರು ದಿನವು ಈ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ಪ್ರಯುಕ್ತ ಸಾಕಷ್ಟು ಕಾರ್ಯಕ್ರಮಗಳು ನಡೆಯಲಿವೆ. ಫೆಬ್ರವರಿ 11ರಂದು ವಿಶೇಷ ಕಾವೇರಿ ಆರತಿ ಕಾರ್ಯಕ್ರಮ ನಡೆಯುತ್ತದೆ. ಕುಂಭ ಮೇಳಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
ವಾಹನ ಪಾರ್ಕಿಂಗ್ಯ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಭಕ್ತರಿಗಾಗಿ ಇರುವ ಉಚಿತ ಅನ್ನದಾನ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಅಗ್ನಿ ಅವಘಡ ಸೇರಿದಂತೆ ಯಾವುದೇ ಅನಾಹುತ, ಅಹಿಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕುಂಭ ಮೇಳದ ಇತಿಹಾರ, ಮೊದಲ ಆಚರಣೆ
ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯೂ ಪ್ರತಿ ಮೂರು ವರ್ಷಕ್ಕೊಮ್ಮೆ ಕುಂಭ ಮೇಳಕ್ಕೆ ಸಾಕ್ಷಿಯಾಗುತ್ತದೆ. ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಮೊದಲ ಬಾರಿಗೆ 1989ರಲ್ಲಿ ಕುಂಭಮೇಳ ನಡೆಯಿತು. ಅಲ್ಲಿಂದ ಪ್ರತಿ ಮೂರು ವರ್ಷಕ್ಕೆ ಒಮ್ಮೆಯಂತೆ ಕುಂಭ ಮೇಳ ನಡೆಯುತ್ತಾ ಬಂದಿದೆ.
ಕಡೆಯದಾಗಿ 2019ರಲ್ಲಿ ಈ ಜಾಗದಲ್ಲಿ ಕುಂಭ ಮೇಳ ನಡೆದಿತ್ತು. ಅದಾದ ಬಳಿಕ ಮೂರು ವರ್ಷ ಅಂದರಲ್ಲಿ 2022ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಭೀತಿ ಕಾರಣದಿಂದಾಗಿ ಕುಂಭ ಮೇಳ ನಡೆಯಲಿಲ್ಲ. ಇದೀಗ ಆರೋಗ್ಯಕರ ವಾತಾವರಣ ಇರುವ ಪ್ರಯುಕ್ತ ಕುಂಭ ಮೇಳ ಹಮ್ಮಿಕೊಳ್ಳಲಾಗಿದೆ. ನದಿಯಲ್ಲಿ ನೀರು ಸಾಕಷ್ಟಿದ್ದು, ಈ ಹಿನ್ನೆಲೆಯಲ್ಲಿ ಐದು ಕಡೆಗಳಲ್ಲಿ ಕುಂಭ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಜಿ.ಲಕ್ಷ್ಮೀ ಕಾಂತ ಮಾಹಿತಿ ನೀಡಿದರು.












Click it and Unblock the Notifications