ಬಿಬಿಎಂಪಿ 1 ರು ಶುಲ್ಕ ಸಂಗ್ರಹ ರದ್ದುಪಡಿಸಿದ ಹೈಕೋರ್ಟ್
ಬೆಂಗಳೂರು, ಆಗಸ್ಟ್ 11: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ತನ್ನ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಚಟುವಟಿಕೆಗಳಿಂದ ಪಡೆಯುತ್ತಿದ್ದ ವಿವಿಧ ಶುಲ್ಕ ಸಂಗ್ರಹಕ್ಕೆ ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
''ನೆಲ ಬಾಡಿಗೆ, ಪರವಾನಗಿ ಶುಲ್ಕ, ಕಟ್ಟಡ ನಿರ್ಮಾಣ ಲೈಸನ್ಸ್ ಶುಲ್ಕ, ಪರಿಶೀಲನಾ ಶುಲ್ಕ ಮತ್ತು ಭದ್ರತಾ ಠೇವಣಿಗಳನ್ನು ಬಿಬಿಎಂಪಿ ಪಡೆಯುತ್ತಿತ್ತು. ಆದರೆ, ಬಿಬಿಎಂಪಿಗೆ ಈ ಅಧಿಕಾರವೇ ಇಲ್ಲ'' ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ.
ಬಿಬಿಎಂಪಿ ಆಡಳಿತವು ಕಟ್ಟಡ ಬೈಲಾ ಅಡಿಯಲ್ಲಿ ಹಲವು ಬಗೆಯ ಶುಲ್ಕ ವಿಧಿಸುತ್ತಿರುವುದನ್ನು ಪ್ರಶ್ನಿಸಿ ಸುಂದರ ಶೆಟ್ಟಿ ಸೇರಿದಂತೆ ಹಲವರು ಮನವಿಗಳನ್ನು ಸಲ್ಲಿಸಿದ್ದರು. ಎಲ್ಲಾ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ನಡೆಸಿ, ಎಲ್ಲಾ ಶುಲ್ಕಗಳನ್ನು ರದ್ದು ಮಾಡಿ ತೀರ್ಪು ಹೊರಡಿಸಿದೆ.

ಇದಲ್ಲದೆ, ''ಈಗಾಗಲೇ ಶುಲ್ಕ ಪಾವತಿಸಿರುವ ಎಲ್ಲ ಅರ್ಜಿದಾರಿಗೆ ಶುಲ್ಕ ಮೊತ್ತವನ್ನು ಮರು ಪಾವತಿ ಮಾಡಬೇಕು. ಶುಲ್ಕ ಮರುಪಾವತಿಗೆ ಅರ್ಜಿದಾರರು ಮನವಿ ಸಲ್ಲಿಸಿದರೆ 12 ವಾರಗಳಲ್ಲಿ ಅಗತ್ಯ ಆದೇಶಗಳನ್ನು ಹೊರಡಿಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು,'' ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
''ಕರ್ನಾಟಕ ನಗರಾಡಳಿತ (ಕೆಎಂಸಿ) ಕಾಯಿದೆ ಅಥವಾ ನಿಯಮಗಳಿಗೆ ಸೂಕ್ತವಾದ ತಿದ್ದುಪಡಿಗಳನ್ನು ತಂದು ಕಾಯಿದೆಯ ನಿಬಂಧನೆಯಲ್ಲಿ ಆಕ್ಷೇಪಾರ್ಹವಾದ ಶುಲ್ಕಗಳನ್ನು ಸೇರಿಸಲು ರಾಜ್ಯ ಸರ್ಕಾರ ಅಥವಾ ಬಿಬಿಎಂಪಿಯನ್ನು ನಿರ್ಬಂಧಿಸಿಲ್ಲ,ಬಿಎಂಪಿ ಕಟ್ಟಡ ಬೈಲಾ ಪ್ರಕಾರ ವಿಧಿಸುತ್ತಿರುವ ಶುಲ್ಕಗಳು ಕೆಎಂಸಿ ಕಾಯಿದೆಗೆ ವಿರುದ್ಧವಾಗಿವೆ. ಕಾನೂನಿನ ಅನುಮತಿ ಇಲ್ಲದೆ ಸಾರ್ವಜನಿಕರಿಂದ ಒಂದು ರೂಪಾಯಿ ಶುಲ್ಕ ಸಂಗ್ರಹಿಸುವುದಕ್ಕೂ ಅವಕಾಶವಿಲ್ಲ,'' ಎಂದು ನ್ಯಾಯಪೀಠ ಹೇಳಿದೆ.

''ಕೆಎಂಸಿ ಕಾಯಿದೆಯ ಅಡಿಯಲ್ಲಿ ಸಂಗ್ರಹಿಸಲು ಅವಕಾಶ ಮಾಡಲಾಗಿರುವ ಶುಲ್ಕಗಳನ್ನು ಮಾತ್ರ ಸಂಗ್ರಹಿಸಬಹುದಾಗಿದೆ. ಕೆಎಂಸಿ ಕಾಯಿದೆಯ ಸೆಕ್ಷನ್ 295 ಮತ್ತು 423ರ ಅಡಿಯಲ್ಲಿ ಕಟ್ಟಡ ಬೈಲಾ ರಚಿಸಲು ಅವಕಾಶವಿದೆ. ಈ ಎರಡೂ ಸೆಕ್ಷನ್‌ಗಳು ಜನರ ಮೇಲೆ ಹೊಸ ಬಗೆಯ ಶುಲ್ಕ ಹೇರುವ ಅಧಿಕಾರವನ್ನು ಪಾಲಿಕೆಗೆ ನೀಡಿಲ್ಲ,'' ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.
''ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಆಧರಿಸಿ ಶುಲ್ಕ ವಿಧಿಸುವ ಪದ್ಧತಿಯು ಸೇಚ್ಛೆಯ ತೀರ್ಮಾನವಾಗಿದ್ದು, ಇದು ಸಂವಿಧಾನದ 14ನೇ ವಿಧಿಗೆ ವಿರುದ್ಧವಾಗಿದೆ. ಮಾರ್ಗಸೂಚಿ ದರದ ಆಧಾರದಲ್ಲಿ ಶುಲ್ಕ ವಿಧಿಸುವ ವ್ಯವಸ್ಥೆಯು ಸಾರ್ವಜನಿಕರ ರಕ್ತ ಹೀರುವುದಕ್ಕೆ ಎಡೆಮಾಡಿಕೊಡುತ್ತದೆ,'' ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದಕ್ಕೆ ಪ್ರತಿಯಾಗಿ ಬಿಬಿಎಂಪಿ ಪರ ವಕೀಲ ವಿ ಶ್ರೀನಿಧಿ, ''ಬಿಬಿಎಂಪಿ ಕೇಳುತ್ತಿರುವುದು ತೆರಿಗೆ ಎಂದು ಅರ್ಜಿದಾರರು ತಪ್ಪಾಗಿ ಭಾವಿಸಿ ಮನವಿಗಳನ್ನು ಸಲ್ಲಿಸಿದ್ದಾರೆ. ಬೈಲಾದಲ್ಲಿ ಬಿಬಿಎಂಪಿಗೆ ನೀಡಲಾಗಿರುವ ಅಧಿಕಾರ ಬಳಸಿ ಶುಲ್ಕ ವಿಧಿಸಲಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಸಾಗಿಸುವ ಸಾಮಗ್ರಿಗಳನ್ನು ನಗರದ ರಸ್ತೆಗಳಲ್ಲಿ ಸಾಗಿಸಲಾಗುತ್ತದೆ. ಈ ರಸ್ತೆಗಳ ನಿರ್ವಹಣೆಗಾಗಿ ಶುಲ್ಕ ಸಂಗ್ರಹಿಸಲಾಗುತ್ತದೆ. ಇದನ್ನು ಅಸಮರ್ಥನೀಯ ಎನ್ನಲಾಗದು. ಕಟ್ಟಡ ನಿರ್ಮಾಣಕ್ಕೆ ಸಂಗ್ರಹಿಸಲಾದ ಸಾಮಗ್ರಿಗಳನ್ನು ರಸ್ತೆಯಲ್ಲಿಯೇ ಇಡಲಾಗಿರುತ್ತದೆ ಎಂಬುದನ್ನು ಗಮನಿಸಬೇಕು,'' ಎಂದು ಶುಲ್ಕ ವಿಧಿಸಿದ್ದನ್ನು ಸಮರ್ಥಿಸಿದ್ದರು.
ಕೆರೆ ಪುನರುಜ್ಜೀವನ ಶುಲ್ಕ ಕೂಡಾ ರದ್ದು:
ಕಾರ್ಮಿಕ ಕಲ್ಯಾಣ ಸೆಸ್ ಸಂಗ್ರಹವನ್ನು ಊರ್ಜಿತಗೊಳಿಸಿರುವ ಪೀಠವು ಈ ಶುಲ್ಕವನ್ನು ಮುಂಗಡವಾಗಿ ಪಾವತಿಸುವಂತೆ 2007ರ ಜನವರಿ 18 ಮತ್ತು ಫೆಬ್ರುವರಿ 28ರಂದು ಹೊರಡಿಸಿದ್ದ ಆದೇಶಗಳನ್ನು ರದ್ದು ಮಾಡಿದೆ.
''ಕೆರೆ ಪುನರುಜ್ಜೀವನ ಶುಲ್ಕ ವಿಧಿಸಲು 2017ರ ಜನವರಿ 27 ಮತ್ತು ಮಾರ್ಚ್ 30ರಂದು ಬಿಬಿಎಂಪಿ ಹೊರಡಿಸಿದ್ದ ಸುತ್ತೋಲೆಗಳನ್ನೂ ನ್ಯಾಯಾಲಯ ರದ್ದುಗೊಳಿಸಿದೆ. ನಗರ ಯೋಜನೆ ಕಾಯಿದೆಯ ಪ್ರಕಾರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಂಥ ಯೋಜನಾ ಪ್ರಾಧಿಕಾರಗಳಿಗೆ ಮಾತ್ರ ಅಂತಹ ಶುಲ್ಕ ಸಂಗ್ರಹಿಸುವ ಅವಕಾಶವಿದೆ,'' ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲೆ ನಯನತಾರಾ, ''ಕಟ್ಟಡ ನಿರ್ಮಾಣ ಮಾಡುವವರಿಂದ ಅಭಿವೃದ್ಧಿ ಶುಲ್ಕ ಮತ್ತು ಕಾಂಪೌಂಡ್ ಶುಲ್ಕ ಮಾತ್ರ ಪಡೆಯಲು ಕಾನೂನಿನಲ್ಲಿ ಅನುಮತಿಸಲಾಗಿದೆ. ಉಳಿದಂತೆ ಆಕ್ಷೇಪಾರ್ಹವಾದ ಶುಲ್ಕಗಳು ಬಿಬಿಎಂಪಿಗೆ ನೀಡಲಾಗಿರುವ ಅಧಿಕಾರದ ದುರ್ಬಳಕೆ ಮತ್ತು ಕಾನೂನಿಗೆ ವಿರುದ್ಧವಾಗಿದೆ. ಇದು ಶುಲ್ಕವೋ ಅಥವಾ ತೆರಿಗೆಯೋ ಒಂದಕ್ಕೊಂದು ಸಂಬಂಧವಿಲ್ಲ. ಅಲ್ಲದೇ, ಆಕ್ಷೇಪಾರ್ಹವಾದ ಶುಲ್ಕಗಳು ಸಂವಿಧಾನದ 19(1)(ಜಿ) ವಿಧಿಯ ಉಲ್ಲಂಘನೆಯಾಗಿದೆ,'' ಎಂದು ವಾದಿಸಿದ್ದರು.(ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)












Click it and Unblock the Notifications